ದಂತವೈದ್ಯ, ಆಫ್-ಡ್ಯೂಟಿ ಪೈಲಟ್ ಗಳ ಧೈರ್ಯ: ಹೇಗಿತ್ತು Flydubai ವಿಮಾನದಲ್ಲಿ 180 ಮಂದಿಯನ್ನು ಉಳಿಸಿದ ಹೋರಾಟ?

Photo credit: PTI
ಹೊಸದಿಲ್ಲಿ: ಸುಮಾರು 180 ಮಂದಿಯನ್ನು ಹೊತ್ತ ಫ್ಲೈದುಬೈ ವಿಮಾನ FZ1073 ಬುಧವಾರ ಭಾರಿ ಆತಂಕದ ಪರಿಸ್ಥಿತಿಗೆ ಸಿಲುಕಿತ್ತು. ವಿಮಾನವು ಏಕಾಏಕಿ ಕೆಳಮುಖವಾಗಿ ವೇಗವಾಗಿ ಇಳಿಯತೊಡಗಿದ್ದು, ಎರಡು ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ 17,400 ಅಡಿ ಎತ್ತರ ಕಳೆದುಕೊಂಡಿತ್ತು. ಕಾಕ್ಪಿಟ್ ನಲ್ಲಿ ನಡೆದ ಚಾಕು ಇರಿತದ ಘಟನೆ ಹಾಗೂ ಅದರಿಂದ ಉಂಟಾದ ಗೊಂದಲದ ನಡುವೆಯೂ, ವಿಮಾನದಲ್ಲಿದ್ದ ದಂತವೈದ್ಯ, ಕರ್ತವ್ಯದಲ್ಲಿಲ್ಲದ ಪೈಲಟ್ ಗಳು ಮತ್ತು ಜಾಗರೂಕ ಪ್ರಯಾಣಿಕರ ಸಮಯಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ಭಾರಿ ದುರಂತ ತಪ್ಪಿದೆ.
ಬೆಳಿಗ್ಗೆ ಸುಮಾರು 8.20ರ ವೇಳೆಗೆ ವಿಮಾನ ವೇಗವಾಗಿ ಕೆಳಮುಖವಾಗಿ ಇಳಿಯತೊಡಗಿತು. ಒಮ್ಮೆಲೇ ಕಳೆದುಕೊಂಡ 17,400 ಅಡಿ ಎತ್ತರವು ಬುರ್ಜ್ ಖಲೀಫಾದ ಎತ್ತರಕ್ಕಿಂತ ಸುಮಾರು ಆರು ಪಟ್ಟು ಹೆಚ್ಚು. ಕೆಲ ನಿಮಿಷಗಳ ಕಾಲ ಪ್ರಯಾಣಿಕರು ತಾವು ಜೀವಂತವಾಗಿ ನೆಲ ತಲುಪುತ್ತೇವೆಯೇ ಎಂಬ ಆತಂಕದಲ್ಲಿದ್ದರು.
ವಿಮಾನದಲ್ಲಿದ್ದ ತನ್ನ ಮಗಳು ಮಿರ್ಯಾಮ್ ಹೇಳಿದ್ದನ್ನು ಉಲ್ಲೇಖಿಸಿದ ಯಾಸ್ಮಿನ್ ಅಬುಕಾಸಿಸ್, “ಎಲ್ಲರೂ ತಾವು ಸಾಯಲಿದ್ದೇವೆ ಎಂದು ಭಾವಿಸಿದ್ದರು” ಎಂದು AFPಗೆ ತಿಳಿಸಿದ್ದಾರೆ. ಆದರೆ ಬಳಿಕ ವಿಮಾನ ನಿಯಂತ್ರಣಕ್ಕೆ ಬಂದು ವಾಯುವ್ಯ ಸೌದಿ ಅರೇಬಿಯದ ತಬುಕ್ ನಲ್ಲಿ ಸುರಕ್ಷಿತವಾಗಿ ಇಳಿಯಿತು.
ವಿಮಾನವು “ಪ್ರಯಾಣದ ವೇಳೆ ಒಂದು ಸಮಸ್ಯೆ ಎದುರಿಸಿತು”. ಎಲ್ಲ ಪ್ರಯಾಣಿಕರೂ ಸುರಕ್ಷಿತವಾಗಿದ್ದು, ಕ್ಷೇಮವಾಗಿದ್ದಾರೆ ಎಂದು ಫ್ಲೈದುಬೈ ತಿಳಿಸಿದೆ.
