ನೆತನ್ಯಾಹು ಭಾಷಣ ಆರಂಭಿಸುತ್ತಿದ್ದಂತೆ ವಿಶ್ವಸಂಸ್ಥೆಯಲ್ಲಿ ಡಝನ್ ಗಟ್ಟಲೆ ಪ್ರತಿನಿಧಿಗಳಿಂದ ಸಭಾತ್ಯಾಗ
ಸಾಮಾನ್ಯ ಸಭೆಯಲ್ಲಿ ಚುನಾವಣಾ ಪ್ರಚಾರದ ಶೈಲಿಯಲ್ಲಿ ಭಾಷಣ ಮಾಡಿದ ಇಸ್ರೇಲ್ ಪ್ರಧಾನಿ

Photo: screengrab/x.com/GlobeEyeNews
ನ್ಯೂಯಾರ್ಕ್, ಸೆ.25: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಆರಂಭಿಸುತ್ತಿದ್ದಂತೆ ಡಝನ್ಗಟ್ಟಲೆ ದೇಶಗಳ ಪ್ರತಿನಿಧಿಗಳು ಸಭಾಂಗಣದಿಂದ ಹೊರನಡೆದು ಪ್ರತಿಭಟನೆ ವ್ಯಕ್ತಪಡಿಸಿದರು.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಗುರುವಾರ ವಿಶ್ವ ನಾಯಕರು ಸೇರಿದ್ದ ವೇಳೆ ನೆತನ್ಯಾಹು ವೇದಿಕೆ ಏರುತ್ತಿದ್ದಂತೆ ಹಲವು ದೇಶಗಳ ಅಧಿಕಾರಿಗಳು ಸಭಾಂಗಣದಿಂದ ಹೊರನಡೆದರು. ಇದನ್ನು ಪ್ರತಿಭಟನೆಯ ಸಂಕೇತವಾಗಿ ಪರಿಗಣಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ನೆತನ್ಯಾಹು, ಸಭಾತ್ಯಾಗ ಮಾಡಿದವರನ್ನು ‘ನೈತಿಕ ಹೇಡಿಗಳು’ ಎಂದು ಕರೆದರು. ಗ್ಯಾಲರಿಯಲ್ಲಿದ್ದ ಅವರ ಬೆಂಬಲಿಗರು ಹೀಬ್ರೂ ಭಾಷೆಯಲ್ಲಿ ‘ಇಸ್ರೇಲ್ ಜನರು ಜೀವಂತವಾಗಿದ್ದಾರೆ’ ಎಂದು ಘೋಷಣೆ ಕೂಗಿದರು.
ಗಾಝಾ ಯುದ್ಧದ ಹಿನ್ನೆಲೆಯಲ್ಲಿ ಇಸ್ರೇಲ್ ಎದುರಿಸುತ್ತಿರುವ ಅಂತರರಾಷ್ಟ್ರೀಯ ಟೀಕೆ ಮತ್ತು ಪ್ರತ್ಯೇಕತೆಯ ನಡುವೆಯೇ ನೆತನ್ಯಾಹು ಸುಮಾರು 40 ನಿಮಿಷಗಳ ಕಾಲ ಚುನಾವಣಾ ಪ್ರಚಾರದ ಶೈಲಿಯಲ್ಲಿ ಭಾಷಣ ಮಾಡಿದರು. ಇಸ್ರೇಲ್ ನ ಸಾರ್ವತ್ರಿಕ ಚುನಾವಣೆಗಳಿಗೆ ಐದು ವಾರಗಳಿಗಿಂತಲೂ ಕಡಿಮೆ ಸಮಯ ಇರುವ ಹಿನ್ನೆಲೆಯಲ್ಲಿ ಮಾಡಿದ ಈ ಭಾಷಣವನ್ನು ದೇಶದ ನಾಲ್ಕು ಪ್ರಮುಖ ಟಿವಿಗಳು ಸಂಜೆ ಪ್ರೈಮ್ಟೈಮ್ ನಲ್ಲಿ ನೇರ ಪ್ರಸಾರ ಮಾಡಿದವು.
