ಅಮೆರಿಕ ಮಧ್ಯಂತರ ಚುನಾವಣೆ | ಸ್ವಪಕ್ಷೀಯರ ಬಂಡಾಯದ ನಡುವೆಯೂ ಅಲ್-ಸಯೀದ್ ಗೆ ಸಮೀಕ್ಷೆಯಲ್ಲಿ ಮುನ್ನಡೆ
ರಿಪಬ್ಲಿಕನ್ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದ, ಪ್ರೈಮರಿಯಲ್ಲಿ ಅಲ್-ಸಯೀದ್ ವಿರುದ್ಧ ಸೋತಿದ್ದ ಹ್ಯಾಲಿ ಸ್ಟೀವನ್ಸ್

Photo: AP
ವಾಷಿಂಗ್ಟನ್: ಅಮೆರಿಕದ ಮಧ್ಯಂತರ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ, ಮಿಚಿಗನ್ ಸೆನೆಟ್ ಕ್ಷೇತ್ರದ ರಾಜಕೀಯ ಕಣ ಮತ್ತಷ್ಟು ರಂಗೇರಿದೆ. ಡೆಮಾಕ್ರಟಿಕ್ ಪಕ್ಷದ ಅಧಿಕೃತ ಅಭ್ಯರ್ಥಿ ಅಬ್ದುಲ್ ಅಲ್-ಸಯೀದ್ ವಿರುದ್ಧ ಸ್ವಪಕ್ಷದ ನಾಯಕಿ ಹ್ಯಾಲಿ ಸ್ಟೀವನ್ಸ್ ಬಂಡಾಯವೆದ್ದು, ರಿಪಬ್ಲಿಕನ್ ಅಭ್ಯರ್ಥಿ ಮೈಕ್ ರೋಜರ್ಸ್ ಗೆ ಬಹಿರಂಗ ಬೆಂಬಲ ಘೋಷಿಸಿದ್ದಾರೆ. ಈ ರಾಜಕೀಯ ಬೆಳವಣಿಗೆಯ ನಡುವೆಯೂ ಅಲ್-ಸಯೀದ್ ಇತ್ತೀಚಿನ ಸಮೀಕ್ಷೆಯಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಅವರ ಜನಪ್ರಿಯತೆಯಲ್ಲಿ ಶೇ. 11ರಷ್ಟು ಏರಿಕೆ ದಾಖಲಾಗಿದೆ.
ಅಮೆರಿಕದ ಕೋಟ್ಯಂತರ ಮತದಾರರು ಈಗಾಗಲೇ ಮುಂಗಡ ಮತದಾನದ (early morning) ಮೂಲಕ ತಮ್ಮ ಹಕ್ಕು ಚಲಾಯಿಸಿದ್ದಾರೆ. ಅಧಿಕೃತ ಮತದಾನ ಆರಂಭವಾಗಲು ಕೆಲವೇ ಗಂಟೆಗಳು ಬಾಕಿ ಇರುವಾಗ ಮಿಚಿಗನ್ ನಲ್ಲಿ ನಡೆದಿರುವ ಈ ಬೆಳವಣಿಗೆ ರಾಷ್ಟ್ರದ ಗಮನ ಸೆಳೆದಿದೆ.
ಆಗಸ್ಟ್ ನಲ್ಲಿ ನಡೆದ ಡೆಮಾಕ್ರಟಿಕ್ ಪಕ್ಷದ ಆಂತರಿಕ ಪ್ರೈಮರಿ ಚುನಾವಣೆಯಲ್ಲಿ ಅಲ್-ಸಯೀದ್ ವಿರುದ್ಧ ಸೋತಿದ್ದ ಹ್ಯಾಲಿ ಸ್ಟೀವನ್ಸ್, ಇದೀಗ ಅವರ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಚರ್ಚ್ನಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಮಾಧ್ಯಮಗಳ ಮುಂದೆ ಕಾಣಿಸಿಕೊಂಡ ಅವರು, ರಿಪಬ್ಲಿಕನ್ ಅಭ್ಯರ್ಥಿ ಮೈಕ್ ರೋಜರ್ಸ್ ಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ. ಪಕ್ಷದ ಪ್ರಮುಖ ನಾಯಕಿಯೊಬ್ಬರು ಚುನಾವಣೆಯ ನಿರ್ಣಾಯಕ ಹಂತದಲ್ಲಿ ಎದುರಾಳಿ ಅಭ್ಯರ್ಥಿಯ ಪರ ನಿಂತಿರುವುದು ಡೆಮಾಕ್ರಟಿಕ್ ಪಕ್ಷದೊಳಗೆ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಸ್ಟೀವನ್ಸ್ ಅವರ ನಿರ್ಧಾರಕ್ಕೆ ಪ್ರತಿಕ್ರಿಯಿಸಿರುವ ಡೆಮಾಕ್ರಟಿಕ್ ಪಕ್ಷದ ಮಿಚಿಗನ್ ಘಟಕದ ಮುಖ್ಯಸ್ಥ ಕರ್ಟಿಸ್ ಹರ್ಟೆಲ್ ಜೂನಿಯರ್, ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದಾರೆ. ಇತ್ತ, ಸ್ಟೀವನ್ಸ್ ಅವರ ಪ್ರಚಾರ ತಂಡದ ಪ್ರಮುಖ ಸದಸ್ಯರು ನಾಯಕಿಯ ನಿರ್ಧಾರವನ್ನು ವಿರೋಧಿಸಿ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ. ಅಲ್-ಸಯೀದ್ ಅವರಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.