ಕಾಕ್ಪಿಟ್ ನಲ್ಲಿ ಚಾಕು ಇರಿತ:
ವಿಮಾನದಲ್ಲಿದ್ದವರ ಹೇಳಿಕೆಗಳ ಪ್ರಕಾರ, ಒಬ್ಬ ಪೈಲಟ್ ಮತ್ತೊಬ್ಬ ಪೈಲಟ್ ಗೆ ಚಾಕುವಿನಿಂದ ಇರಿದಿದ್ದಾರೆ. ವಿಮಾನದ ಮುಂಭಾಗದಲ್ಲಿದ್ದ ಪ್ರಯಾಣಿಕರು ದಾಳಿಕೋರನನ್ನು ಕಾಕ್ಪಿಟ್ ನಿಂದ ಹೊರಗೆ ತಳ್ಳಲು ನೆರವಾದರು ಎಂದು ತಿಳಿದು ಬಂದಿದೆ.
ಮಿರ್ಯಾಮ್ ತನ್ನ ತಾಯಿಗೆ ನೀಡಿದ ಮಾಹಿತಿಯನ್ನು ವಿವರಿಸಿದ ಪ್ರತ್ಯಕ್ಷದರ್ಶಿಯೊಬ್ಬರು, “ಒಬ್ಬ ಪೈಲಟ್ ಮತ್ತೊಬ್ಬ ಪೈಲಟ್ ನನ್ನು ಚಾಕುವಿನಿಂದ ಕೊಲ್ಲಲು ಪ್ರಯತ್ನಿಸಿದ್ದಾನೆ. ‘ಸಹಾಯ ಮಾಡಿ, ಸಹಾಯ ಮಾಡಿ’ ಎಂಬ ಕೂಗು ಕೇಳಿಸಿತು. ಮೂವರು ಮಕ್ಕಳಿದ್ದ ಮಹಿಳೆಯೊಬ್ಬರು ಕಾಕ್ಪಿಟ್ ನತ್ತ ಹೋದಾಗ ಅಲ್ಲಿ ಸಾಕಷ್ಟು ರಕ್ತ ಕಂಡರು” ಎಂದು AFPಗೆ ತಿಳಿಸಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವೀಡಿಯೊ ಹೇಳಿಕೆಯಲ್ಲಿ, ಪ್ರಯಾಣಿಕರೊಬ್ಬರು ಸಿಬ್ಬಂದಿಯ ಸದಸ್ಯರೊಂದಿಗೆ ಕಾಕ್ಪಿಟ್ ಗೆ ನುಗ್ಗಿ, ವಿಮಾನದ ವ್ಯವಸ್ಥೆಗಳನ್ನು ಹಾಳುಮಾಡಲು ಪ್ರಯತ್ನಿಸುತ್ತಿದ್ದ ಪೈಲಟ್ ನನ್ನು “ನಿಯಂತ್ರಣಕ್ಕೆ ತೆಗೆದುಕೊಳ್ಳುವಲ್ಲಿ” ಯಶಸ್ವಿಯಾದರು ಎಂದು ಹೇಳಿದ್ದಾರೆ. ಮತ್ತೊಬ್ಬ ಸಿಬ್ಬಂದಿ ವಿಮಾನವನ್ನು ಸುರಕ್ಷಿತ ಸ್ಥಿತಿಗೆ ತಂದರು ಎಂದೂ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಮಾನದೊಳಗಿನ ದೃಶ್ಯಗಳೆಂದು ಹೇಳಲಾಗುತ್ತಿರುವ ವೀಡಿಯೊಗಳಲ್ಲಿ ಗಾಯಗೊಂಡ ವ್ಯಕ್ತಿ ಹಾಗೂ ರಕ್ತಸಿಕ್ತರಾದ ಇತರರು ಕಾಣಿಸಿಕೊಂಡಿದ್ದಾರೆ. ಒಂದು ನಿಮಿಷದ ವೀಡಿಯೊದಲ್ಲಿ ಪ್ರಯಾಣಿಕರೊಬ್ಬರು ಪೈಲಟ್ ಗೆ “ನೀವು ವಿಮಾನವನ್ನು ಉಳಿಸಿದ್ದೀರಿ” ಎಂದು ಹೇಳುವುದು ಕೇಳಿಸುತ್ತದೆ.