ಮಮ್ದಾನಿ ವಿರುದ್ಧ ಕಿಡಿ
ತಮ್ಮನ್ನು ‘ಯುದ್ಧಾಪರಾಧಿ’ ಎಂದು ಕರೆದಿದ್ದ ನ್ಯೂಯಾರ್ಕ್ ಮೇಯರ್ ಝೊಹ್ರಾನ್ ಮಮ್ದಾನಿ ವಿರುದ್ಧ ನೆತನ್ಯಾಹು ತೀವ್ರ ವಾಗ್ದಾಳಿ ನಡೆಸಿದರು. ‘ಯಹೂದಿ–ವಿರೋಧಿ ಗುಂಪುಗಳ’ ಒತ್ತಡಕ್ಕೆ ಮಣಿದಿದ್ದಾರೆ ಎಂದು ಪಶ್ಚಿಮ ಯುರೋಪಿನ ನಾಯಕರನ್ನು ಟೀಕಿಸಿದರು. ಇಸ್ರೇಲ್ ವಿರುದ್ಧ ಸುಳ್ಳುಗಳನ್ನು ಹರಡುತ್ತಿದೆ ಎಂದು ಖತರ್ ಮತ್ತು ತುರ್ಕಿಯೆ ವಿರುದ್ಧವೂ ಆರೋಪ ಮಾಡಿದರು.
‘ನಾನು ಇಲ್ಲಿಗೆ ಬರುವುದನ್ನು ತಡೆಯಲು ನೀವು ಪ್ರಯತ್ನಿಸಿದ್ದೀರಿ. ನನ್ನ ಧ್ವನಿಯನ್ನು ಅಡಗಿಸಲು ಪ್ರಯತ್ನಿಸಿದ್ದೀರಿ. ಆದರೆ ನನ್ನ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ. ಸತ್ಯವನ್ನು ಅಡಗಿಸಲು ಸಾಧ್ಯವಿಲ್ಲ’ ಎಂದು ಮಮ್ದಾನಿ ಅವರನ್ನು ಉದ್ದೇಶಿಸಿ ಹೇಳಿದರು.
ಅಮೆರಿಕದ ಅತಿದೊಡ್ಡ ನಗರವಾದ ನ್ಯೂಯಾರ್ಕ್ ಗೆ ನೆತನ್ಯಾಹು ಭೇಟಿ ನೀಡಿದರೆ, ಆರೋಪಿತ ಯುದ್ಧಾಪರಾಧಗಳಿಗಾಗಿ ಅವರನ್ನು ಬಂಧಿಸುವುದಾಗಿ ಮಮ್ದಾನಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹೇಳಿದ್ದರು. ಆದರೆ ಬಳಿಕ, ಅಂತಹ ಕ್ರಮ ಕೈಗೊಳ್ಳಲು ತಮ್ಮ ಬಳಿ ಕಾನೂನು ಅಧಿಕಾರವಿಲ್ಲ ಎಂದು ನಿರ್ಧರಿಸಿದ್ದಾಗಿ ತಿಳಿಸಿದ್ದರು.
ಈ ವಾರ ಮಮ್ದಾನಿ ಅವರು ನೆತನ್ಯಾಹು ಅವರನ್ನು ‘ಫೆಲೆಸ್ತೀನಿಯನ್ನರ ವಿರುದ್ಧದ ಭೀಕರ ನರಮೇಧದ ರೂವಾರಿ’ ಎಂದು ಕರೆದಿದ್ದರು.
ಮಮ್ದಾನಿಯವರು ಜನವರಿಯಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ನ್ಯೂಯಾರ್ಕ್ ಗೆ ಭೇಟಿ ನೀಡಿದ ನೆತನ್ಯಾಹು, ‘ಇಲ್ಲಿ ಒಂದು ಸರಳ ಸತ್ಯವಿದೆ: ಇಸ್ರೇಲ್ ನರಮೇಧ ಎಸಗಿಲ್ಲ. ಇಸ್ರೇಲ್ ನರಮೇಧವನ್ನು ತಡೆಗಟ್ಟಿದೆ’ ಎಂದು ಹೇಳಿದರು. ಮಮ್ದಾನಿ ಅವರು ಹಮಾಸ್ ಬಂಡುಕೋರರನ್ನು ಬೆಂಬಲಿಸುತ್ತಿದ್ದಾರೆ ಎಂದು ನೆತನ್ಯಾಹು ಆರೋಪಿಸಿದರು.