ಮತ್ತೊಂದೆಡೆ, ಸ್ಟೀವನ್ಸ್ ಅವರ ನಿರ್ಧಾರ ರಿಪಬ್ಲಿಕನ್ ಪಾಳಯದಲ್ಲಿ ಉತ್ಸಾಹ ಮೂಡಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಅವರ ನಿಲುವನ್ನು ಶ್ಲಾಘಿಸುವುದರ ಜತೆಗೆ ರಿಪಬ್ಲಿಕನ್ ಪಕ್ಷಕ್ಕೆ ಸೇರುವಂತೆ ಆಹ್ವಾನಿಸಿದ್ದಾರೆ.
ಈ ಬೆಳವಣಿಗೆ ಡೆಮಾಕ್ರಟಿಕ್ ಪಕ್ಷದ ಪ್ರಗತಿಪರ ಧೋರಣೆ ಮತ್ತು ಸಾಂಪ್ರದಾಯಿಕ ಕಾರ್ಪೊರೇಟ್ ಪರ ಬಣಗಳ ನಡುವಿನ ಭಿನ್ನಾಭಿಪ್ರಾಯವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.
ಪ್ರೈಮರಿ ಸೋಲಿನಿಂದ ಆರಂಭವಾದ ಸಂಘರ್ಷ
ಹ್ಯಾಲಿ ಸ್ಟೀವನ್ಸ್ ಮತ್ತು ಅಬ್ದುಲ್ ಅಲ್-ಸಯೀದ್ ನಡುವಿನ ಸಂಘರ್ಷಕ್ಕೆ ಆಗಸ್ಟ್ನಲ್ಲಿ ನಡೆದ ಪ್ರೈಮರಿ ಚುನಾವಣೆಯೇ ಪ್ರಮುಖ ಕಾರಣ. ಕಾರ್ಪೊರೇಟ್ ಸಂಸ್ಥೆಗಳಿಂದ ದೇಣಿಗೆ ಸ್ವೀಕರಿಸಲು ನಿರಾಕರಿಸಿದ್ದ ಅಲ್-ಸಯೀದ್, ಜನಸಾಮಾನ್ಯರಿಂದ ಕ್ರೌಡ್ಫಂಡಿಂಗ್ ಮೂಲಕ ಹಣ ಸಂಗ್ರಹಿಸಿ ಚುನಾವಣೆಗೆ ಸ್ಪರ್ಧಿಸಿದ್ದರು. ಅವರಿಗೆ ಬರ್ನಿ ಸ್ಯಾಂಡರ್ಸ್ ಮತ್ತು ಅಲೆಕ್ಸಾಂಡ್ರಿಯಾ ಒಕಾಸಿಯೊ-ಕಾರ್ಟೆಜ್ ಬೆಂಬಲ ನೀಡಿದ್ದರು.
