ಭಾರತ ಜತೆಗಿನ ಭಿನ್ನಾಭಿಪ್ರಾಯಗಳನ್ನು ಸೂಕ್ತವಾಗಿ ನಿಭಾಯಿಸುತ್ತೇವೆ: ಚೀನಾ

Photo Credit | PTI
ಹೊಸದಿಲ್ಲಿ, ಸೆ. 12: ಭಾರತ–ಚೀನಾ ಸಂಬಂಧವನ್ನು ದೀರ್ಘಕಾಲೀನ ದೃಷ್ಟಿಕೋನದಿಂದ ಮುನ್ನಡೆಸಲು ಚೀನಾ ಬಯಸಿದೆ. ಇದಕ್ಕಾಗಿ ಭಾರತ ಜತೆ ಸಂವಹನ ಮತ್ತು ಸಹಕಾರ ಹೆಚ್ಚಿಸುವುದರ ಜತೆಗೆ, ಉಭಯ ದೇಶಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಸೂಕ್ತವಾಗಿ ನಿಭಾಯಿಸಲು ಕೆಲಸ ಮಾಡಲಿದೆ ಎಂದು ಭಾರತದಲ್ಲಿನ ಚೀನಾ ರಾಯಭಾರಿ ಷು ಫೀಹಾಂಗ್ ಹೇಳಿದ್ದಾರೆ.
18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಚೀನಾ ಅಧ್ಯಕ್ಷ ಷಿ ಜಿನ್ ಪಿಂಗ್ ಭಾರತಕ್ಕೆ ಆಗಮಿಸುವ ಕೆಲವೇ ಗಂಟೆಗಳ ಮುನ್ನ ಷು ಅವರು ಈ ಹೇಳಿಕೆ ನೀಡಿದ್ದಾರೆ. ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಷಿ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ. ಉಭಯ ದೇಶಗಳು ಸಭೆಗೆ ಸಿದ್ಧತೆ ನಡೆಸುತ್ತಿವೆ ಎಂದು ಷು ಶುಕ್ರವಾರ ರಾತ್ರಿ ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.
‘ಅಧ್ಯಕ್ಷ ಷಿ ಮತ್ತು ಪ್ರಧಾನಿ ಮೋದಿ ನಡುವಿನ ದ್ವಿಪಕ್ಷೀಯ ಸಭೆಗೆ ಚೀನಾ ಮತ್ತು ಭಾರತ ಸಿದ್ಧತೆ ನಡೆಸುತ್ತಿವೆ’ ಎಂದು ಅವರು ಹೇಳಿದ್ದಾರೆ.
ಕಜಾನ್ ಮತ್ತು ಟಿಯಾಂಜಿನ್ ನಲ್ಲಿ ನಡೆದ ಸಭೆಗಳ ಬಳಿಕ ಉಭಯ ನಾಯಕರು ಸತತ ಮೂರನೇ ವರ್ಷ ಪರಸ್ಪರ ಭೇಟಿಯಾಗುತ್ತಿದ್ದಾರೆ. ಉಭಯ ನಾಯಕರ ಕಾರ್ಯತಂತ್ರದ ಮಾರ್ಗದರ್ಶನದಂತೆ ಕಾರ್ಯನಿರ್ವಹಿಸಲು ಚೀನಾ ಬದ್ಧವಾಗಿದೆ ಎಂದೂ ಷು ಹೇಳಿದ್ದಾರೆ.
