UEFA Europa League ನಲ್ಲಿ ಫೆಲೆಸ್ತೀನ್ ಪರ ಬ್ಯಾನರ್ ಪ್ರದರ್ಶನ: ಬೆಸಿಕ್ಟಾಸ್ ಅಭಿಮಾನಿಗಳೊಂದಿಗೆ ಜಾರ್ಜಿಯಾ ಪೊಲೀಸರ ಘರ್ಷಣೆ
ಪೆಪ್ಪರ್ ಸ್ಪ್ರೇ ಬಳಕೆ ಆರೋಪ; 30 ನಿಮಿಷ ಸ್ಥಗಿತಗೊಂಡ ಪಂದ್ಯದಲ್ಲಿ ಬೆಸಿಕ್ಟಾಸ್ ಗೆ 2-1ರ ಜಯ

Photo: screengrab/x.com/visegrad24
ಬಟುಮಿ (ಜಾರ್ಜಿಯಾ), ನ. 26: ಫೆಲೆಸ್ತೀನ್ ಪರ ಬ್ಯಾನರ್ ಪ್ರದರ್ಶಿಸಿದ ವಿಚಾರವಾಗಿ ತುರ್ಕಿಯೆ ಬೆಸಿಕ್ಟಾಸ್ ಫುಟ್ಬಾಲ್ ಕ್ಲಬ್ ನ ಅಭಿಮಾನಿಗಳು ಮತ್ತು ಜಾರ್ಜಿಯಾ ಪೊಲೀಸರ ನಡುವೆ ಘರ್ಷಣೆ ನಡೆದಿದೆ. ಈ ಘಟನೆಯಿಂದ ಇಸ್ರೇಲ್ ನ ಹಪೋಯೆಲ್ ಬೀರ್-ಶೆವಾ ವಿರುದ್ಧದ ಯುರೋಪಾ ಲೀಗ್ ಪಂದ್ಯವನ್ನು ಸುಮಾರು 30 ನಿಮಿಷಗಳ ಕಾಲ ಸ್ಥಗಿತಗೊಳಿಸಲಾಯಿತು ಎಂದು Aljazeera ವರದಿ ಮಾಡಿದೆ.
ಜಾರ್ಜಿಯಾದ ಬಟುಮಿಯಲ್ಲಿ ಗುರುವಾರ ನಡೆದ ಪಂದ್ಯದ 26ನೇ ನಿಮಿಷದಲ್ಲಿ ಘರ್ಷಣೆ ಆರಂಭವಾಯಿತು. ಪೊಲೀಸರು ಪ್ರೇಕ್ಷಕರ ಗ್ಯಾಲರಿಗೆ ಪ್ರವೇಶಿಸಿ ಬೆಸಿಕ್ಟಾಸ್ ಅಭಿಮಾನಿಗಳ ಮೇಲೆ ಪೆಪ್ಪರ್ ಸ್ಪ್ರೇ ಬಳಸಿದ್ದಾರೆ ಎಂದು ತುರ್ಕಿಯೆ ಮಾಧ್ಯಮಗಳು ವರದಿ ಮಾಡಿವೆ. ಆಗ ಪಂದ್ಯ 0-0 ಗೋಲುಗಳ ಸಮಬಲದಲ್ಲಿತ್ತು. ಪರಿಸ್ಥಿತಿಯ ಹಿನ್ನೆಲೆಯಲ್ಲಿ ಡ್ಯಾನಿಶ್ ರೆಫರಿ ಮಾರ್ಟೆನ್ ಕ್ರೋಗ್ ಪಂದ್ಯವನ್ನು ಸ್ಥಗಿತಗೊಳಿಸಿದರು. ಸುಮಾರು 30 ನಿಮಿಷಗಳ ಬಳಿಕ ಪಂದ್ಯ ಪುನರಾರಂಭಗೊಂಡಿತು. ಅಂತಿಮವಾಗಿ ಬೆಸಿಕ್ಟಾಸ್ 2-1 ಗೋಲುಗಳಿಂದ ಗೆಲುವು ಸಾಧಿಸಿತು.