ಇನ್ನೊಂದೆಡೆ, ಹ್ಯಾಲಿ ಸ್ಟೀವನ್ಸ್ ಪರವಾಗಿ ಪಕ್ಷದ ಹಿರಿಯ ನಾಯಕ ಚಕ್ ಶೂಮರ್ ಮತ್ತು ಗವರ್ನರ್ ಗ್ರೆಚೆನ್ ವಿಟ್ಮರ್ ಬೆಂಬಲವಾಗಿ ನಿಂತಿದ್ದರು. ಇಸ್ರೇಲ್ ಪರ ಲಾಬಿ ನಡೆಸುವ ಸಂಸ್ಥೆಗಳು ಕೂಡ ಸ್ಟೀವನ್ಸ್ ಅವರ ಚುನಾವಣಾ ಪ್ರಚಾರಕ್ಕೆ ಭಾರಿ ಮೊತ್ತದ ಹಣಕಾಸು ನೆರವು ನೀಡಿದ್ದವು. ಗಾಜಾ ಯುದ್ಧವನ್ನು ಅಲ್-ಸಯೀದ್ ಬಹಿರಂಗವಾಗಿ ವಿರೋಧಿಸಿದ್ದು, ಅವರ ವಿರುದ್ಧ ತೀವ್ರ ಪ್ರಚಾರ ನಡೆಯಲು ಪ್ರಮುಖ ಕಾರಣವಾಗಿತ್ತು.
ಆದರೆ, ಪ್ರಬಲ ನಾಯಕರ ಬೆಂಬಲದ ಹೊರತಾಗಿಯೂ ಸ್ಟೀವನ್ಸ್ ಪ್ರೈಮರಿ ಚುನಾವಣೆಯಲ್ಲಿ ಸೋಲು ಅನುಭವಿಸಿದರು. ಅಲ್-ಸಯೀದ್ ಗೆಲುವು ಸಾಧಿಸಿ ಡೆಮಾಕ್ರಟಿಕ್ ಪಕ್ಷದ ಅಧಿಕೃತ ಅಭ್ಯರ್ಥಿಯಾದರು. ಪಕ್ಷದ ಹಿರಿಯ ನಾಯಕರು ಪಕ್ಷದ ಹಿತದೃಷ್ಟಿಯಿಂದ ಅಲ್-ಸಯೀದ್ ಅವರೊಂದಿಗೆ ಕೈಜೋಡಿಸಿದರೂ, ಸ್ಟೀವನ್ಸ್ ಮಾತ್ರ ಅವರಿಂದ ಅಂತರ ಕಾಯ್ದುಕೊಂಡಿದ್ದರು. ಪ್ರೈಮರಿ ಸೋಲಿನ ಅಸಮಾಧಾನ ಅವರಲ್ಲಿ ಮುಂದುವರಿದಿತ್ತು.
ವಿವಾದಾತ್ಮಕ ಜಾಹೀರಾತಿನಿಂದ ಮತ್ತಷ್ಟು ಬಿರುಕು
ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಬಿಡುಗಡೆಯಾದ ವಿವಾದಾತ್ಮಕ ಜಾಹೀರಾತು ಉಭಯ ನಾಯಕರ ನಡುವಿನ ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸಿತು. ಇಸ್ರೇಲ್ಗೆ ನೀಡಲಾಗುತ್ತಿರುವ ಬಿಲಿಯನ್ಗಟ್ಟಲೆ ಡಾಲರ್ ಗಳ ಮಿಲಿಟರಿ ನೆರವನ್ನು ಅಮೆರಿಕದ ದೈನಂದಿನ ಹಣದುಬ್ಬರ ಮತ್ತು ಬೆಲೆ ಏರಿಕೆಗೆ ಹೋಲಿಸಿ ಈ ಜಾಹೀರಾತು ರೂಪಿಸಲಾಗಿತ್ತು.
ಜಾಹೀರಾತು ತೀವ್ರ ಚರ್ಚೆಗೆ ಕಾರಣವಾದ ಬೆನ್ನಲ್ಲೇ, ಅಲ್-ಸಯೀದ್ ತಮ್ಮ ಪ್ರಚಾರ ತಂಡಕ್ಕೂ ಆ ಜಾಹೀರಾತಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೆ, ಹ್ಯಾಲಿ ಸ್ಟೀವನ್ಸ್ ಮತ್ತು ಅವರ ಯಹೂದಿ ಸಮುದಾಯದ ವಕೀಲ ಭಾವಿ ಪತಿ ಜೇಸನ್ ಟರ್ಕಿಶ್ ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ್ದರು.
ಇಬ್ಬರ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸಲು ಪಕ್ಷದ ಸಂಧಾನಕಾರರು ಪ್ರಯತ್ನಿಸಿದ್ದರು. ಈ ಸಂದರ್ಭದಲ್ಲಿ ಸ್ಟೀವನ್ಸ್ ಹಲವು ಕಠಿಣ ಷರತ್ತುಗಳನ್ನು ಮುಂದಿಟ್ಟಿದ್ದರು. ಇಸ್ರೇಲ್ ಕುರಿತು ಈ ಹಿಂದೆ ನೀಡಿದ್ದ ಹೇಳಿಕೆಗಳಿಗಾಗಿ ಅಲ್-ಸಯೀದ್ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದರು.