‘ಭಾರತ–ಚೀನಾ ಸಂಬಂಧವನ್ನು ದೀರ್ಘಕಾಲೀನ ದೃಷ್ಟಿಕೋನದಿಂದ ಮುನ್ನಡೆಸಲು ಚೀನಾ ಬಯಸಿದೆ. ಇದಕ್ಕಾಗಿ ಉಭಯ ದೇಶಗಳ ನಡುವೆ ಸಂವಹನ ಮತ್ತು ಸಹಕಾರ ಹೆಚ್ಚಿಸಲಾಗುವುದು. ಭಿನ್ನಾಭಿಪ್ರಾಯಗಳನ್ನು ಸೂಕ್ತವಾಗಿ ನಿಭಾಯಿಸಿ, ಉತ್ತಮ ನೆರೆಹೊರೆಯ ರಾಷ್ಟ್ರಗಳಾಗಿ ಪರಸ್ಪರ ಸಹಕಾರದೊಂದಿಗೆ ಮುನ್ನಡೆಯಲು ಭಾರತ ಜತೆ ಕೆಲಸ ಮಾಡಲಾಗುವುದು’ ಎಂದು ಅವರು ತಿಳಿಸಿದ್ದಾರೆ.
ಗಲ್ವಾನ್ ಸಂಘರ್ಷದ ಬಳಿಕ ಮೊದಲ ಭೇಟಿ
2020ರಲ್ಲಿ ಗಲ್ವಾನ್ ಕಣಿವೆಯಲ್ಲಿ ಭಾರತೀಯ ಮತ್ತು ಚೀನೀ ಸೈನಿಕರ ನಡುವೆ ಸಂಘರ್ಷ ನಡೆದ ಬಳಿಕ ಉಭಯ ದೇಶಗಳ ಸಂಬಂಧ ಹದಗೆಟ್ಟಿತ್ತು. ಆ ಬಳಿಕ ಷಿ ಜಿನ್ಪಿಂಗ್ ಭಾರತಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಸುಮಾರು ಏಳು ವರ್ಷಗಳ ಅಂತರದ ಬಳಿಕ ಅವರು ಭಾರತಕ್ಕೆ ಆಗಮಿಸುತ್ತಿದ್ದಾರೆ.
ಅಂದಿನಿಂದ ಭಾರತ–ಚೀನಾ ಸಂಬಂಧಗಳು ಸುಧಾರಣೆಯ ಹಾದಿಯಲ್ಲಿವೆ. ಷಿ ಅವರು ಕಜಾನ್ ಮತ್ತು ಟಿಯಾಂಜಿನ್ ನಲ್ಲಿ ಪ್ರಧಾನಿ ಮೋದಿಯವರನ್ನು ಈಗಾಗಲೇ ಭೇಟಿಯಾಗಿದ್ದಾರೆ.
ಪ್ರಧಾನಿ ಮೋದಿಯವರ ಆಹ್ವಾನದ ಮೇರೆಗೆ ನವದೆಹಲಿಯಲ್ಲಿ ನಡೆಯಲಿರುವ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಷಿ ಶನಿವಾರ ಬೀಜಿಂಗ್ ನಿಂದ ಭಾರತಕ್ಕೆ ಹೊರಟಿದ್ದಾರೆ.
ಮಧ್ಯಾಹ್ನ 12.25ಕ್ಕೆ ಆಗಮನ
ಚೀನಾದ ಸರ್ಕಾರಿ ಸುದ್ದಿ ಸಂಸ್ಥೆ ‘ಸಿನ್ಹುವಾ’ ಪ್ರಕಾರ, ಷಿ ಈಗಾಗಲೇ ಬೀಜಿಂಗ್ನಿಂದ ಹೊರಟಿದ್ದಾರೆ. ಅವರು ಭಾರತೀಯ ಕಾಲಮಾನ ಮಧ್ಯಾಹ್ನ 12.25ಕ್ಕೆ ಹೊಸದಿಲ್ಲಿಗೆ ಆಗಮಿಸುವ ನಿರೀಕ್ಷೆಯಿದೆ.
ಷಿ ಅವರ ನಿಯೋಗದಲ್ಲಿ ಚೀನೀ ಕಮ್ಯುನಿಸ್ಟ್ ಪಕ್ಷದ (CPC) ಕೇಂದ್ರ ಸಮಿತಿಯ ರಾಜಕೀಯ ಬ್ಯೂರೋದ ಸ್ಥಾಯಿ ಸಮಿತಿಯ ಸದಸ್ಯ ಹಾಗೂ CPC ಕೇಂದ್ರ ಸಮಿತಿಯ ಸಾಮಾನ್ಯ ಕಚೇರಿಯ ನಿರ್ದೇಶಕ ಕೈ ಕ್ವಿ ಮತ್ತು CPC ಕೇಂದ್ರ ಸಮಿತಿಯ ರಾಜಕೀಯ ಬ್ಯೂರೋದ ಸದಸ್ಯ ಹಾಗೂ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಇದ್ದಾರೆ.