ತಲೆಗೆ ಗಾಯಗೊಂಡ ಮತ್ತೊಬ್ಬ ವ್ಯಕ್ತಿ ಹೀಬ್ರೂ ಭಾಷೆಯಲ್ಲಿ, “ಅವರು ಈ ವಿಮಾನದಲ್ಲಿ ನಮ್ಮ ಮೇಲೆ ದಾಳಿ ಮಾಡಿದರು. ಪೈಲಟ್ನನ್ನು ಕೊಲ್ಲಲು ಪ್ರಯತ್ನಿಸಿದರು. ನಾವು ಅವರನ್ನು ನಿಯಂತ್ರಣಕ್ಕೆ ತೆಗೆದುಕೊಂಡೆವು” ಎಂದು ಹೇಳಿದ್ದಾನೆ.
ಮತ್ತೊಬ್ಬರ ಧ್ವನಿಯಲ್ಲಿ, “ನಾವು ಇಲ್ಲೇ ನಿಂತಿದ್ದೇವೆ. ಯಾರೂ ಪೈಲಟ್ ನ ಬಾಗಿಲನ್ನು ದಾಟಿ ಹೋಗುವಂತಿಲ್ಲ” ಎಂಬ ಮಾತು ಕೇಳಿಸುತ್ತದೆ. ಮತ್ತೊಬ್ಬ ಪೈಲಟ್ ಗೆ ಚಾಕುವಿನಿಂದ ಇರಿದ ವ್ಯಕ್ತಿಯತ್ತ ಪ್ರಯಾಣಿಕರೊಬ್ಬರು ಕೈ ತೋರಿಸುವ ದೃಶ್ಯವೂ ವಿಡಿಯೊದಲ್ಲಿದೆ.
ನೆರವಿಗೆ ಧಾವಿಸಿದ ಆಫ್-ಡ್ಯೂಟಿ ಪೈಲಟ್ ಗಳು:
ವಿಮಾನದ ಹಿಂಭಾಗದ ಆಸನಗಳಲ್ಲಿ ಇನ್ನೂ ಇಬ್ಬರು ಪೈಲಟ್ಗಳು ಇದ್ದರು. ಅವರು ಬಳಿಕದ ವಿಮಾನವನ್ನು ಚಲಾಯಿಸಬೇಕಿದ್ದ ಪರ್ಯಾಯ ಅಥವಾ ರಿಲೀಫ್ ಪೈಲಟ್ ಗಳಾಗಿದ್ದರು ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.
“ವಿಮಾನದ ನಿಯಂತ್ರಣವನ್ನು ತೆಗೆದುಕೊಳ್ಳಲು ಓಡಿ ಹೋಗಿ ಎಂದು ನಾನು ಅವರಿಗೆ ಕೂಗಿ ಹೇಳಿದೆ” ಎಂದು ಅವರು ‘ಜೆರುಸಲೆಮ್ ಪೋಸ್ಟ್’ಗೆ ತಿಳಿಸಿದ್ದಾರೆ.
180 ಪ್ರಯಾಣಿಕರ ಪೈಕಿ ಕರ್ತವ್ಯದಲ್ಲಿಲ್ಲದ ಕೆಲವು ಪೈಲಟ್ಗಳು ಅಂತಿಮವಾಗಿ ಮಧ್ಯಪ್ರವೇಶಿಸಿ ವಿಮಾನದ ನಿಯಂತ್ರಣ ಪಡೆದುಕೊಂಡು ತಬುಕ್ ನಲ್ಲಿ ಇಳಿಸಿದರು ಎಂದು ಮತ್ತೊಂದು ವರದಿ ತಿಳಿಸಿದೆ.
