ವ್ಯಾಪಾರ ಸಮರ ಮತ್ತು ಇರಾನ್ ಸಂಘರ್ಷ: ಅಮೆರಿಕನ್ನರ ವಿಶ್ವಾಸ ಕಳೆದುಕೊಂಡರೇ ಡೊನಾಲ್ಡ್ ಟ್ರಂಪ್?
ಸಮೀಕ್ಷೆಗಳು ಏನು ಹೇಳುತ್ತವೆ?

ಡೊನಾಲ್ಡ್ ಟ್ರಂಪ್ (Photo: PTI)
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಸ್ವದೇಶದಲ್ಲೇ ಮತದಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎಂದು ಇತ್ತೀಚಿನ ಸಮೀಕ್ಷೆಗಳು ಹೇಳುತ್ತಿವೆ.
ವ್ಯಾಪಾರ ಸಮರ ಮತ್ತು ಇರಾನ್ ವಿರುದ್ಧದ ಯುದ್ಧವೆಂಬ ಎರಡು ಬೃಹತ್ ಜೂಜುಗಳನ್ನು ಒಂದೇ ಬಾರಿಗೆ ಆಡಿದ ಟ್ರಂಪ್ ಸರಕಾರಕ್ಕೆ ಅಲ್ಲಿ ಸಾರ್ವಜನಿಕ ಬೆಂಬಲ ತೀವ್ರವಾಗಿ ಕುಸಿಯುತ್ತಿದೆ. ಇತ್ತೀಚಿನ ಸಿಎನ್ಎನ್ ಮತ್ತು ಫಾಕ್ಸ್ ನ್ಯೂಸ್ ಸಮೀಕ್ಷೆಗಳ ಅಂಕಿ-ಅಂಶಗಳು ವಾಷಿಂಗ್ಟನ್ನ ಆಡಳಿತಾರೂಢ ರಿಪಬ್ಲಿಕನ್ ಪಾಳೆಯದಲ್ಲಿ ತೀವ್ರ ನಡುಕ ಹುಟ್ಟಿಸಿವೆ. ಅಮೆರಿಕದ ಸಾಮಾನ್ಯ ಜನರಿಗೆ ಈಗ ದಿನನಿತ್ಯದ ಬದುಕಿನ ವೆಚ್ಚವೇ ದೊಡ್ಡ ತಲೆನೋವಾಗಿದೆ.
ಅಮೆರಿಕದಲ್ಲಿ ವಾಹನಗಳಿಗೆ ಬಳಸುವ ಪೆಟ್ರೋಲನ್ನು 'ಗ್ಯಾಸ್' ಎಂದು ಕರೆಯುತ್ತಾರೆ. ಯುದ್ಧ ಆರಂಭವಾದ ದಿನದಂದು ಗ್ಯಾಲನ್ಗೆ ಕೇವಲ 2.98 ಡಾಲರ್ ಇದ್ದ ಗ್ಯಾಸ್ ಬೆಲೆ ಈಗ 4.48 ಡಾಲರ್ಗೆ ಮುಟ್ಟಿದೆ. ಇನ್ನು ಸರಕು ಸಾಗಣೆಗೆ ಅತ್ಯಗತ್ಯವಾದ ಡೀಸೆಲ್ ಪರಿಸ್ಥಿತಿ ಮತ್ತಷ್ಟು ಭೀಕರವಾಗಿದೆ. ಯುದ್ಧ ಶುರುವಾದಾಗ 3.76 ಡಾಲರ್ ಇದ್ದ ಡೀಸೆಲ್ ದರ, ಇಂದು 6.51 ಡಾಲರ್ಗೆ ಜಿಗಿದಿದೆ. ಅಂದರೆ ಡೀಸೆಲ್ ಬೆಲೆಯಲ್ಲಿ ಆದ ಈ ಭಾರೀ ಏರಿಕೆ ಅಮೆರಿಕದ ಸೂಪರ್ಮಾರ್ಕೆಟ್ಗಳ ಪ್ರತಿಯೊಂದು ದಿನಸಿ ಪದಾರ್ಥಗಳ ಮೇಲೂ ನೇರ ಪರಿಣಾಮ ಬೀರಿದೆ.