ಸುರಕ್ಷತೆ ಮತ್ತು ಭದ್ರತೆಯ ಕಾರಣದಿಂದ ತುರ್ಕಿಯೆ ಯ ಇಸ್ತಾನ್ಬುಲ್ ನಲ್ಲಿ ಪಂದ್ಯ ಆಯೋಜಿಸಲು ಸಾಧ್ಯವಿಲ್ಲ ಎಂದು ತುರ್ಕಿಯೆ ಅಧಿಕಾರಿಗಳು ತಿಳಿಸಿದ ಹಿನ್ನೆಲೆಯಲ್ಲಿ UEFA ಪಂದ್ಯವನ್ನು ಜಾರ್ಜಿಯಾದ ಬಟುಮಿಗೆ ಸ್ಥಳಾಂತರಿಸಿತ್ತು. ಹಪೋಯೆಲ್ ವಿರುದ್ಧದ ಹಿಂದಿನ ಎರಡು ಹೊರಾಂಗಣ ಪಂದ್ಯಗಳಲ್ಲಿ ಅಭಿಮಾನಿಗಳಿಗೆ ಕ್ರೀಡಾಂಗಣ ಪ್ರವೇಶಿಸಲು ಅವಕಾಶ ನೀಡಿರಲಿಲ್ಲ. ಆದರೆ, ಈ ಬಾರಿ ಪ್ರೇಕ್ಷಕರಿಗೆ ಪ್ರವೇಶ ಕಲ್ಪಿಸಲಾಗಿತ್ತು.
ಪಂದ್ಯಕ್ಕೂ ಮುನ್ನ ಮತ್ತು ಪಂದ್ಯದ ವೇಳೆ ಜಾರ್ಜಿಯಾ ಪೊಲೀಸರು ತಮ್ಮ ಅಭಿಮಾನಿಗಳ ವಿರುದ್ಧ ಅತಿಯಾದ ಬಲಪ್ರಯೋಗ ಮಾಡಿದ್ದಾರೆ ಎಂದು ಬೆಸಿಕ್ಟಾಸ್ ಕ್ಲಬ್ ಆರೋಪಿಸಿದೆ.
"ನಮ್ಮ ಅಭಿಮಾನಿಗಳ ವಿರುದ್ಧ ಭದ್ರತಾ ಪಡೆಗಳು ಅತಿಯಾದ ಬಲಪ್ರಯೋಗ ಮಾಡಿರುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ. ಈ ಘಟನೆಗಳಿಂದ ಬಾಧಿತರಾದ ಎಲ್ಲ ಅಭಿಮಾನಿಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇವೆ" ಎಂದು ಕ್ಲಬ್ ಹೇಳಿಕೆಯಲ್ಲಿ ತಿಳಿಸಿದೆ.
ತುರ್ಕಿಯೆ ಫುಟ್ಬಾಲ್ ಫೆಡರೇಶನ್ ಕೂಡ ಪೊಲೀಸರ ಕ್ರಮವನ್ನು ಖಂಡಿಸಿದೆ. ಬೆಸಿಕ್ಟಾಸ್ ಅಭಿಮಾನಿಗಳೊಂದಿಗೆ ಸ್ವೀಕಾರಾರ್ಹವಲ್ಲದ ರೀತಿಯಲ್ಲಿ ವರ್ತಿಸಲಾಗಿದೆ ಮತ್ತು ತಾರತಮ್ಯ ಎಸಗಲಾಗಿದೆ ಎಂದು 'X'ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ಆರೋಪಿಸಿದೆ. ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸುವುದಾಗಿಯೂ ತಿಳಿಸಿದೆ.
ತುರ್ಕಿಯೆಯ ಸೂಪರ್ ಲೀಗ್ ನ ಹಲವು ಕ್ಲಬ್ ಗಳು ಕೂಡ ಬೆಸಿಕ್ಟಾಸ್ ಅಭಿಮಾನಿಗಳ ಬೆಂಬಲಕ್ಕೆ ನಿಂತಿವೆ. ಟ್ರಾಬ್ ಜೋನ್ಸ್ ಪೋರ್, ಫೆನರ್ ಬಾಹ್ಚೆ, ಗಲಟಾಸರಾಯ್, ಎರ್ಜುರುಮ್ ಸ್ಪೋರ್, ಬಾಸಾಕ್ ಸೆಹಿರ್ ಮತ್ತು ಸ್ಯಾಮ್ ಸುನ್ ಸ್ಪೋರ್ ಕ್ಲಬ್ ಗಳು ಅಭಿಮಾನಿಗಳ ವಿರುದ್ಧ ನಡೆದ ಬಲಪ್ರಯೋಗವನ್ನು ಖಂಡಿಸಿವೆ.