ಗಾಯಗೊಂಡ ಪೈಲಟ್ ಗೆ ದಂತವೈದ್ಯರ ಚಿಕಿತ್ಸೆ:
ವಿಮಾನದಲ್ಲಿದ್ದ ದಂತವೈದ್ಯರೊಬ್ಬರು ಗಾಯಗೊಂಡ ಪೈಲಟ್ ಗೆ ಜೀವ ರಕ್ಷಕ ಚಿಕಿತ್ಸೆ ನೀಡಿದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಭಾರತದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಎಂದು ಗುರುತಿಸಲಾದ ಗಾಯಗೊಂಡ ಪೈಲಟ್ ಗೆ ದಂತವೈದ್ಯರು ಚಿಕಿತ್ಸೆ ನೀಡಿದ್ದಾರೆ ಎಂದು ಹೇಳಲಾಗಿದೆ. ಬಳಿಕ ಕ್ಯಾಪ್ಟನ್ ಮತ್ತು ಸಹ-ಪೈಲಟ್ ಇಬ್ಬರನ್ನೂ ಸೌದಿ ಅರೇಬಿಯದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರಯಾಣಿಕರಿಗೆ ವಿಮಾನ ನಿಲ್ದಾಣದ ಟರ್ಮಿನಲ್ ನಲ್ಲಿ ಚಿಕಿತ್ಸೆ ನೀಡಲಾಯಿತು.
ಎರಡು ನಿಮಿಷದಲ್ಲಿ 17,400 ಅಡಿ ಇಳಿಕೆ:
ವಿಮಾನವು ಮೊದಲು ತುರ್ತು ಸಂಕೇತ, ಬಳಿಕ ಕಾನೂನುಬಾಹಿರ ಹಸ್ತಕ್ಷೇಪದ ಸಂಕೇತ ಹಾಗೂ ನಂತರ ಮತ್ತೆ ತುರ್ತು ಸಂಕೇತವನ್ನು ರವಾನಿಸಿತು ಎಂದು ‘ಫ್ಲೈಟ್ರಾಡಾರ್24’ ತಿಳಿಸಿದೆ.
ಮೊದಲ ತುರ್ತು ಸಂಕೇತ ರವಾನಿಸುವ ಮುನ್ನವೇ ವಿಮಾನವು ಸುಮಾರು ಎರಡು ನಿಮಿಷಗಳಲ್ಲಿ 17,400 ಅಡಿ ಎತ್ತರ ಕಳೆದುಕೊಂಡಿತ್ತು.
ಹಾರಾಟ ಆರಂಭವಾದ ಸುಮಾರು ಎರಡು ಗಂಟೆ 15 ನಿಮಿಷಗಳ ಬಳಿಕ, ಸೌದಿ–ಜೋರ್ಡಾನ್ ಗಡಿಯ ಸಮೀಪ ವಿಮಾನವು ಸಂಕಷ್ಟದ ಸಂಕೇತಗಳನ್ನು ರವಾನಿಸಿ ತನ್ನ ಹಾದಿಯನ್ನು ಬದಲಿಸಿತು.
ಇಸ್ರೇಲ್ ವಾಯುಪಡೆಯು ತುರ್ತಾಗಿ ಯುದ್ಧವಿಮಾನಗಳನ್ನು ಕಳುಹಿಸಿತ್ತು. ಆದರೆ ಅವು ಸೌದಿ ವಾಯುಪ್ರದೇಶ ತಲುಪುವ ಮುನ್ನವೇ ಹಿಂತಿರುಗಿಸಲಾಯಿತು ಎಂದು ಇಸ್ರೇಲ್ ಸೇನೆ ತಿಳಿಸಿದೆ.
Flydubai ವಿಮಾನ ಘಟನೆಯ ಕಾಲಾನುಕ್ರಮ:
ಬೆಳಿಗ್ಗೆ 6.05: FZ1073 ದುಬೈನಿಂದ ಹಾರಾಟ ಆರಂಭಿಸಿತು.
ಬೆಳಿಗ್ಗೆ 8.20: ವಿಮಾನ ಎತ್ತರ ಕಳೆದುಕೊಳ್ಳಲು ಆರಂಭಿಸಿತು. ಎರಡು ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ 17,400 ಅಡಿ ಎತ್ತರ ಕಳೆದುಕೊಂಡಿತು.
ಬೆಳಿಗ್ಗೆ 8.31: ‘ಕೋಡ್ 7700’ ರವಾನಿಸಲಾಯಿತು. ಇದು ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ICAO) ನಿಗದಿಪಡಿಸಿರುವ ತುರ್ತು ಪರಿಸ್ಥಿತಿಯ ಸಂಕೇತ.