ಸಿಎನ್ಎನ್ ಮತ್ತು ಎಸ್ಎಸ್ಆರ್ಎಸ್ ಜಂಟಿಯಾಗಿ ನಡೆಸಿದ ಸಮೀಕ್ಷೆಯ ಪ್ರಕಾರ, 76% ಅಮೆರಿಕನ್ನರು ಇರಾನ್ ಯುದ್ಧವು ಅಮೆರಿಕದ ಸೈನಿಕರ ಜೀವ ಮತ್ತು ಸರ್ಕಾರದ ಬೊಕ್ಕಸದ ಹೊರೆಗೆ ಯೋಗ್ಯವಲ್ಲ ಎಂದು ತಳ್ಳಿಹಾಕಿದ್ದಾರೆ.
ಕೇವಲ 24% ಜನ ಮಾತ್ರ ಇದನ್ನು ಬೆಂಬಲಿಸುತ್ತಿದ್ದಾರೆ. ಸುಮಾರು ಏಳು ತಿಂಗಳುಗಳಿಂದ ಎಡಬಿಡದೆ ನಡೆಯುತ್ತಿರುವ ಈ ಸಂಘರ್ಷದಲ್ಲಿ ಅಮೆರಿಕ ಗೆಲ್ಲುತ್ತಿಲ್ಲ ಎಂದು ಮೂರನೇ ಎರಡರಷ್ಟು ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ.
ಅಷ್ಟೇ ಅಲ್ಲ, ಶೇಕಡಾ 78ರಷ್ಟು ಜನರು ಟ್ರಂಪ್ ಈ ಯುದ್ಧವನ್ನು ಕೊನೆಗೊಳಿಸಲು ಯಾವುದೇ ಗಂಭೀರ ಪ್ರಯತ್ನ ಮಾಡುತ್ತಿಲ್ಲ ಎಂದು ದೂರಿದ್ದಾರೆ. ಈ ಯುದ್ಧಕ್ಕೆ ಯಾವುದೇ ಸ್ಪಷ್ಟ ಕಾರ್ಯತಂತ್ರವಿಲ್ಲ ಎಂದು 75% ಜನ ಮುಕ್ತವಾಗಿ ಹೇಳುತ್ತಿದ್ದಾರೆ.
2018ರ ಮೊದಲ ಅವಧಿಯ ಹೊತ್ತಿಗೆ ದೇಶದ ಆರ್ಥಿಕ ಪರಿಸ್ಥಿತಿ ಅದ್ಭುತವಾಗಿದೆ ಎಂದು ಬೀಗುತ್ತಿದ್ದ ಟ್ರಂಪ್ಗೆ ಇಂದಿನ ಅಂಕಿಸಂಖ್ಯೆಗಳು ಶಾಕ್ ನೀಡುವಂತಿವೆ.
ಆವತ್ತು ಶೇಕಡಾ 69ರಷ್ಟು ಅಮೆರಿಕನ್ನರು ದೇಶದ ಆರ್ಥಿಕತೆ ಅತ್ಯುತ್ತಮವಾಗಿದೆ ಎಂದು ಪ್ರಶಂಸಿಸಿದ್ದರು. ಆದರೆ ಇಂದು ಆ ಪ್ರಮಾಣ ಕೇವಲ 28 ಶೇಕಡಾಕ್ಕೆ ಕುಸಿದುಬಿದ್ದಿದೆ. ಅಂದರೆ ಮೂರನೇ ಒಂದಕ್ಕಿಂತ ಕಡಿಮೆ ಜನರಿಗೆ ಮಾತ್ರ ಆರ್ಥಿಕತೆಯ ಮೇಲೆ ವಿಶ್ವಾಸ ಉಳಿದಿದೆ.
