ದಿಲ್ಲಿ ವಿಧಾನಸಭಾ ಚುನಾವಣೆ | ನೂತನವಾಗಿ ಪ್ರಮಾಣ ವಚನ ಸ್ವೀಕರಿಸಿರುವ ಶೇ. 71ರಷ್ಟು ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣಗಳು: ADR

ADR | Credit : X / @adrspeaks
ಹೊಸದಿಲ್ಲಿ: ಇಂದು ದಿಲ್ಲಿಯಲ್ಲಿ ನೂತನವಾಗಿ ಪ್ರಮಾಣ ವಚನ ಸ್ವೀಕರಿಸಿದ ಏಳು ಮಂದಿ ಸಚಿವರ ಪೈಕಿ, ಮುಖ್ಯಮಂತ್ರಿ ರೇಖಾ ಗುಪ್ತ ಸೇರಿದಂತೆ ಐದು ಮಂದಿ ಸಚಿವರು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ ಎಂದು ತಮ್ಮ ಚುನಾವಣಾ ಪ್ರಮಾಣ ಪತ್ರಗಳಲ್ಲಿ ಸ್ವಯಂ ಘೋಷಿಸಿಕೊಂಡಿದ್ದಾರೆ. ಉಳಿದ ಇಬ್ಬರು ಸಚಿವರು ಕೋಟ್ಯಧಿಪತಿಗಳಾಗಿದ್ದಾರೆ ಎಂದು ಚುನಾವಣಾ ಹಕ್ಕು ಸಂಸ್ಥೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಬಹಿರಂಗಗೊಳಿಸಿದೆ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ನ ವಿಶ್ಲೇಷಣೆಯ ಪ್ರಕಾರ, ಏಳು ಸಚಿವರ ಪೈಕಿ ಐದು ಮಂದಿ ಸಚಿವರು (ಶೇ. 71ರಷ್ಟು) ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ ಎಂದು ಸ್ವಯಂ ಘೋಷಿಸಿಕೊಂಡಿದ್ದು, ಉಳಿದ ಇಬ್ಬರು ಸಚಿವರು (ಶೇ. 29ರಷ್ಟು) ಕೋಟ್ಯಧಿಪತಿಗಳಾಗಿದ್ದಾರೆ.
ಮುಖ್ಯಮಂತ್ರಿ ರೇಖಾ ಗುಪ್ತ ಸೇರಿದಂತೆ ಐವರು ಸಚಿವರು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ ಎಂದು ಸ್ವಯಂ ಘೋಷಿಸಿಕೊಂಡಿದ್ದಾರೆ ಎಂಬುದರ ಮೇಲೆ ವರದಿ ಬೆಳಕು ಚೆಲ್ಲಿದೆ. ಈ ಪೈಕಿ ಸಚಿವ ಆಶಿಶ್ ಸೂದ್ ವಿರುದ್ಧ ಗಂಭೀರ ಕ್ರಿಮಿನಲ್ ಆರೋಪಗಳಿವೆ.
ಆರ್ಥಿಕ ಹಿನ್ನೆಲೆಯಲ್ಲಿ ಸಚಿವ ಸಂಪುಟದ ಶೇ. 29ರಷ್ಟಿರುವ ಇಬ್ಬರು ಸಚಿವರು ಕೋಟ್ಯಧಿಪತಿಗಳಾಗಿದ್ದಾರೆ. ಈ ಪೈಕಿ ರಜೌರಿ ಗಾರ್ಡನ್ ವಿಧಾನಸಭಾ ಕ್ಷೇತ್ರದ ಶಾಸಕ ಮಂಜಿಂದರ್ ಸಿಂಗ್ ಸಿರ್ಸಾ ಅತ್ಯಧಿಕ ಆಸ್ತಿ ಘೋಷಿಸಿಕೊಂಡಿದ್ದು, ಅದರ ಒಟ್ಟು ಮೌಲ್ಯ 248.85 ಕೋಟಿ ರೂ. ಆಗಿದೆ. ಕರಾವಲ್ ವಿಧಾನಸಭಾ ಕ್ಷೇತ್ರದ ಶಾಸಕ ಕಪಿಲ್ ಮಿಶ್ರಾ ಅತಿ ಕಡಿಮೆ ಆಸ್ತಿ ಘೋಷಿಸಿಕೊಂಡಿದ್ದು, ಅದರ ಒಟ್ಟು ಮೌಲ್ಯ 1.06 ಕೋಟಿ ರೂ. ಆಗಿದೆ.
ಏಳು ಸಚಿವರ ಸರಾಸರಿ ಆಸ್ತಿ ಮೌಲ್ಯ 56.03 ಕೋಟಿ ರೂ. ಆಗಿದೆ. ಎಲ್ಲ ಏಳು ಸಚಿವರೂ ಸಾಲ ಘೋಷಿಸಿಕೊಂಡಿದ್ದು, ಈ ಪೈಕಿ ಹೊಸದಿಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಪರ್ವೇಶ್ ಸಾಹಿಬ್ ಸಿಂಗ್ ವರ್ಮ ಅತ್ಯಧಿಕ 74.36 ಕೋಟಿ ರೂ. ಸಾಲ ಘೋಷಿಸಿಕೊಂಡಿದ್ದಾರೆ.
ಆರು ಸಚಿವರು (ಶೇ. 86ರಷ್ಟು) ತಮ್ಮ ವಿದ್ಯಾರ್ಹತೆ ಪದವಿ ಅಥವಾ ಅದಕ್ಕೂ ಮೇಲ್ಪಟ್ಟಿದೆ ಎಂದು ಘೋಷಿಸಿಕೊಂಡಿದ್ದರೆ, ಓರ್ವ ಸಚಿವರು ಕೇವಲ 12ನೇ ತರಗತಿ ಪೂರೈಸಿದ್ದಾರೆ.
ವಯೋಮಾನದ ಲೆಕ್ಕದಲ್ಲಿ ಐವರು ಸಚಿವರು (ಶೇ. 71ರಷ್ಟು) 41-50 ವರ್ಷ ವಯೋಮಾನದ ಗುಂಪಿನಲ್ಲಿದ್ದರೆ, ಉಳಿದ ಇಬ್ಬರು ಸಚಿವರು (ಶೇ. 29ರಷ್ಟು) 51-60 ವರ್ಷ ವಯೋಮಾನದ ಗುಂಪಿಗೆ ಸೇರಿದ್ದಾರೆ. ಸಚಿವ ಸಂಪುಟದಲ್ಲಿ ಕೇವಲ ಓರ್ವ ಮಹಿಳಾ ಸಚಿವರಿದ್ದು, ಅವರು ಸ್ವತಃ ಮುಖ್ಯಮಂತ್ರಿ ರೇಖಾ ಗುಪ್ತ ಆಗಿದ್ದಾರೆ.







