Fact check : 210 ಹಜ್ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಮೌರಿಟೇನಿಯಾ ವಿಮಾನ ಕೆಂಪು ಸಮುದ್ರದಲ್ಲಿ ಪತನಗೊಂಡಿಲ್ಲ

PC: ummid.com
ಹೊಸದಿಲ್ಲಿ : 210 ಹಜ್ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಮೌರಿಟಾನಿಯ ವಿಮಾನ ಸೌದಿ ಅರೇಬಿಯಾ ಹೋಗುವ ಮಾರ್ಗ ಮಧ್ಯೆ ಕೆಂಪು ಸಮುದ್ರದ ಕರಾವಳಿಯಲ್ಲಿ ಪತನಗೊಂಡಿದೆ ಎಂದು ಹೇಳುವ ಪೋಸ್ಟ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.
ವಾಸ್ತವವೇನು?
ಈ ಕುರಿತು ಪರಿಶೀಲನೆ ನಡೆಸಿದಾಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಈ ಸುದ್ದಿ ಸುಳ್ಳು ಎಂಬುದು ಬಹಿರಂಗವಾಗಿದೆ.
ಉಮ್ಮಿದ್ ವೆಬ್ಸೈಟ್ ಪ್ರಕಾರ, ಮೌರಿಟಾನಿಯದ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯದ ಅಧೀನದ ಹಜ್ ನಿರ್ದೇಶಕ ಎಲ್ ವಾಲಿ ತಹಾ ಈ ಸುದ್ದಿಯನ್ನು ನಿರಾಕರಿಸಿದ್ದಾರೆ. ಮೌರಿಟಾನಿಯದ ಎಲ್ಲಾ ಯಾತ್ರಿಕರು ಸುರಕ್ಷಿತವಾಗಿದ್ದಾರೆ ಮತ್ತು ಪವಿತ್ರ ಭೂಮಿಗೆ ಸುರಕ್ಷಿತವಾಗಿ ತಲುಪಿದ್ದಾರೆ ಎಂದು ದೃಢಪಡಿಸಿದ್ದಾರೆ.
ಮೇ 23, 24 ಮತ್ತು 25ರಂದು ಮೂರು ನಿಗದಿತ ವಿಮಾನಗಳು ಎಲ್ಲಾ ಯಾತ್ರಿಕರನ್ನು ಮಕ್ಕಾಗೆ ಸುರಕ್ಷಿತವಾಗಿ ಸಾಗಿಸಿವೆ ಎಂದು ಮೌರಿಟಾನಿಯ ಏರ್ಲೈನ್ಸ್ ತಿಳಿಸಿರುವ ಬಗ್ಗೆ ಉಮ್ಮಿದ್ ವರದಿ ಮಾಡಿದೆ.
ಈ ಕುರಿತು ಮೌರಿಟಾನಿಯ ಏರ್ಲೈನ್ಸ್ ಅಧಿಕೃತವಾಗಿ ಹೇಳಿಕೆಯನ್ನು ಹೊರಡಿಸಿದೆ. ಹಜ್ ಯಾತ್ರಿಗಳಿದ್ದ ಮೂರು ವಿಮಾನಗಳು ಸುರಕ್ಷಿತವಾಗಿ ಮಕ್ಕಾಗೆ ತಲುಪಿದೆ ಎಂದು ದೃಢಪಡಿಸಿದೆ.