ಬೆಳಿಗ್ಗೆ 8.35: ‘ಕೋಡ್ 7500’ ರವಾನಿಸಲಾಯಿತು. ಇದು ವಿಮಾನ ಅಪಹರಣದ ಸಂಕೇತ.
ಬೆಳಿಗ್ಗೆ 8.41: ವಿಮಾನ ಜೋರ್ಡಾನ್ ವಾಯುಪ್ರದೇಶವನ್ನು ಪ್ರವೇಶಿಸಿತು.
ಬೆಳಿಗ್ಗೆ 8.46: ವಿಮಾನ ಸೌದಿ ವಾಯುಪ್ರದೇಶವನ್ನು ಮರುಪ್ರವೇಶಿಸಿತು.
ಬೆಳಿಗ್ಗೆ 9.54: FZ1073 ತಬುಕ್ ವಿಮಾನ ನಿಲ್ದಾಣದಲ್ಲಿ ಇಳಿಯಿತು.
ತಬುಕ್ ನ ಪ್ರಿನ್ಸ್ ಸುಲ್ತಾನ್ ಬಿನ್ ಅಬ್ದುಲಝೀಝ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೇಳಿಕೆ ಪ್ರಕಾರ, ಸ್ಥಳೀಯ ಕಾಲಮಾನ ಬೆಳಿಗ್ಗೆ 8.44ಕ್ಕೆ ವಿಮಾನ ನಿಲ್ದಾಣಕ್ಕೆ ತುರ್ತು ಸಂದೇಶ ಬಂದಿತು. ತಕ್ಷಣ ತುರ್ತು ಪರಿಸ್ಥಿತಿ ಘೋಷಿಸಲಾಯಿತು.
ವಿಮಾನವು ಸ್ಥಳೀಯ ಕಾಲಮಾನ ಬೆಳಿಗ್ಗೆ 9.45ಕ್ಕೆ ಇಳಿಯಿತು ಎಂದು ವಿಮಾನ ನಿಲ್ದಾಣದ ಹೇಳಿಕೆ ತಿಳಿಸಿದೆ. ತುರ್ತು ಕರೆ ಬಂದ ಒಂದು ಗಂಟೆಗೂ ಸ್ವಲ್ಪ ಹೆಚ್ಚು ಸಮಯದ ಬಳಿಕ ವಿಮಾನ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿತು. ಕ್ಯಾಪ್ಟನ್ ಮತ್ತು ಸಹ-ಪೈಲಟ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರಯಾಣಿಕರಿಗಾಗಿ ಬದಲಿ ವಿಮಾನದ ವ್ಯವಸ್ಥೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿತ್ತು.
ಭಯೋತ್ಪಾದಕ ದಾಳಿಯ ಶಂಕೆ:
ಘಟನೆಯ ಹಿಂದೆ ಇಸ್ರೇಲಿಗಳ ಮೇಲೆ ದಾಳಿ ನಡೆಸುವ ಉದ್ದೇಶವಿತ್ತೇ ಎಂಬುದು ಸೇರಿದಂತೆ ವಿವಿಧ ಆಯಾಮಗಳಲ್ಲಿ ಇಸ್ರೇಲಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಸಂಘರ್ಷಕ್ಕೆ ನಿಖರ ಕಾರಣವೇನು, ಅದರ ಉದ್ದೇಶವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವಿಮಾನಯಾನ ಸಂಸ್ಥೆ ಅಥವಾ ಅಧಿಕಾರಿಗಳು ನಿಖರವಾಗಿ ಏನಾಯಿತು ಎಂಬುದರ ಸಂಪೂರ್ಣ ವಿವರ ನೀಡಿಲ್ಲ.
ಇಸ್ರೇಲ್ನ ಇಬ್ಬರು ಬಲಪಂಥೀಯ ಸಚಿವರು ಘಟನೆಯನ್ನು ವಿಫಲಗೊಂಡ ಭಯೋತ್ಪಾದಕ ದಾಳಿ ಎಂದು ಬಣ್ಣಿಸಿದ್ದಾರೆ.
