ಢಾಕಾದಲ್ಲಿ ಜೈಶಂಕರ್–ಪಾಕ್ ಸಂಸತ್ತಿನ ಸ್ಪೀಕರ್ ಸಾದಿಕ್ ಭೇಟಿ

Photo Credit : indiatoday.in
ಢಾಕಾ, ಡಿ.31: ಬುಧವಾರ ಢಾಕಾದಲ್ಲಿ ನಡೆದ ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಾಲಿದಾ ಝಿಯಾ ಅವರ ಅಂತ್ಯಸಂಸ್ಕಾರದ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ ಸ್ಪೀಕರ್ ಅಯಾಝ್ ಸಾದಿಕ್ ಅವರನ್ನು ಭೇಟಿಯಾಗಿರುವುದಾಗಿ ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯಸ್ಥ ಮುಹಮ್ಮದ್ ಯೂನುಸ್ ಹೇಳಿದ್ದಾರೆ.
ಮೇ ತಿಂಗಳಲ್ಲಿ ಭಾರತ–ಪಾಕ್ ಮಿಲಿಟರಿ ಸಂಘರ್ಷದ ಬಳಿಕ ಉಭಯ ದೇಶಗಳ ಉನ್ನತ ಅಧಿಕಾರಿಗಳ ನಡುವಿನ ಮೊದಲ ಭೇಟಿ ಇದಾಗಿದೆ. ಭೇಟಿಯ ಫೋಟೋಗಳನ್ನು ಮುಹಮ್ಮದ್ ಯೂನುಸ್ ಹಂಚಿಕೊಂಡಿದ್ದಾರೆ.
`ಬುಧವಾರ ಮಾಜಿ ಪ್ರಧಾನಿ ಝಿಯಾ ಅವರ ಅಂತ್ಯಸಂಸ್ಕಾರಕ್ಕೂ ಮುನ್ನ ಢಾಕಾದಲ್ಲಿ ಖಾಲಿದಾ ಝಿಯಾ ಅವರ ನಿವಾಸದಲ್ಲಿ ಪಾಕ್ ರಾಷ್ಟ್ರೀಯ ಅಸೆಂಬ್ಲಿ ಸ್ಪೀಕರ್ ಅಯಾಝ್ ಸಾದಿಕ್, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಶುಭಾಶಯ ವಿನಿಮಯ ಮಾಡಿಕೊಂಡರು’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಜೈಶಂಕರ್–ಅಯಾಝ್ ಸಾದಿಕ್ ಭೇಟಿಯ ಕುರಿತು ಪ್ರತಿಕ್ರಿಯಿಸಿರುವ ಭಾರತ, ಇದು ಶಿಷ್ಟಾಚಾರದ ಭೇಟಿ ಎಂದು ಸ್ಪಷ್ಟಪಡಿಸಿದೆ. ಬಹುಪಕ್ಷೀಯ ಕಾರ್ಯಕ್ರಮಗಳಲ್ಲಿ ಇಂತಹ ಸಂಕ್ಷಿಪ್ತ ಭೇಟಿಗಳು ಸಾಮಾನ್ಯವಾಗಿದ್ದು, ಇದು ಯಾವುದೇ ರಾಜತಾಂತ್ರಿಕ ಭೇಟಿ ಅಥವಾ ಸಂವಾದ ಪ್ರಕ್ರಿಯೆಯಲ್ಲ ಎಂದು ಭಾರತ ಸರಕಾರದ ಮೂಲಗಳು ತಿಳಿಸಿವೆ.