ಇನ್ನು ಟ್ರಂಪ್ ಆರ್ಥಿಕತೆಯನ್ನು ನಿಭಾಯಿಸುತ್ತಿರುವ ರೀತಿಯನ್ನು 2018ರ ಮೊದಲ ಅವಧಿಯಲ್ಲಿ 49% ಜನ ಅನುಮೋದಿಸಿದ್ದರೆ, ಇಂದು ಅದು 27% ಗೆ ಕುಸಿದಿದೆ. ವಿದೇಶಾಂಗ ವ್ಯವಹಾರಗಳ ನಿರ್ವಹಣೆಯಲ್ಲಿ ಅವರ ಒಟ್ಟಾರೆ ರೇಟಿಂಗ್ ಕೇವಲ 29%ಕ್ಕೆ ಇಳಿದಿದ್ದು, ಇದು ಅವರ ಎರಡೂ ಅಧ್ಯಕ್ಷೀಯ ಅವಧಿಗಳಲ್ಲೇ ಅತ್ಯಂತ ಕನಿಷ್ಠ ಮಟ್ಟದ ದಾಖಲೆಯಾಗಿದೆ.
ಇರಾನ್ ವಿಚಾರದಲ್ಲಿ ಟ್ರಂಪ್ಗೆ ಸ್ವಂತ ಪಕ್ಷದಲ್ಲೇ ಇದ್ದ ನಿಷ್ಠಾವಂತ ಮತಬ್ಯಾಂಕ್ನಲ್ಲೂ ಬಿರುಕು ಮೂಡಿದೆ. ಮಾರ್ಚ್ ತಿಂಗಳಲ್ಲಿ ಶೇಕಡಾ 73ರಷ್ಟಿದ್ದ ರಿಪಬ್ಲಿಕನ್ ಪಕ್ಷದವರ ಬೆಂಬಲ ಈಗ 60%ಗೆ ಕುಸಿದಿದೆ.
ಅದರಲ್ಲೂ 45 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವ ರಿಪಬ್ಲಿಕನ್ನರಲ್ಲಿ ಶೇಕಡಾ 53ರಷ್ಟು ಮಂದಿ ಟ್ರಂಪ್ ಕಾರ್ಯವೈಖರಿಯನ್ನು ನೇರವಾಗಿ ತಿರಸ್ಕರಿಸಿದ್ದಾರೆ. ಇನ್ನು ಮೇಕ್ ಅಮೆರಿಕಾ ಗ್ರೇಟ್ ಅಗೈನ್ ಅಂದ್ರೆ ಮಾಗಾ ಚಳವಳಿಯೊಂದಿಗೆ ಗುರುತಿಸಿಕೊಳ್ಳದ ಸಾಂಪ್ರದಾಯಿಕ ರಿಪಬ್ಲಿಕನ್ ಮತದಾರರಲ್ಲೂ ಶೇಕಡಾ 54ರಷ್ಟು ಜನರು ಅಧ್ಯಕ್ಷರ ನೀತಿಗಳನ್ನು ವಿರೋಧಿಸುತ್ತಿದ್ದಾರೆ.
ಯುದ್ಧ ಮಂಡಳಿಯ ಮುಂಚೂಣಿಯಲ್ಲಿರುವ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ 40%, ಉಪಾಧ್ಯಕ್ಷ ಜೆಡಿ ವ್ಯಾನ್ಸ್ 36% ಮತ್ತು ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಕೇವಲ 34% ಸಾರ್ವಜನಿಕ ಬೆಂಬಲ ಹೊಂದಿದ್ದಾರೆ. ಮಾಗಾ ಬೆಂಬಲಿಗರಲ್ಲದ ಬಣದಲ್ಲಿ ಹೆಗ್ಸೆತ್ ಮೇಲಿನ ಅಸಮಾಧಾನ ತೀವ್ರವಾಗಿದ್ದು, ಕೇವಲ 58% ಜನ ಮಾತ್ರ ಅವರ ಪರವಾಗಿದ್ದಾರೆ.