‘ನನ್ನ ದೇಶ ಮತ್ತು ನಮ್ಮ ಧೀರ ಸೈನಿಕರ ಬಗ್ಗೆ ಇಂತಹ ಸುಳ್ಳುಗಳನ್ನು ಹರಡುವ ಎಲ್ಲರಿಗೂ, ಅವರು ಈ ಸಭಾಂಗಣದಲ್ಲಿ ಕುಳಿತಿರಲಿ ಅಥವಾ ನ್ಯೂಯಾರ್ಕ್ ನ ಯಹೂದಿ ವಿರೋಧಿ ಮೇಯರ್ ಕಚೇರಿಯಲ್ಲಿರಲಿ, ನಿಮಗೆ ನಾಚಿಕೆಯಾಗಲಿ’ ಎಂದು ನೆತನ್ಯಾಹು ಹೇಳಿದರು.
ನೆತನ್ಯಾಹು ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಮಮ್ದಾನಿ, ಪ್ರಧಾನಿ ತಮ್ಮ ಭಾಷಣವನ್ನು ಫೆಲೆಸ್ತೀನಿಯನ್ನರ ವಿರುದ್ಧದ ನರಮೇಧವನ್ನು ಸಮರ್ಥಿಸಿಕೊಳ್ಳಲು ಅಥವಾ ಮರೆಮಾಚಲು ಆಧಾರರಹಿತ ಸುಳ್ಳುಗಳನ್ನು ಪುನರಾವರ್ತಿಸಲು ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಯುದ್ಧಾಪರಾಧಗಳು ಮತ್ತು ಮಾನವೀಯತೆಯ ವಿರುದ್ಧದ ಅಪರಾಧಗಳ ಆರೋಪದ ಮೇರೆಗೆ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವು ನೆತನ್ಯಾಹು ವಿರುದ್ಧ ಬಂಧನ ವಾರಂಟ್ ಹೊರಡಿಸಿರುವ ಸತ್ಯವನ್ನು ಯಾವುದೇ ಸುಳ್ಳು ಬದಲಾಯಿಸಲು ಸಾಧ್ಯವಿಲ್ಲ ಎಂದು ಮಮ್ದಾನಿ ಹೇಳಿದರು.
ನೆತನ್ಯಾಹು ರಾಜಕೀಯ ಭವಿಷ್ಯಕ್ಕೆ ಸವಾಲು
ಇಸ್ರೇಲ್ ನಲ್ಲಿ ಸಾರ್ವತ್ರಿಕ ಚುನಾವಣೆಗಳಿಗೆ ಐದು ವಾರಗಳಿಗಿಂತ ಕಡಿಮೆ ಸಮಯ ಇರುವ ಸಂದರ್ಭದಲ್ಲಿ ನೆತನ್ಯಾಹು ವಿಶ್ವಸಂಸ್ಥೆಯಲ್ಲಿ ಸುಮಾರು 40 ನಿಮಿಷಗಳ ಕಾಲ ಭಾಷಣ ಮಾಡಿದರು. ಜನಮತಗಣನೆಗಳಲ್ಲಿ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಕಾಣಿಸುತ್ತಿರುವ ಹಿನ್ನೆಲೆಯಲ್ಲಿ ಅವರು ಇಸ್ರೇಲ್ ಏಳು ರಂಗಗಳಲ್ಲಿ ನಡೆಸುತ್ತಿರುವ ಹೋರಾಟದ ಬಗ್ಗೆ ವಿವರಿಸಿದರು.