ಆದರೆ, ಇದಕ್ಕೆ ಅಲ್-ಸಯೀದ್ ಒಪ್ಪಲಿಲ್ಲ. ತಮ್ಮ ಚುನಾವಣಾ ಪ್ರಚಾರಕ್ಕೆ ಸ್ಟೀವನ್ಸ್ ಅವರ ಬೆಂಬಲದ ಅಗತ್ಯವಿಲ್ಲ ಎಂದು ನೇರವಾಗಿಯೇ ತಿಳಿಸಿದ್ದರು. ಇದಾದ ಬಳಿಕ ಸ್ಟೀವನ್ಸ್ ರಿಪಬ್ಲಿಕನ್ ಅಭ್ಯರ್ಥಿ ರೋಜರ್ಸ್ಗೆ ಬೆಂಬಲ ಘೋಷಿಸುವ ನಿರ್ಧಾರ ಕೈಗೊಂಡರು.
15 ಸಾವಿರ ಮತಗಳ ಅಂತರದ ಸೋಲು ಈಗ ಚರ್ಚೆಗೆ
ಸ್ಟೀವನ್ಸ್ ಅವರ ಬಂಡಾಯ ಮಿಚಿಗನ್ ಚುನಾವಣೆಯ ಫಲಿತಾಂಶದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬ ಕುತೂಹಲ ಮೂಡಿಸಿದೆ. ಸ್ಥಳೀಯವಾಗಿ ಪ್ರಬಲ ಮತಬ್ಯಾಂಕ್ ಹೊಂದಿರುವ ಅವರು, ಡೆಟ್ರಾಯಿಟ್ ಭಾಗದ ಓಕ್ಲ್ಯಾಂಡ್ ಕೌಂಟಿಯಲ್ಲಿ ಗಣನೀಯ ಜನಬೆಂಬಲ ಹೊಂದಿದ್ದಾರೆ. ಅದರಲ್ಲೂ ಯಹೂದಿ ಮತದಾರರ ನಡುವೆ ಅವರ ಪ್ರಭಾವವಿದೆ.
ಪ್ರೈಮರಿ ಚುನಾವಣೆಯಲ್ಲಿ ಅವರು ಅಲ್-ಸಯೀದ್ ವಿರುದ್ಧ ಕೇವಲ 15 ಸಾವಿರ ಮತಗಳ ಅಂತರದಿಂದ ಸೋತಿದ್ದರು. ಇದೀಗ ಅಲ್-ಸಯೀದ್ ಮತ್ತು ಮೈಕ್ ರೋಜರ್ಸ್ ನಡುವೆ ತೀವ್ರ ಪೈಪೋಟಿ ಇರುವುದರಿಂದ, ಅಲ್ಪ ಪ್ರಮಾಣದ ಮತಗಳ ಧ್ರುವೀಕರಣವೂ ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಸ್ಟೀವನ್ಸ್ ಅವರ ನಿರ್ಧಾರ ಡೆಮಾಕ್ರಟಿಕ್ ಪಕ್ಷದ ಪಾಲಿಗೆ ಪ್ರಮುಖ ಸವಾಲಾಗಿದೆ.
ಅಲ್-ಸಯೀದ್ ಜನಪ್ರಿಯತೆಯಲ್ಲಿ ಶೇ.11ರಷ್ಟು ಏರಿಕೆ
ಸ್ವಪಕ್ಷೀಯರ ಬಂಡಾಯದ ನಡುವೆಯೂ ಅಲ್-ಸಯೀದ್ ಮುನ್ನಡೆ ಕಾಯ್ದುಕೊಂಡಿರುವುದು ಇತ್ತೀಚಿನ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ. ನ್ಯೂಯಾರ್ಕ್ ಟೈಮ್ಸ್ ಮತ್ತು ಸಿಯೆನಾ ಕಾಲೇಜು ನಡೆಸಿದ ಸಮೀಕ್ಷೆಯ ಪ್ರಕಾರ, ವಿವಾದದ ನಡುವೆಯೂ ಅಲ್-ಸಯೀದ್ ಜನಪ್ರಿಯತೆಯಲ್ಲಿ ಶೇ.11ರಷ್ಟು ಏರಿಕೆ ದಾಖಲಾಗಿದೆ.
