`ಸಾರ್ವತ್ರಿಕ ಕಿಡ್ನಿ' ಅಭಿವೃದ್ಧಿ: ವೈದ್ಯಕೀಯ ವಿಜ್ಞಾನದಲ್ಲಿ ಮಹತ್ವದ ಸಾಧನೆ

ಸಾಂದರ್ಭಿಕ ಚಿತ್ರ | Photo Credit : freepik.com
ಬೀಜಿಂಗ್, ಅ.17: ಯಾವುದೇ ರಕ್ತದ ಗುಂಪಿನ ರೋಗಿಗಳಿಗೆ ಕಸಿ ಮಾಡಬಹುದಾದ `ಸಾರ್ವತ್ರಿಕ ಕಿಡ್ನಿ'ಯನ್ನು ಚೀನಾ ಮತ್ತು ಕೆನಡಾದ ಸಂಶೋಧಕರು ಅಭಿವೃದ್ಧಿ ಪಡಿಸಿರುವುದಾಗಿ ವರದಿಯಾಗಿದೆ.
ಒಂದು ದಶಕದ ನಿರಂತರ ಸಂಶೋಧನೆಯ ನಂತರ ಸಾಧಿಸಿದ ಪ್ರಗತಿಯು ಕಿಡ್ನಿ ಕಸಿಯಲ್ಲಿ ಕ್ರಾಂತಿಯನ್ನು ಉಂಟು ಮಾಡಬಹುದು ಮತ್ತು ಕಿಡ್ನಿ ದಾನಿಗಳಿಗಾಗಿ ಹುಡುಕುತ್ತಿರುವಾಗ ರೋಗಿಗಳು ಎದುರಿಸುವ ದೀರ್ಘ, ಸಂಕಟದ ಕಾಯುವಿಕೆಯನ್ನು ಸಮರ್ಥವಾಗಿ ಕೊನೆಗೊಳಿಸಬಹುದು ಎಂದು `ಸೈನ್ಸ್ ಅಲರ್ಟ್' ವರದಿ ಮಾಡಿದೆ.
ವಿಜ್ಞಾನಿಗಳ ತಂಡವು ಮಾನವನ ದೇಹದೊಳಗೆ ಹಲವಾರು ದಿನಗಳ ವರೆಗೆ ಸುಧಾರಿತ ಕಿಡ್ನಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದ್ದು ಇದು ಕಿಡ್ನಿ ಕಸಿಯ ಸಂದರ್ಭ ಸಾಂಪ್ರದಾಯಿಕ `ರಕ್ತದ ಗುಂಪಿನ' ತಡೆಯನ್ನು ಬೈಪಾಸ್ ಮಾಡುವ ಅಂಗವೊಂದನ್ನು ಅಭಿವೃದ್ಧಿಗೊಳಿಸುವತ್ತ ಮಹತ್ವದ ಹೆಜ್ಜೆಯಾಗಿದೆ. ಸಂಶೋಧನೆಯು ಇನ್ನೂ ಆರಂಭಿಕ ಹಂತದಲ್ಲಿದ್ದು ಜೀವಂತ ರೋಗಿಗಳ ಬಳಕೆಗೂ ಮುನ್ನ ಹಲವು ಪೂರ್ವ ವೈದ್ಯಕೀಯ ಪ್ರಯೋಗಗಳ ಅಗತ್ಯವಿದೆ ಎಂದು ವಿಜ್ಞಾನಿಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.