ಇಸ್ರೇಲ್ನ ಅತ್ಯಂತ ದೀರ್ಘಾವಧಿಯ ಪ್ರಧಾನಿಯಾಗಿರುವ ನೆತನ್ಯಾಹು ಈ ಹಿಂದೆಯೂ ವಿಶ್ವಸಂಸ್ಥೆಯ ಭಾಷಣಗಳಲ್ಲಿ ದೃಶ್ಯ ಪ್ರದರ್ಶನಗಳನ್ನು ಬಳಸಿದ್ದರು. ಇರಾನ್ ನ ಪರಮಾಣು ಕಾರ್ಯಕ್ರಮದ ಬಗ್ಗೆ ಎಚ್ಚರಿಕೆ ನೀಡಲು ಚಾರ್ಟ್ ಗಳು, ರೇಖಾಚಿತ್ರಗಳು ಮತ್ತು ಇತರ ಆಧಾರಗಳನ್ನು ಪ್ರದರ್ಶಿಸಿದ್ದರು. ಆದರೆ ಇರಾನ್ ತನ್ನ ಪರಮಾಣು ಕಾರ್ಯಕ್ರಮ ನಾಗರಿಕ ಉದ್ದೇಶಗಳಿಗಾಗಿ ಎಂದು ಹೇಳುತ್ತ ಬಂದಿದೆ.
ಗುರುವಾರದ ಭಾಷಣದಲ್ಲಿ ಲೆಬನಾನ್ ನಲ್ಲಿ ಇರಾನ್ ಬೆಂಬಲಿತ ಹಿಜ್ಬುಲ್ಲಾ ಸದಸ್ಯರನ್ನು ದುರ್ಬಲಗೊಳಿಸಿದ ದಾಳಿಯನ್ನು ಉಲ್ಲೇಖಿಸುವಾಗ ಪೇಜರ್ ವೊಂದನ್ನು ಎತ್ತಿ ತೋರಿಸಿದರು. ಇರಾನಿನ ನಿಯೋಗಕ್ಕಾಗಿ ತಾವು ಹೊರಡಿಸಲಿದ್ದೇವೆ ಎಂದು ಹೇಳಿದ ಸ್ಟಾರ್ಲಿಂಕ್ ಉಪಗ್ರಹ ಇಂಟರ್ನೆಟ್ ರಿಸೀವರ್ನ್ನೂ ಪ್ರದರ್ಶಿಸಿದರು.
‘‘ಮುಂದೊಂದು ದಿನ ಇರಾನ್ನ ಅಧಿಕಾರಿಗಳು ಅಧಿಕಾರ ಕಳೆದುಕೊಂಡು ಪಕ್ಷಾಂತರ ಮಾಡುವ ಪರಿಸ್ಥಿತಿ ಬರಬಹುದು. ಆಗ ಅವರು ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮ ಅನುಭವಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ನೆತನ್ಯಾಹು ಹೇಳಿದರು. ಇರಾನ್ನ ಆಡಳಿತವನ್ನು ಜನರು ಕೊನೆಗಾಣಿಸುವುದು ಕೇವಲ ಸಮಯದ ಪ್ರಶ್ನೆ ಎಂದೂ ಅವರು ಹೇಳಿದರು.
ನೆತನ್ಯಾಹು ಅವರ ಭಾಷಣದ ವೇಳೆ ವಿಶ್ವಸಂಸ್ಥೆಯ ಹೊರಭಾಗದಲ್ಲೂ ಭಾರಿ ಪ್ರತಿಭಟನೆ ನಡೆಯಿತು. ನೂರಾರು ಪ್ರತಿಭಟನಾಕಾರರು ಜಮಾಯಿಸಿದ್ದರು. ಡಝನ್ಗಟ್ಟಲೆ ಮಂದಿ ಸಂಚಾರವನ್ನು ನಿರ್ಬಂಧಿಸಿ ಘೋಷಣೆಗಳನ್ನು ಕೂಗಿದರು.
‘ಇಸ್ರೇಲ್ ಗೆ ಶಸ್ತ್ರಾಸ್ತ್ರ ಪೂರೈಕೆ ನಿಲ್ಲಿಸಿ, ಗಾಝಾವನ್ನು ಬದುಕಲು ಬಿಡಿ’ ಮತ್ತು ‘ಇಸ್ರೇಲ್ಗೆ ಶಸ್ತ್ರಾಸ್ತ್ರ ಪೂರೈಕೆ ನಿಲ್ಲಿಸಿ, ಇರಾನ್ನ್ನು ಬದುಕಲು ಬಿಡಿ’ ಎಂಬ ಘೋಷಣೆಗಳನ್ನು ಪ್ರತಿಭಟನಾಕಾರರು ಕೂಗಿದರು. ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು.