ಅಲ್-ಸಯೀದ್ ತಮ್ಮ ಚುನಾವಣಾ ಪ್ರಚಾರವನ್ನು ವಿದೇಶಾಂಗ ನೀತಿಯ ವಿಚಾರಗಳಿಗೆ ಮಾತ್ರ ಸೀಮಿತಗೊಳಿಸಿಲ್ಲ. ಜನಸಾಮಾನ್ಯರ ಆರೋಗ್ಯ ವಿಮೆ, ಜೀವನ ವೆಚ್ಚ ಮತ್ತು ಶಿಕ್ಷಣದಂತಹ ಸ್ಥಳೀಯ ಸಮಸ್ಯೆಗಳಿಗೂ ಆದ್ಯತೆ ನೀಡಿದ್ದಾರೆ. ಇದು ಅವರ ಪ್ರಚಾರಕ್ಕೆ ಅನುಕೂಲವಾಗಿದೆ.
ತಮ್ಮ ಮೇಲಿನ ಧಾರ್ಮಿಕ ಮತ್ತು ಸೈದ್ಧಾಂತಿಕ ಆರೋಪಗಳನ್ನು ಸಮರ್ಥವಾಗಿ ಎದುರಿಸಿರುವ ಅವರು, ಮಧ್ಯಮ ಮಾರ್ಗದ ನಿಲುವು ಅನುಸರಿಸಿರುವುದು ಮತದಾರರ ಗಮನ ಸೆಳೆಯಲು ನೆರವಾಗಿದೆ.
ಸೆನೆಟ್ ನಿಯಂತ್ರಣದ ಮೇಲೂ ಪರಿಣಾಮ
ಮಿಚಿಗನ್ ಚುನಾವಣೆ ಇದೀಗ ಕೇವಲ ಒಂದು ರಾಜ್ಯದ ರಾಜಕೀಯ ಹಣಾಹಣಿಯಾಗಿ ಉಳಿದಿಲ್ಲ. ಅಮೆರಿಕದ ಸೆನೆಟ್ನ ಒಟ್ಟು 100 ಸ್ಥಾನಗಳ ಪೈಕಿ ಪ್ರಸ್ತುತ ರಿಪಬ್ಲಿಕನ್ ಪಕ್ಷ 53 ಸ್ಥಾನಗಳನ್ನು ಹೊಂದಿದೆ. ಈ ಬಹುಮತವನ್ನು ಉಳಿಸಿಕೊಳ್ಳಲು ಪಕ್ಷ ಪ್ರಯತ್ನಿಸುತ್ತಿದೆ.
ಚುನಾವಣಾ ಫಲಿತಾಂಶ ಅನಿಶ್ಚಿತವಾಗಿರುವ ಆರು ಪ್ರಮುಖ ರಾಜ್ಯಗಳ ಪೈಕಿ ಮಿಚಿಗನ್ ಕೂಡ ಪ್ರಮುಖ ಸ್ಥಾನದಲ್ಲಿದೆ. ಇಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿ ಗೆಲುವು ಸಾಧಿಸಿದರೆ ಸೆನೆಟ್ನ ನಿಯಂತ್ರಣವೇ ಬದಲಾಗುವ ಸಾಧ್ಯತೆಯಿದೆ.
ಪಕ್ಷದೊಳಗಿನ ಬಂಡಾಯ, ಪ್ರಗತಿಪರ ಮತ್ತು ಕಾರ್ಪೊರೇಟ್ ಪರ ಬಣಗಳ ನಡುವಿನ ಸೈದ್ಧಾಂತಿಕ ಸಂಘರ್ಷ ಹಾಗೂ ಮತದಾರರ ಅಂತಿಮ ತೀರ್ಪು ಮಿಚಿಗನ್ ಚುನಾವಣೆಯ ಫಲಿತಾಂಶವನ್ನು ನಿರ್ಧರಿಸಲಿವೆ. ಸ್ವಪಕ್ಷೀಯರ ವಿರೋಧದ ನಡುವೆಯೂ ಅಲ್-ಸಯೀದ್ ಕಾಯ್ದುಕೊಂಡಿರುವ ಸಮೀಕ್ಷೆಯ ಮುನ್ನಡೆ ಮತದಾನದ ಫಲಿತಾಂಶದಲ್ಲೂ ಪ್ರತಿಫಲಿಸಲಿದೆಯೇ ಎಂಬುದು ಕುತೂಹಲ ಮೂಡಿಸಿದೆ.