19ನೇ ಶತಮಾನದ ವಿಲಿಯಂ ಮೆಕಿನ್ಲಿ ಅಥವಾ ಥಾಮಸ್ ಜೆಫರ್ಸನ್ರ ಕಾಲದ ಕಠಿಣ ನಿರ್ಬಂಧಗಳನ್ನು ನೆನಪಿಸುವಂತಹ ರಕ್ಷಣಾತ್ಮಕ ವ್ಯಾಪಾರ ನೀತಿಯನ್ನು ಟ್ರಂಪ್ ಜಾರಿಗೆ ತಂದಿದ್ದಾರೆ.
ಆದರೆ ಸಿದ್ಧಾಂತದಲ್ಲಿ ಆಕರ್ಷಕವಾಗಿ ಕಂಡ ಈ ತಂತ್ರ ಪ್ರಾಯೋಗಿಕವಾಗಿ ಬೆಲೆ ಏರಿಕೆಯ ಚಾಟಿಯಾಗಿದೆ. ಅಮೆರಿಕನ್ ಆ್ಯಕ್ಷನ್ ಫೋರಂನ ತಜ್ಞ ಡಗ್ಲಾಸ್ ಹೋಲ್ಟ್ಜ್-ಈಕಿನ್ ವ್ಯಂಗ್ಯವಾಗಿ ಹೇಳಿದಂತೆ, ಉಳಿದ ನಾಯಕರೆಲ್ಲ ಸುಂಕದ ಬಗ್ಗೆ ಬರೀ ಮಾತನಾಡಿದರು, ಟ್ರಂಪ್ ಅದನ್ನು ಮಾಡಿಯೇ ಬಿಟ್ಟರು, ಆದರೆ ಜನರು ಮಾತ್ರ ಇಂತಹ ಸಾಹಸ ನಮಗೆ ಬೇಡವೇ ಬೇಡ ಎನ್ನುತ್ತಿದ್ದಾರೆ.
ಕೈಗಾರಿಕಾ ವಲಯದ ಕಾರ್ಮಿಕರ ಬೆಂಬಲ ಗಳಿಸಲು ಹೂಡಿದ ಈ ಆಟ ಉಲ್ಟಾ ಹೊಡೆದಿದೆ. ವಾಸ್ತವ ಏನೆಂದರೆ, ಸುಂಕಗಳಿಂದಾಗಿ ಹೊಸ ಕಾರ್ಖಾನೆಗಳು ತಲೆಯೆತ್ತಿ ಉದ್ಯೋಗ ಸೃಷ್ಟಿಯಾಗುವುದು ಭವಿಷ್ಯದ ಕನಸು. ಆದರೆ ಆಮದು ನಿರ್ಬಂಧಗಳಿಂದಾಗಿ ದಿನಸಿ, ಎಲೆಕ್ಟ್ರಾನಿಕ್ಸ್, ವಾಹನ ಬಿಡಿಭಾಗಗಳ ಬೆಲೆಗಳು ಗಗನಕ್ಕೇರಿರುವುದು ಇಂದಿನ ಕಟು ಸತ್ಯ.
ಉತ್ಪಾದನಾ ವಲಯದಲ್ಲಿ ಉದ್ಯೋಗಗಳು ಹೆಚ್ಚುವ ಬದಲು, ಟ್ರಂಪ್ ಅಧಿಕಾರಕ್ಕೆ ಬಂದಾಗ ಇದ್ದ 12.673 ಮಿಲಿಯನ್ ಕಾರ್ಮಿಕರ ಸಂಖ್ಯೆ ಈಗ 12.638 ಮಿಲಿಯನ್ಗೆ ಇಳಿದಿದೆ. ಅಂದರೆ ಸುಂಕಗಳಿಂದ ಸಾವಿರಾರು ಜನರಿಗೆ ಕೆಲಸ ಸಿಗಬಹುದು ಎಂಬ ನಿರೀಕ್ಷೆಗೆ ವಿರುದ್ಧವಾಗಿ, ಇಡೀ ದೇಶದ ಕೋಟ್ಯಂತರ ಕುಟುಂಬಗಳು ದೈನಂದಿನ ಹಣದುಬ್ಬರದ ಹೊಡೆತಕ್ಕೆ ಸಿಲುಕಿ ನಲುಗುತ್ತಿವೆ.