ಟ್ರಂಪ್ಗೆ ನೆತನ್ಯಾಹು ಧನ್ಯವಾದ
ಗಾಝಾ ಯುದ್ಧದ ಹಿನ್ನೆಲೆಯಲ್ಲಿ ನೆತನ್ಯಾಹು ಅವರು ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಲು ಅಮೆರಿಕಕ್ಕೆ ಅಲ್ಪಾವಧಿಯ ಭೇಟಿ ನೀಡಿದ್ದರು. ಈ ಭೇಟಿಯ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಯಾವುದೇ ಪೂರ್ವನಿಗದಿತ ಸಭೆ ಇರಲಿಲ್ಲ. ಆದರೂ ನೆತನ್ಯಾಹು ತಮ್ಮ ಭಾಷಣದಲ್ಲಿ ಟ್ರಂಪ್ ಅವರನ್ನು ಪ್ರಶಂಸಿಸಿದರು.
‘ನಾವು ನಮ್ಮ ರಾಷ್ಟ್ರವನ್ನು ರಕ್ಷಿಸುವುದನ್ನು ಮುಂದುವರಿಸುತ್ತೇವೆ. ನಾವು ಗೆಲ್ಲುವುದನ್ನು ಮುಂದುವರಿಸುತ್ತೇವೆ. ಏಕೆಂದರೆ ನಮಗೆ ಬೇರೆ ದಾರಿಯಿಲ್ಲ. ಅನಾಗರಿಕರ ವಿರುದ್ಧದ ಈ ಹೋರಾಟದಲ್ಲಿ ಅಧ್ಯಕ್ಷ ಟ್ರಂಪ್ ಗಿಂತ ಉತ್ತಮ ಪಾಲುದಾರ ನಮಗೆ ಸಿಕ್ಕಿಲ್ಲ. ಅವರ ಧೈರ್ಯಶಾಲಿ ನಾಯಕತ್ವಕ್ಕಾಗಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ’ ಎಂದು ಹೇಳಿದರು.
ಸುಮಾರು ಮೂರು ವರ್ಷಗಳ ಹಿಂದೆ ಹಮಾಸ್ ನೇತೃತ್ವದಲ್ಲಿ ಇಸ್ರೇಲ್ ಮೇಲೆ ನಡೆದ ದಾಳಿಗೆ ಪ್ರತಿಯಾಗಿ ಗಾಝಾದಲ್ಲಿ ಯುದ್ಧ ಆರಂಭಿಸಿದ ಬಳಿಕ ಇಸ್ರೇಲ್ ರಾಜತಾಂತ್ರಿಕವಾಗಿ ಹೆಚ್ಚು ಹೆಚ್ಚು ಪ್ರತ್ಯೇಕಗೊಳ್ಳುತ್ತಿದೆ.
2024ರಲ್ಲಿ ನೆತನ್ಯಾಹು, ಆಗಿನ ಇಸ್ರೇಲ್ ರಕ್ಷಣಾ ಸಚಿವರು ಹಾಗೂ ಹಮಾಸ್ ನ ಅಂದಿನ ಮಿಲಿಟರಿ ಕಮಾಂಡರ್ ವಿರುದ್ಧ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿತ್ತು. ಇದರಿಂದ ನೆತನ್ಯಾಹು ಅವರಿಗೆ ಹಲವು ದೇಶಗಳಿಗೆ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ.
