ಹಮಾಸ್ನ ನಾಶ ಅಸಾಧ್ಯ : ಇಸ್ರೇಲ್ ಸೇನಾ ವಕ್ತಾರ ಹಗಾರಿ
ಪ್ರಧಾನಿ ಬೆಂಜಮಿನ್ ನಿಲುವನ್ನು ಒಪ್ಪದ ಅಡ್ಮಿರಲ್ ಡೇನಿಯಲ್ ಹಗಾರಿ
ಅಡ್ಮಿರಲ್ ಡೇನಿಯಲ್ ಹಗಾರಿ | PC :wikipedia.
ಟೆಲ್ಅವೀವ್ : ಗಾಜಾದ ಮೇಲೆ ಇಸ್ರೇಲ್ ಅಕ್ರಮಣವು 258ನೇ ದಿನಕ್ಕೆ ಕಾಲಿರಿಸಿರುವಂತೆಯೇ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ನಿಲುವಿನ ವಿರುದ್ಧ ಇಸ್ರೇಲಿ ಸೇನಾ ವಕ್ತಾರರೊಬ್ಬರಿಂದಲೇ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ.
ಹಮಾಸ್ ಅನ್ನು ನಾಶಪಡಿಸುವ ಬೆಂಜಮಿನ್ ಸರಕಾರದ ಗುರಿಯನ್ನು ಸಾಧಿಸುವುದು ಸಾಧ್ಯವಿಲ್ಲವೆಂದು ಇಸ್ರೇಲ್ ರಕ್ಷಣಾಪಡೆಗಳ ಉನ್ನತ ವಕ್ತಾರ ಅಡ್ಮಿರಲ್ ಡೇನಿಯಲ್ ಹಗಾರಿ ಹೇಳಿದ್ದಾರೆ.
‘‘ ಹಮಾಸ್ ಎಂಬುದು ಒಂದು ಚಿಂತನೆಯಾಗಿದೆ. ನಾವು ಹಮಾಸ್ ಅನ್ನು ನಾಶಪಡಿಸಬಲ್ಲೆವು ಎಂದು ಯಾರಾದರೂ ಯೋಚಿಸಿದಲ್ಲಿ ಅದು ತಪ್ಪು’’ ಎಂದು ಹಗಾರಿ ಅವರು ಇಸ್ರೇಲಿ ಸುದ್ದಿವಾಹಿನಿ ‘ಚಾನೆಲ್ 13’ಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಹಮಾಸ್ ಅನ್ನು ನಾಶಪಡಿಸುವ ಗುರಿಯತ್ತ ಸಾಗುವ ಬದಲು ಇಸ್ರೇಲ್ನ ರಾಜಕೀಯ ನಾಯಕತ್ವವು ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಬೇಕಾಗಿದೆ. ಇಲ್ಲದೆ ಇದ್ದಲ್ಲಿ ಸಮಸ್ಯೆ ಉಳಿದುಕೊಳ್ಳಲಿದೆ’’ ಂದು ಅವರು ಹೇಳಿದ್ದಾರೆ.
ಆದರೆ ಇಸ್ರೇಲಿ ಸೇನಾ ವಕ್ತಾರನ ಹೇಳಿಕೆಯನ್ನು ಪ್ರಧಾನಿ ನೆತನ್ಯಾಹು ಅವರ ಕಾರ್ಯಾಲಯವು ತಳ್ಳಿಹಾಕಿದೆ. ‘‘ಹಮಾಸ್ನ ಸೇನಾ ಹಾಗೂ ಆಡಳಿತಾತ್ಮಕ ಸಾಮರ್ಥ್ಯವನ್ನು ನಾಶಪಡಿಸುವುದೇ ಯುದ್ಧದ ಗುರಿಗಳಲ್ಲೊಂದಾಗಿದೆ ಎಂಬುದನ್ನು ಪ್ರಧಾನಿ ನೆತನ್ಯಾಹು ನೇತೃತ್ವದ ರಾಜಕೀಯ ಹಾಗೂ ಭದ್ರತಾ ಸಂಪುಟ ವ್ಯಾಖ್ಯಾನಿಸಿದೆ. ಇದನ್ನು ಈಡೇರಿಸಲು ಐಡಿಎಫ್ (ಇಸ್ರೇಲಿ ರಕ್ಷಣಾ ಪಡೆ) ಬದ್ಧವಾಗಿದೆ’’ ಎಂದು ಅದು ಹೇಳಿದೆ.
ಈ ಮಧ್ಯೆ ನೆತನ್ಯಾಹು ಕಾರ್ಯಾಲಯದ ಹೇಳಿಕೆಗೆ ಐಡಿಎಫ್ ತನ್ನ ಸಮ್ಮತಿಯನ್ನು ವ್ಯಕ್ತಪಡಿಸಿದೆ. ಇಸ್ರೇಲ್ನ ಯುದ್ಧದ ಗುರಿಗಳನ್ನು ಸಾಧಿಸಲು ತಾನು ಅವಿಶ್ರಾಂತವಾಗಿ ಶ್ರಮಿಸುವುದಾಗಿ ಅದು ಹೇಳಿದೆ. ಹಗಾರಿ ಅವರು ಹಮಾಸ್ನ ಚಿಂತನೆ ಹಾಗೂ ಸಿದ್ಧಾಂತವನ್ನು ನಾಶಪಡಿಸಲು ಅಸಾಧ್ಯವೆಂದಷ್ಟೇ ಹೇಳಿದ್ದಾರೆ. ಅವರ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಲಾಗಿದೆ ಎಂದು ಐಡಿಎಫ್ ಪ್ರಕಟಣೆಯೊಂದರಲ್ಲಿ ತಿಳಿಸಿದೆ.
ಹಗಾರಿ ಅವರ ಹೇಳಿಕೆಯನ್ನು ಹಮಾಸ್ ಸ್ವಾಗತಿಸಿದ್ದು, ಇದು ಸೋಲನ್ನು ಒಪ್ಪಿಕೊಂಡಂತಾಗಿದೆಯೆಂದು ಅದು ಹೇಳಿದೆ.
ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆಗಾಗಿ ಗಾಝಾದಲ್ಲಿ ಇಸ್ರೇಲ್ ಸೇನೆ ನಡೆಸುತ್ತಿರುವ ದಾಳಿಯಲ್ಲಿ ಸಾವಿರಾರು ಮಕ್ಕಳು, ಮಹಿಳೆಯರು ಸೇರಿದಂತೆ 37 ಸಾವಿರಕ್ಕೂ ಅಧಿಕ ಫೆಲೆಸ್ತೀನಿಯರು ಸಾವನ್ನಪ್ಪಿದ್ದು, ಸಾವಿರಾರು ಮಂದಿ ಗಾಯಗೊಂಡಿರುವ ಬಗ್ಗೆ ವಿಶ್ವದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇಸ್ರೇಲ್ ಕೂಡಲೇ ಕದನವಿರಾಮವನ್ನು ಘೋಷಿಸಬೇಕೆಂದು ಅವು ಆಗ್ರಹಿಸಿವೆ.