ಪ್ರಧಾನಿ ಮೋದಿ ಮತ್ತು ಷಿ ನಡುವಿನ ದ್ವಿಪಕ್ಷೀಯ ಸಭೆ ಶನಿವಾರ ಸಂಜೆ 5.45ಕ್ಕೆ ನಿಗದಿಯಾಗಿದೆ.
ಮಾವೋ ನಿಂಗ್ ಹೇಳಿಕೆ
ಮೋದಿ–ಷಿ ಭೇಟಿಯ ಕುರಿತು ಪ್ರತಿಕ್ರಿಯಿಸಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾವೋ ನಿಂಗ್, ಕಜಾನ್ ಮತ್ತು ಟಿಯಾಂಜಿನ್ನಲ್ಲಿ ನಡೆದ ಸಭೆಗಳ ಬಳಿಕ ಉಭಯ ನಾಯಕರು ಸತತ ಮೂರನೇ ವರ್ಷವೂ ಭೇಟಿಯಾಗುತ್ತಿದ್ದಾರೆ ಎಂದು ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.
‘ಇಬ್ಬರು ನಾಯಕರ ಕಾರ್ಯತಂತ್ರದ ಮಾರ್ಗದರ್ಶನದಂತೆ ಕಾರ್ಯನಿರ್ವಹಿಸಲು, ದ್ವಿಪಕ್ಷೀಯ ಸಂಬಂಧಗಳನ್ನು ಕಾರ್ಯತಂತ್ರದ ಉನ್ನತ ಮಟ್ಟ ಹಾಗೂ ದೀರ್ಘಕಾಲೀನ ದೃಷ್ಟಿಕೋನದಿಂದ ನಿರ್ವಹಿಸಲು, ಸಂವಹನ ಹೆಚ್ಚಿಸಲು, ಸಹಕಾರ ಬಲಪಡಿಸಲು, ಭಿನ್ನಾಭಿಪ್ರಾಯಗಳನ್ನು ಸೂಕ್ತವಾಗಿ ನಿಭಾಯಿಸಲು ಹಾಗೂ ಉತ್ತಮ ನೆರೆಹೊರೆಯವರಾಗಿ ಸ್ನೇಹದಿಂದ ಮತ್ತು ಪರಸ್ಪರ ಯಶಸ್ಸಿಗೆ ಸಹಕರಿಸುವ ಪಾಲುದಾರರಾಗಿ ಮುನ್ನಡೆಯಲು ಚೀನಾ ಭಾರತದೊಂದಿಗೆ ಕೆಲಸ ಮಾಡಲಿದೆ’ ಎಂದು ಅವರು ಹೇಳಿದ್ದಾರೆ.
ಭಾರತವು ಸೆಪ್ಟೆಂಬರ್ 12 ಮತ್ತು 13ರಂದು ನವದೆಹಲಿಯಲ್ಲಿ 18ನೇ ಬ್ರಿಕ್ಸ್ ಶೃಂಗಸಭೆಯನ್ನು ಆಯೋಜಿಸುತ್ತಿದೆ. ಷಿ ಅವರ ಭಾರತ ಭೇಟಿ ಮತ್ತು ಮೋದಿ–ಷಿ ದ್ವಿಪಕ್ಷೀಯ ಮಾತುಕತೆ ಹಿನ್ನೆಲೆಯಲ್ಲಿ ಭಾರತ–ಚೀನಾ ಸಂಬಂಧದ ಬೆಳವಣಿಗೆಗಳತ್ತ ಗಮನ ನೆಟ್ಟಿದೆ.