ಈ ತಿಂಗಳ ಆರಂಭದಲ್ಲಿ ಈ ಹಿಂದೆ ಇಸ್ರೇಲ್ನ ದೃಢ ಮಿತ್ರರಾಷ್ಟ್ರಗಳಾಗಿದ್ದ ಬ್ರಿಟನ್, ಫ್ರಾನ್ಸ್ ಮತ್ತು ಕೆನಡಾ, ಆಕ್ರಮಿತ ವೆಸ್ಟ್ ಬ್ಯಾಂಕ್ನಲ್ಲಿರುವ ಇಸ್ರೇಲಿ ವಸಾಹತುಗಳನ್ನು ಗುರಿಯಾಗಿಸಿಕೊಂಡು ನಿರ್ಬಂಧಗಳನ್ನು ಘೋಷಿಸಿದ್ದವು. ಇದಕ್ಕೆ ವಾಷಿಂಗ್ಟನ್ ಮಂದ ಪ್ರತಿಕ್ರಿಯೆ ನೀಡಿತ್ತು.
‘ಈ ದೇಶಗಳ ನಾಯಕರು ಯಹೂದಿ–ವಿರೋಧಿ ಗುಂಪುಗಳಿಗೆ ಮಣಿಯಲು ನಿರ್ಧರಿಸಿದ್ದಾರೆ. ಅವರು ದೌರ್ಬಲ್ಯವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅವರು ಓಲೈಕೆಯ ನೀತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ’ ಎಂದು ನೆತನ್ಯಾಹು ಆರೋಪಿಸಿದರು.
ಆಕ್ರಮಿತ ವೆಸ್ಟ್ ಬ್ಯಾಂಕ್ನಲ್ಲಿ ಇಸ್ರೇಲಿ ವಸಾಹತುಗಾರರಿಂದ ಹೆಚ್ಚುತ್ತಿರುವ ಹಿಂಸಾಚಾರವನ್ನು ಅವರು ಲಘುವಾಗಿ ಪರಿಗಣಿಸಿದರು. ಇದನ್ನು ‘ಕೈಬೆರಳೆಣಿಕೆಯಷ್ಟು, ಸುಮಾರು 150 ಅಪರಾಧ ಪ್ರವೃತ್ತಿಯ ಯುವಕರು ನಡೆಸುವ ಕೃತ್ಯಗಳು’ ಎಂದು ಹೇಳಿದರು. ಕಲ್ಲು ತೂರುವುದು, ಆಲಿವ್ ಮರಗಳನ್ನು ಕಡಿಯುವುದು ಹಾಗೂ ಆಗೊಮ್ಮೆ ಈಗೊಮ್ಮೆ ಬೆಂಕಿ ಹಚ್ಚುವಂತಹ ಕೃತ್ಯಗಳನ್ನು ಅವರು ಉಲ್ಲೇಖಿಸಿದರು.
‘ಇದನ್ನು ನಾನು ಸಹಿಸುವುದಿಲ್ಲ. ಕಾನೂನು ಕೈಗೆತ್ತಿಕೊಳ್ಳುವ ಇಂತಹ ಕ್ರಮಗಳನ್ನು ನಾನು ಒಪ್ಪುವುದಿಲ್ಲ. ನಾವು ಕಾನೂನಿಗೆ ಬದ್ಧವಾಗಿರುವ ದೇಶ’ ಎಂದು ನೆತನ್ಯಾಹು ಹೇಳಿದರು.
ನೆತನ್ಯಾಹು ಅವರ ಭಾಷಣಕ್ಕೂ ಮುನ್ನ ಅವರ ಸರ್ಕಾರ ಮ್ಯಾನ್ಹ್ಯಾಟನ್ ನಾದ್ಯಂತ ಇಸ್ರೇಲ್ ಪರ ಮತ್ತು ಇರಾನ್ ವಿರೋಧಿ 500 ಬಿಲ್ ಬೋರ್ಡ್ ಗಳನ್ನು ಪ್ರದರ್ಶಿಸಲು ಹಣ ವ್ಯಯಿಸಿತ್ತು. ಇಸ್ರೇಲ್ ಪರ ಸಂದೇಶಗಳನ್ನು ಹೊತ್ತ ಡಝನ್ಗಟ್ಟಲೆ ಟ್ರಕ್ ಗಳನ್ನೂ ನಗರದಲ್ಲಿ ಪ್ರದರ್ಶಿಸಲಾಗಿತ್ತು ಎಂದು ನೆತನ್ಯಾಹು ಅವರ ಕಚೇರಿ ತಿಳಿಸಿದೆ.