ಈ ಆಕ್ರೋಶ ರಿಪಬ್ಲಿಕನ್ನರ ಭದ್ರಕೋಟೆಗಳಲ್ಲೇ ಸ್ಪಷ್ಟವಾಗಿ ಕಾಣಿಸುತ್ತಿದೆ.
ಕೆನಡಾದ ಗಡಿಗೆ ಹೊಂದಿಕೊಂಡಿರುವ ಮಿಚಿಗನ್ ಮತ್ತು ಮೈನೆ ರಾಜ್ಯಗಳಲ್ಲಿ ಶೇಕಡಾ 66ಕ್ಕಿಂತ ಹೆಚ್ಚು ಜನ ಕೆನಡಾ ಮೇಲಿನ ಸುಂಕಗಳನ್ನು ಕಟುವಾಗಿ ವಿರೋಧಿಸಿದ್ದಾರೆ.
ಹಿಂದೆ ಟ್ರಂಪ್ಗೆ ಎರಡು ಪಟ್ಟು ಹೆಚ್ಚಿನ ಬೆಂಬಲ ನೀಡುತ್ತಿದ್ದ ಪದವಿ ಪಡೆಯದ ಬಿಳಿಯರ ಸಮುದಾಯದಲ್ಲೂ ಮೂರು ಪಟ್ಟು ಹೆಚ್ಚು ಜನರಿಗೆ ಅನುಕೂಲಕ್ಕಿಂತ ಹೆಚ್ಚು ನಷ್ಟವಾಗಿದೆ; ಇನ್ನು ಕಪ್ಪು ಜನಾಂಗದ ಮೂರನೇ ಎರಡರಷ್ಟು ಮತ್ತು ಹಿಸ್ಪಾನಿಕ್ ಸಮುದಾಯದ ಮುಕ್ಕಾಲು ಭಾಗ ಜನರು ಈ ಸುಂಕಗಳಿಂದ ತಮ್ಮ ಜೇಬಿಗೆ ಕತ್ತರಿ ಬಿದ್ದಿದೆ ಎಂದು ದೂರಿದ್ದಾರೆ.
ಸುಂಕಗಳ ಬಿಸಿ ಕೇವಲ ಸಾಮಾನ್ಯ ಕಾರ್ಮಿಕರಿಗಷ್ಟೇ ಅಲ್ಲ, ಉನ್ನತ ಶಿಕ್ಷಣ ಪಡೆದ ಬಿಳಿಯ ಮತದಾರರಲ್ಲೂ ಶೇಕಡಾ 70ರಷ್ಟು ಮಂದಿಯ ಜೇಬನ್ನು ಸುಟ್ಟಿದೆ. ಮೈನೆ ರಾಜ್ಯದಲ್ಲಂತೂ ಕೆನಡಾ ಸುಂಕದ ವಿರುದ್ಧ 11ಕ್ಕೆ 1ರ ಭಾರೀ ಅಂತರದಲ್ಲಿ ಜನ ಸಿಡಿದೆದ್ದಿದ್ದಾರೆ. ಒಹಾಯೋ ಮತ್ತು ವಿಸ್ಕಾನ್ಸಿನ್ನಂತಹ ಕೈಗಾರಿಕಾ ರಾಜ್ಯಗಳಲ್ಲಿ 60% ಜನರು ಈ ವ್ಯಾಪಾರ ನೀತಿಯ ವಿರುದ್ಧ ಸಿಡಿದೆದ್ದಿದ್ದಾರೆ. ವ್ಯಾಪಾರ ಸಮರದಿಂದ ಲಾಭ ಪಡೆಯುವವರಿಗಿಂತ ನಷ್ಟ ಅನುಭವಿಸುವವರ ಸಂಖ್ಯೆ ಅಗಾಧವಾಗಿ ಬೆಳೆದು ನಿಂತಿದೆ.