ಪಂದ್ಯಕ್ಕೂ ಮುನ್ನ ಬೆಸಿಕ್ಟಾಸ್ ಆಟಗಾರರು ಹಪೋಯೆಲ್ ಆಟಗಾರರೊಂದಿಗೆ ಕೈಕುಲುಕಲು ನಿರಾಕರಿಸಿದ್ದರು ಎಂದು ತುರ್ಕಿಯೆ ಸರ್ಕಾರಿ ಸ್ವಾಮ್ಯದ ಅನಡೋಲು ಏಜೆನ್ಸಿ ವರದಿ ಮಾಡಿದೆ.
ಪಂದ್ಯದ ಬಳಿಕ ಬೆಸಿಕ್ಟಾಸ್ ತನ್ನ 'X' ಖಾತೆಯಲ್ಲಿ ವಿಡಿಯೊವೊಂದನ್ನು ಪ್ರಕಟಿಸಿದೆ. ಅದರಲ್ಲಿ ಆಟಗಾರರು ಅಭಿಮಾನಿಗಳ ಹಿಂದೆ ನಿಂತು ಛಾಯಾಚಿತ್ರಕ್ಕೆ ಪೋಸ್ ನೀಡುತ್ತಿರುವುದು ಕಂಡುಬಂದಿದೆ. ಈ ವೇಳೆ ಅಭಿಮಾನಿಗಳು 'ಆಕ್ರಮಣದ ವಿರುದ್ಧ ಎದ್ದು ನಿಲ್ಲಿ, ಫೆಲೆಸ್ತೀನ್ ಗೆ ಸ್ವಾತಂತ್ರ್ಯನೀಡಿ' ಎಂಬ ಬರಹವಿರುವ ಬ್ಯಾನರ್ ಪ್ರದರ್ಶಿಸಿದ್ದರು.
ಘಟನೆಯ ಬಳಿಕ ತುರ್ಕಿಯೆಯ ಆಂತರಿಕ ಸಚಿವ ಮುಸ್ತಫಾ ಸಿಫ್ಟ್ಸಿ ಅವರು ಜಾರ್ಜಿಯಾದ ಆಂತರಿಕ ಸಚಿವ ಸುಲ್ಖಾನ್ ತಮಾಜಾಶ್ವಿಲಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಘಟನೆಯ ಬಗ್ಗೆ ತುರ್ಕಿಯೆಯ ಕಳವಳವನ್ನು ವ್ಯಕ್ತಪಡಿಸಿದರು.
ಬೆಸಿಕ್ಟಾಸ್ ಅಭಿಮಾನಿಗಳ ವಿರುದ್ಧ ಅತಿಯಾದ ಬಲಪ್ರಯೋಗ ನಡೆದಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಸಿಫ್ಟ್ಸಿ, ಅಭಿಮಾನಿಗಳು ಸುರಕ್ಷಿತವಾಗಿ ತುರ್ಕಿಯೆಗೆ ಮರಳುವುದನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು ಎಂದು ತುರ್ಕಿಯೆ ಆಂತರಿಕ ಸಚಿವಾಲಯ ತಿಳಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಜಾರ್ಜಿಯಾದ ಆಂತರಿಕ ಸಚಿವ ತಮಾಜಾಶ್ವಿಲಿ, ಅಭಿಮಾನಿಗಳ ಬಳಿಯಿದ್ದ ಫೆಲೆಸ್ತೀನ್ ಧ್ವಜಗಳನ್ನು UEFA ಅಧಿಕಾರಿಗಳೇ ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಧ್ವಜಗಳನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಜಾರ್ಜಿಯಾ ಸರ್ಕಾರಿ ಅಧಿಕಾರಿಗಳ ಯಾವುದೇ ಪಾತ್ರವಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ ಎಂದು ವರದಿಯಾಗಿದೆ.