ಭದ್ರತಾ ಸಚಿವ ಇಟಮಾರ್ ಬೆನ್ ಗ್ವಿರ್, “ಒಬ್ಬ ಭಯೋತ್ಪಾದಕ ವಿಮಾನವನ್ನು ಪತನಗೊಳಿಸಿ ಅದರಲ್ಲಿದ್ದ ಇಸ್ರೇಲಿಗಳನ್ನು ಕೊಲ್ಲಲು ಯತ್ನಿಸಿದ್ದಾನೆ” ಎಂದು ಹೇಳಿದ್ದಾರೆ.
ಪ್ರಧಾನಿ ಬೆಂಜಮಿನ್ ನೆತನ್ಯಾಹು ಪರಿಸ್ಥಿತಿಯ ಕುರಿತು ಸಮಾಲೋಚನೆ ನಡೆಸಿದ್ದು, ಘಟನೆಯ ಬೆಳವಣಿಗೆಗಳ ಮೇಲೆ ನಿಗಾ ಇರಿಸಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ.
“ಘಟನೆ ನಿಯಂತ್ರಣದಲ್ಲಿದೆ. ಇಸ್ರೇಲಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಸ್ರೇಲ್ ಗೆ ಮರಳಿ ಕರೆತರಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ” ಎಂದು ಪ್ರಧಾನಿ ಕಚೇರಿ ಹೇಳಿದೆ.
ವಿಮಾನದಲ್ಲಿ 160ರಿಂದ 180ರವರೆಗೆ ಪ್ರಯಾಣಿಕರಿದ್ದರು ಎಂದು ಇಸ್ರೇಲಿ ಅಧಿಕಾರಿಗಳು ತಿಳಿಸಿದ್ದಾರೆ.
“ದಾಳಿ ನಡೆಸಿದ ಪೈಲಟ್ ನನ್ನು ಬಂಧಿಸಲಾಗಿದ್ದು, ಸೌದಿ ಅಧಿಕಾರಿಗಳು ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ” ಎಂದು ನೆತನ್ಯಾಹು ಹೇಳಿದ್ದಾರೆ.
ದುಬೈ–ಟೆಲ್ ಅವಿವ್ ನಡುವಿನ ಮೊದಲ ಕಡಿಮೆ ದರದ ವಿಮಾನಯಾನ:
2020ರಲ್ಲಿ ‘ಅಬ್ರಹಾಂ ಒಪ್ಪಂದ’ದಡಿ ಇಸ್ರೇಲ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಡುವಿನ ಸಂಬಂಧಗಳು ಸುಧಾರಿಸಿದ ಬಳಿಕ, ದುಬೈ ಮತ್ತು ಟೆಲ್ ಅವಿವ್ ನಡುವೆ ವಾಣಿಜ್ಯ ವಿಮಾನಯಾನ ಆರಂಭಿಸಿದ ಮೊದಲ ಕಡಿಮೆ ದರದ ವಿಮಾನಯಾನ ಸಂಸ್ಥೆ ಫ್ಲೈದುಬೈ ಆಗಿತ್ತು.
ಅಸ್ಪಷ್ಟವಾಗಿರುವ ಸಂಗತಿಗಳು:
ಕಾಕ್ಪಿಟ್ನಲ್ಲಿ ಸಂಘರ್ಷ ಏಕೆ ನಡೆಯಿತು, ಪೈಲಟ್ಗಳ ನಡುವೆ ಚಾಕು ಇರಿತಕ್ಕೆ ಕಾರಣವೇನು, ದಾಳಿಯ ಉದ್ದೇಶವೇನು ಹಾಗೂ ಘಟನೆ ಭಯೋತ್ಪಾದಕ ಕೃತ್ಯವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇಸ್ರೇಲಿ ಅಧಿಕಾರಿಗಳು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ. ಈ ಮಧ್ಯೆ, ವಿಮಾನದಲ್ಲಿದ್ದವರ ಹೇಳಿಕೆಗಳು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೊಗಳು ಹಾಗೂ ವಿಮಾನದ ಹಾರಾಟದ ದಾಖಲೆಗಳು ಘಟನೆಯ ಸ್ವರೂಪದ ಕುರಿತು ತನಿಖೆಗೆ ಪ್ರಮುಖ ಸುಳಿವುಗಳಾಗಿವೆ.