ಅಮೆರಿಕದ ಮಿತ್ರರಾಷ್ಟ್ರಗಳ ಬಗೆಗಿನ ದೃಷ್ಟಿಕೋನದಲ್ಲೂ ಅಭೂತಪೂರ್ವ ಬದಲಾವಣೆಗಳಾಗಿವೆ. ಸುಂಕದ ಜಗಳದಿಂದಾಗಿ ನೆರೆಯ ಕೆನಡಾವನ್ನು ಆಪ್ತ ಮಿತ್ರ ಎಂದು ಪರಿಗಣಿಸುವ ಅಮೆರಿಕನ್ನರ ಪಾಲು 51% ರಿಂದ 38% ಕ್ಕೆ ಕುಸಿದಿದೆ.
ಇಸ್ರೇಲ್ ಅನ್ನು ಮಿತ್ರ ಎಂದು ಕರೆಯುವವರ ಸಂಖ್ಯೆ 61% ಕ್ಕೆ ಇಳಿದಿದ್ದರೆ, ಅದನ್ನು ಶತ್ರು ಎಂದು ಭಾವಿಸುವವರ ಸಂಖ್ಯೆ 15% ಕ್ಕೆ ಏರಿದೆ. ಇದು ಕಳೆದ ಕಾಲು ಶತಮಾನದಲ್ಲೇ ದಾಖಲಾದ ಅತ್ಯಧಿಕ ಅಸಮಾಧಾನವಾಗಿದೆ.
ಅದರಲ್ಲೂ 45 ವರ್ಷದೊಳಗಿನ ಯುವಕರಲ್ಲಿ ಶೇಕಡಾ 23ರಷ್ಟು ಮಂದಿ ಇಸ್ರೇಲ್ ಅನ್ನು ಶತ್ರು ರಾಷ್ಟ್ರವೆಂದು ಬಣ್ಣಿಸುತ್ತಿದ್ದಾರೆ. ಉಕ್ರೇನ್ ಅನ್ನು ಮಿತ್ರನೆಂದು ನೋಡುವವರ ಸಂಖ್ಯೆಯಲ್ಲೂ ಇಳಿಕೆಯಾಗಿದೆ. ಇತ್ತ ಕಮ್ಯುನಿಸ್ಟ್ ದೇಶ ಕ್ಯೂಬಾವನ್ನು ಆಪ್ತ ರಾಷ್ಟ್ರವೆಂದು ನೋಡುವ ಅಮೆರಿಕನ್ನರ ಸಂಖ್ಯೆ ಶೇಕಡಾ 21 ರಿಂದ 26ಕ್ಕೆ ಏರಿಕೆಯಾಗಿದೆ!
ಟ್ರಂಪ್ರ ಅಸ್ಥಿರ ವಿದೇಶಾಂಗ ಹೆಜ್ಜೆಗಳು ಜಾಗತಿಕ ವೇದಿಕೆಯಲ್ಲಿ ಅಮೆರಿಕದ ಸ್ಥಾನಮಾನವನ್ನು ಕುಗ್ಗಿಸಿವೆ ಎಂದು ಅರ್ಧಕ್ಕಿಂತ ಹೆಚ್ಚು ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ.
