ಉಕ್ರೇನ್ ನಾಯಕ ಝೆಲೆನ್ಸ್ಕಿ ಸರ್ವಾಧಿಕಾರಿ: ಟ್ರಂಪ್ ವಾಗ್ದಾಳಿ

ವೊಲೊಡಿಮಿರ್ ಝೆಲೆನ್ಸ್ಕಿ (Photo credit: PTI)
ಮಿಯಾಮಿ: ಉಕ್ರೇನ್ ನಾಯಕ ವೊಲೊಡಿಮಿರ್ ಝೆಲೆನ್ಸ್ಕಿ ಸರ್ವಾಧಿಕಾರಿ ಎಂದು ಬುಧವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಟೀಕಾಪ್ರಹಾರ ನಡೆಸಿದ್ದಾರೆ. ಮೂರು ವರ್ಷಗಳ ಹಿಂದೆ ಉಕ್ರೇನ್ ಮೇಲೆ ರಶ್ಯ ನಡೆಸಿದ ಆಕ್ರಮಣದಿಂದ ಉಂಟಾಗಿರುವ ಬಿಕ್ಕಟ್ಟನ್ನು ಪರಿಹರಿಸುವ ಪ್ರಯತ್ನಗಳು ಮುಂದುವರಿದಿರುವಾಗಲೇ, ಟ್ರಂಪ್ ರ ಈ ಹೇಳಿಕೆ ಝೆಲೆನ್ಸ್ಕಿ ಮತ್ತು ಅವರ ನಡುವಿನ ಕಂದಕವನ್ನು ಮತ್ತಷ್ಟು ಹಿಗ್ಗಿಸಿದೆ.
ಉಕ್ರೇನ್ ಮೇಲೆ ರಶ್ಯ ದಾಳಿ ನಡೆಸಿದಾಗಿನಿಂದ ಉಕ್ರೇನ್ ಗೆ ಅಮೆರಿಕ ಹಣಕಾಸು ಹಾಗೂ ಶಸ್ತ್ರಾಸ್ತ್ರಗಳ ನೆರವನ್ನು ಒದಗಿಸಿತ್ತು. ಆದರೆ, ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸುತ್ತಿದ್ದಂತೆಯೆ ಅಮೆರಿಕದ ಈ ನೀತಿಯಲ್ಲಿ ದಿಢೀರ್ ಬದಲಾವಣೆಯಾಗಿದ್ದು, ಡೊನಾಲ್ಡ್ ಟ್ರಂಪ್ ರಶ್ಯ ದೊಂದಿಗೆ ಮಾತುಕತೆಯ ಬಾಗಿಲು ತೆರೆದಿದ್ದಾರೆ.
“ಚುನಾವಣಾರಹಿತ ಸರ್ವಾಧಿಕಾರಿ ಝೆಲೆನ್ಸ್ಕಿ ಬೇಗ ನಿರ್ಗಮಿಸುವುದೊಳಿತು. ಇಲ್ಲವಾದರೆ, ಅವರಿಗೆ ಯಾವ ದೇಶವೂ ಉಳಿಯುವುದಿಲ್ಲ” ಎಂದು ʼಟ್ರುತ್ʼ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಟ್ರಂಪ್ ಗುಡುಗಿದ್ದಾರೆ. ಉಕ್ರೇನ್ ನಾಯಕ ವೊಲೊದಿಮಿರ್ ಝೆಲೆನ್ಸ್ಕಿ ಅವರ ಐದು ವರ್ಷಗಳ ಅಧಿಕಾರಾವಧಿ ಕಳೆದ ವರ್ಷ ಮುಕ್ತಾಯಗೊಂಡಿತ್ತು.
ಉಕ್ರೇನ್ ಕಾನೂನುಗಳ ಪ್ರಕಾರ, ಯದ್ಧ ಕಾಲದಲ್ಲಿ ಚುನಾವಣೆಗಳನ್ನು ನಡೆಸಬೇಕಾದ ಅಗತ್ಯವಿಲ್ಲ.
ಇದಕ್ಕೂ ಮುನ್ನ, ಮಂಗಳವಾರ ಸುದ್ದಿಗೋಷ್ಠಿ ಆಯೋಜಿಸಿದ್ದ ಟ್ರಂಪ್, ಝೆಲೆನ್ಸ್ಕಿಯನ್ನು ತೀವ್ರವಾಗಿ ಟೀಕಿಸಿದ್ದರು. ಉಕ್ರೇನ್ ಹಾಗೂ ರಶ್ಯ ನಡುವಿನ ಬಿಕ್ಕಟ್ಟಿನ ಕುರಿತು ರಶ್ಯ ಪ್ರತಿಪಾದಿಸುತ್ತಾ ಬರುತ್ತಿರುವ ನಿರೂಪಣೆಗಳನ್ನು ಪುನರುಚ್ಚರಿಸಿದ್ದ ಅವರು, ಯುದ್ಧವನ್ನು ಅಂತ್ಯಗೊಳಿಸಬೇಕು ಎಂದು ಆಗ್ರಹಿಸಿದ್ದರು.
ಟ್ರಂಪ್ ಹೇಳಿಕೆಗೆ ತಿರುಗೇಟು ನೀಡಿದ್ದ ಝೆಲೆನ್ಸ್ಕಿ, ಯುದ್ಧವನ್ನು ಉಕ್ರೇನ್ ಪ್ರಾರಂಭಿಸಿತು ಎಂಬ ದೂಷಣೆ ಸೇರಿದಂತೆ ರಶ್ಯದ ತಪ್ಪು ಮಾಹಿತಿಗೆ ಟ್ರಂಪ್ ಬಲಿಯಾಗಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದರು.







