ಅಮೆರಿಕ ಗಡಿ ನುಸುಳುವ ಪ್ರಯತ್ನದ ವೇಳೆ ಗುಜರಾತಿನ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಪ್ರಕರಣ: ʼಡರ್ಟಿ ಹ್ಯಾರಿʼಗೆ 10 ವರ್ಷ ಜೈಲು

ರಮಣ್ಲಾಲ್ ಪಟೇಲ್ ಅಲಿಯಾಸ್ ಡರ್ಟಿ ಹ್ಯಾರಿ (Photo credit: cbc.ca)
ಅಹ್ಮದಾಬಾದ್: ಹರ್ಷಕುಮಾರ್ ರಮಣ್ಲಾಲ್ ಪಟೇಲ್ ಅಲಿಯಾಸ್ ಡರ್ಟಿ ಹ್ಯಾರಿಗೆ ಅಮೆರಿಕ ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಕೆನಡಾದಿಂದ ಅಮೆರಿಕ ಗಡಿಯಲ್ಲಿ ನುಸುಳುವ ಪ್ರಯತ್ನದ ವೇಳೆ ಗುಜರಾತಿನ ಒಂದೇ ಕುಟುಂಬದ ನಾಲ್ವರು 2022ರ ಜನವರಿ 19ರಂದು ಮೃತಪಟ್ಟ ಘಟನೆಯ ಹಿನ್ನೆಲೆಯಲ್ಲಿ ಬೆಳಕಿಗೆ ಬಂದ ಮಾನವ ಕಳ್ಳಸಾಗಣೆ ದಂಧೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಾರಣಕ್ಕೆ ಅಮೆರಿಕದ ಫೆಡರಲ್ ಜೈಲಿನಲ್ಲಿ 10 ವರ್ಷಗಳ ಸೆರೆಮನೆ ವಾಸ ವಿಧಿಸಲಾಗಿದೆ.
ಈ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟೇಲ್ನನ್ನು 2024ರ ಫೆಬ್ರವರಿ 20ರಂದು ಬಂಧಿಸಲಾಗಿತ್ತು. 2024ರ ನವೆಂಬರ್ ನಲ್ಲಿ ಆತನನ್ನು ದೋಷಿ ಎಂದು ತೀರ್ಮಾನಿಸಲಾಗಿತ್ತು.
ಭಾರತದ ಪ್ರಜೆಗಳಿಗಾಗಿ ಪಟೇಲ್ ಕನಿಷ್ಠ 35 ಕಾನೂನುಬಾಹಿರ ಪ್ರಯಾಣಗಳನ್ನು ವ್ಯವಸ್ಥೆಗೊಳಿಸಿದ್ದ. ಈ ಪೈಕಿ ಬಹುತೇಕ ಮಂದಿ ಗುಜರಾತ್ನ ಮೆಹ್ಸಾನಾ ಜಿಲ್ಲೆಯವರು ಎಂದು ಭಾರತೀಯ ಪೊಲೀಸರು ಹೇಳಿದ್ದಾರೆ. ಈತ ಕೆನಡಾದಲ್ಲಿ ಅಧ್ಯಯನ ಮಾಡಿ ಬಳಿಕ ಅಕ್ರಮವಾಗಿ ಅಮೆರಿಕಕ್ಕೆ ನುಸುಳಿ ನ್ಯೂಯಾರ್ಕ್ ಹಾಗೂ ಚಿಕಾಗೋದಲ್ಲಿ 2018ರಿಂದ ವಾಸವಿದ್ದ. ಇದಕ್ಕೂ ಮುನ್ನ ಹಲವು ಬಾರಿ ವಿಫಲ ಅಮೆರಿಕ ವೀಸಾ ಅರ್ಜಿಗಳನ್ನು ಈತ ಸಲ್ಲಿಸಿದ್ದ ಎಂದು ಮೂಲಗಳು ಹೇಳಿವೆ.