ಈ ಎಲ್ಲ ಹಿನ್ನಡೆಗಳ ನೇರ ಪರಿಣಾಮ ಬರುವ ನವೆಂಬರ್ 3ರ ಮಧ್ಯಂತರ ಚುನಾವಣೆಯ ಮೇಲೆ ಬೀಳುತ್ತಿದೆ. ಸಿಎನ್ಎನ್ ಸಮೀಕ್ಷೆಯ ಪ್ರಕಾರ, ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ರೇಸ್ನಲ್ಲಿ ವಿರೋಧ ಪಕ್ಷವಾದ ಡೆಮಾಕ್ರ್ಯಾಟಿಕ್ ಪಕ್ಷದ ಅಭ್ಯರ್ಥಿಗಳು ಟ್ರಂಪ್ ಬೆಂಬಲಿತ ರಿಪಬ್ಲಿಕನ್ನರಿಗಿಂತ 8 ಪಾಯಿಂಟ್ಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಕೈಗಾರಿಕಾ ಜಿಲ್ಲೆಗಳಲ್ಲಿ ಡೆಮಾಕ್ರ್ಯಾಟ್ಗಳು ಯಾವುದೇ ಹಿಂಜರಿಕೆಯಿಲ್ಲದೆ ಟ್ರಂಪ್ ಸುಂಕಗಳನ್ನು ವಿರೋಧಿಸಿ ಪ್ರಚಾರ ನಡೆಸುತ್ತಿದ್ದಾರೆ. ಫ್ಲಿಂಟ್ ನಗರದಲ್ಲಿ ಸೆಮಿಕಂಡಕ್ಟರ್ ಕಾರ್ಖಾನೆ ಮುಚ್ಚಿದ್ದಕ್ಕೆ ಟ್ರಂಪ್ರ ಅಸ್ಥಿರ ನೀತಿಗಳೇ ಕಾರಣ ಎಂದು ಆರೋಪಿಸಲಾಗುತ್ತಿದೆ.
ಅಮೆರಿಕದ ಪ್ರಮುಖ ಸುದ್ದಿ ಸಂಸ್ಥೆ ಫಾಕ್ಸ್ ನ್ಯೂಸ್ ಬಿಡುಗಡೆ ಮಾಡಿದ ಅಂಕಿ-ಅಂಶವಂತೂ ಆಡಳಿತ ಪಕ್ಷಕ್ಕೆ ದೊಡ್ಡ ಆಘಾತ ನೀಡಿದೆ.
ದೇಶದ ಅತಿದೊಡ್ಡ ಸಮಸ್ಯೆಯಾಗಿರುವ ಹಣದುಬ್ಬರವನ್ನು ನಿಯಂತ್ರಿಸುವ ವಿಚಾರದಲ್ಲಿ, ಡೆಮಾಕ್ರ್ಯಾಟಿಕ್ ಪಕ್ಷವು ರಿಪಬ್ಲಿಕನ್ಗಳಿಗಿಂತ 15 ಪಾಯಿಂಟ್ಗಳ ಭಾರೀ ಮುನ್ನಡೆ ಪಡೆದುಕೊಂಡಿದೆ.
ಇದು ಕಳೆದ 50 ವರ್ಷಗಳ ಅಮೆರಿಕನ್ ರಾಜಕೀಯ ಇತಿಹಾಸದಲ್ಲೇ ಹಣದುಬ್ಬರ ನಿರ್ವಹಣೆಯ ವಿಶ್ವಾಸಾರ್ಹತೆಯಲ್ಲಿ ವಿರೋಧ ಪಕ್ಷವೊಂದು ಸಾಧಿಸಿದ ಅತ್ಯುನ್ನತ ದಾಖಲೆಯಾಗಿದೆ. ಸಾಮಾನ್ಯವಾಗಿ ರಿಪಬ್ಲಿಕನ್ ಪಕ್ಷವನ್ನು ಆರ್ಥಿಕ ಶಿಸ್ತಿನ ಪಕ್ಷವೆಂದು ನಂಬುತ್ತಿದ್ದ ಅಮೆರಿಕನ್ ಮತದಾರರು, ಈಗ ಅವರನ್ನೇ ಬೆಲೆ ಏರಿಕೆಯ ಪ್ರಮುಖ ಅಪರಾಧಿಗಳನ್ನಾಗಿ ನೋಡುತ್ತಿದ್ದಾರೆ.






