ಇರಾನ್ ವಿರುದ್ಧ ಜನಾಂಗೀಯ ಹತ್ಯೆ ಬೆದರಿಕೆ ಬಳಿಕ ಡೊನಾಲ್ಡ್ ಟ್ರಂಪ್ ಪದಚ್ಯುತಿಗೆ ಡೆಮೋಕ್ರಾಟ್ ಗಳಿಂದ ಹೆಚ್ಚಿದ ಆಗ್ರಹ

ಡೊನಾಲ್ಡ್ ಟ್ರಂಪ್ | Photo Credit : PTI
ವಾಶಿಂಗ್ಟನ್: ಇರಾನ್ ಅನ್ನು ಸರ್ವನಾಶ ಮಾಡುವ, ಜನಾಂಗೀಯ ಹತ್ಯೆ ನಡೆಸುವ ಬೆದರಿಕೆ ಮತ್ತು ಸೇನಾ ಕಾರ್ಯಾಚರಣೆ ಹಿನ್ನೆಲೆ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್ನ 70ಕ್ಕೂ ಹೆಚ್ಚು ಡೆಮಾಕ್ರಾಟ್ ಸದಸ್ಯರು, ಟ್ರಂಪ್ ಅವರನ್ನು ಪದಚ್ಯುತಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಾಮಾನ್ಯವಾಗಿ ಟ್ರಂಪ್ ಕ್ರಮಗಳ ಬಗ್ಗೆ ಎಚ್ಚರಿಕೆಯಿಂದ ನಡೆದುಕೊಳ್ಳುತ್ತಿದ್ದ ಡೆಮಾಕ್ರಾಟ್ ಶಾಸಕರು, ಇದೀಗ ಒಟ್ಟಾಗಿ ಹೊಣೆಗಾರಿಕೆ ಬಗ್ಗೆ ಬೇಡಿಕೆ ಮುಂದಿಟ್ಟಿದ್ದಾರೆ. ಅವರು ಅಮೆರಿಕ ಅಧ್ಯಕ್ಷರ ಹೇಳಿಕೆಗಳು, ಅಂತಾರಾಷ್ಟ್ರೀಯ ಹಾಗೂ ಫೆಡರಲ್ ಕಾನೂನುಗಳ ಉಲ್ಲಂಘನೆಯಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಟ್ರಂಪ್ ಅವರ ಆತಂಕಕಾರಿ ಹೇಳಿಕೆಗಳ ನಂತರ, ಹಲವಾರು ಡೆಮಾಕ್ರಟಿಕ್ ಪ್ರತಿನಿಧಿಗಳು ಅಮೆರಿಕ ಅಧ್ಯಕ್ಷರನ್ನು ದೋಷಾರೋಪಣೆಯ ಮೂಲಕ ಅಥವಾ 25ನೇ ತಿದ್ದುಪಡಿಯ ಮೂಲಕ ಅಧಿಕಾರದಿಂದ ತೆಗೆದುಹಾಕಬೇಕು ಎಂದು ಆಗ್ರಹಿಸಿದ್ದಾರೆ. ಅಧ್ಯಕ್ಷರ ಭಾಷಣದಿಂದ ಆತಂಕಗೊಂಡ ಜನರು ಅನೇಕ ಕರೆಗಳು ಮತ್ತು ಇಮೇಲ್ ಗಳನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಅನೇಕ ಡೆಮಾಕ್ರೆಟ್ಗಳು ಆಗ್ರಹಿಸಿದ್ದಾರೆ.
ಕ್ಯಾಲಿಫೋರ್ನಿಯಾದ ಪ್ರತಿನಿಧಿ ಸಾರಾ ಜೇಕಬ್ಸ್ ಅವರು ತಮ್ಮ ಪಕ್ಷದ ಅನೇಕರು ಹಂಚಿಕೊಂಡ ಅಭಿಪ್ರಾಯವನ್ನು ವ್ಯಕ್ತಪಡಿಸಿ, “ಅಧ್ಯಕ್ಷರು ಹೇಳಿದ ಮಾತುಗಳನ್ನು ಮಾತುಕತೆ ತಂತ್ರ ಎಂದು ನಾವು ಸಮರ್ಥಿಸಲು ಸಾಧ್ಯವಿಲ್ಲ” ಎಂದು ಹೇಳಿದರು. ಟ್ರಂಪ್ ನೀಡಿದ ಬೆದರಿಕೆಗಳಿಗೆ ಅವರನ್ನು ಹೊಣೆಗಾರರನ್ನಾಗಿಸಬೇಕೆಂಬ ಅಗತ್ಯವನ್ನು ಜೇಕಬ್ಸ್ ಆಗ್ರಹಿಸಿದರು. ಇವು ಕೇವಲ ರಾಜಕೀಯಕ್ಕೆ ಸೀಮಿತವಾಗಿಲ್ಲ, ಅದರ ಪರಿಣಾಮಗಳು ಅಂತಾರಾಷ್ಟ್ರೀಯ ಸಂಬಂಧಕ್ಕೆ ಮಾತ್ರವಲ್ಲದೆ ಯುದ್ಧ ಮತ್ತು ಮಾನವ ಹಕ್ಕುಗಳಿಗೆ ಸಂಬಂಧಿಸಿದ ಕಾನೂನು ಮಾನದಂಡಗಳ ಮೇಲೂ ಪರಿಣಾಮ ಬೀರುತ್ತದೆ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದರು.
ಸೆನೆಟರ್ ಆಂಡಿ ಕಿಮ್ ಇದೇ ರೀತಿಯ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ವೀಡಿಯೊ ಕ್ಲಿಪ್ ನಲ್ಲಿ “ಟ್ರಂಪ್ ಕಮಾಂಡರ್ ಇನ್ ಚೀಫ್ ಆಗಲು ಯೋಗ್ಯರಲ್ಲ" ಎಂದು ಹೇಳಿದ್ದಾರೆ ಮತ್ತು ಅವರ ರಿಪಬ್ಲಿಕನ್ ಸಹೋದ್ಯೋಗಿಗಳು ಅವರ ವಿರುದ್ಧ ನಿಲ್ಲುವಂತೆ ಒತ್ತಾಯಿಸಿದ್ದಾರೆ.
ಮಿಚಿಗನ್ನ ಪ್ರತಿನಿಧಿ ಥಾನೆದಾರ್ ಅವರು ವಿಷಯವನ್ನು ಇನ್ನಷ್ಟು ಗಂಭೀರವಾಗಿ ತೆಗೆದುಕೊಂಡಿದ್ದು, ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮತ್ತು ಟ್ರಂಪ್ ಸಚಿವ ಸಂಪುಟದ ಸದಸ್ಯರಿಗೆ ನೇರವಾಗಿ ಪತ್ರ ಬರೆದು, 25ನೇ ತಿದ್ದುಪಡಿ ಜಾರಿಗೆ ತಂದು ಟ್ರಂಪ್ ಅವರನ್ನು ಅಧಿಕಾರದಿಂದ ಪದಚ್ಯುತಗೊಳಿಸುವಂತೆ ಆಗ್ರಹಿಸಿದ್ದಾರೆ.







