ಅಮೆರಿಕ | ನ್ಯೂಜೆರ್ಸಿಯಲ್ಲಿ ದೀಪಾವಳಿ ಆಚರಣೆ ತಡೆದ ಪೊಲೀಸರು : ವೀಡಿಯೊ ವೈರಲ್

ನ್ಯೂಜೆರ್ಸಿ : ಅಮೆರಿಕದ ನ್ಯೂಜೆರ್ಸಿಯಲ್ಲಿ ಅನಿವಾಸಿ ಭಾರತೀಯರು ಪಟಾಕಿ ಸಿಡಿಸಿ ದೀಪಾವಳಿ ಆಚರಿಸುತ್ತಿದ್ದ ವೇಳೆ ಪೊಲೀಸರು ಮತ್ತು ಅಗ್ನಿಶಾಮಕದಳದ ಅಧಿಕಾರಿಗಳು ಮಧ್ಯಪ್ರವೇಶಿಸಿ ತಡೆದಿರುವ ಆರೋಪ ಕೇಳಿ ಬಂದಿದೆ.
ಈ ಕುರಿತ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಎಕ್ಸ್‌ನಲ್ಲಿ ವೀಡಿಯೊ ಹಂಚಿಕೊಂಡಿರುವ ವ್ಯಕ್ತಿಯೋರ್ವರು, ನ್ಯೂಜೆರ್ಸಿಯ ಇಂಡಿಯನ್ ಸ್ಟ್ರೀಟ್‌ನಲ್ಲಿ ರಾತ್ರಿ 10 ಗಂಟೆಯ ನಂತರ ಪಟಾಕಿಗಳನ್ನು ಸಿಡಿಸುತ್ತಿದ್ದಾಗ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಮಧ್ಯಪ್ರವೇಶಿಸಿ ಪಟಾಕಿಯನ್ನು ನಂದಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಇದರ ಬೆನ್ನಲ್ಲೆ ದೀಪಾವಳಿಯನ್ನು ಪಟಾಕಿಯ ಗೊಂದಲವಿಲ್ಲದೆ ಕೂಡ ಆಚರಿಸಬಹುದು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮತ್ತೋರ್ವರು ಎಕ್ಸ್‌ನಲ್ಲಿ ಸ್ಪಷ್ಟೀಕರಣವನ್ನು ನೀಡಿದ್ದು, ದೀಪಾವಳಿ ಆಚರಣೆಗೆ ರಾಜ್ಯವು ಸಂಪೂರ್ಣವಾಗಿ ಅನುಮತಿ ನೀಡಿತ್ತು. ಪಟಾಕಿಗಳಿಗೆ ಅಧಿಕೃತವಾಗಿ ಅನುಮತಿಸಲಾಗಿತ್ತು. ರಸ್ತೆ ತಡೆ, ಆಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ದಳದಂತಹ ಎಲ್ಲಾ ಸುರಕ್ಷತಾ ಕ್ರಮಗಳ ವ್ಯವಸ್ಥೆಯನ್ನು ಕೂಡ ಮಾಡಲಾಗಿತ್ತು. ಕೆಲ ಪಟಾಕಿಗಳಿಗೆ ಮಾತ್ರ ಅನುಮತಿ ನೀಡಿರಲಿಲ್ಲ. ಜನಸಂದಣಿಯಿಂದ ಯಾರೋ ಇದ್ದಕ್ಕಿದ್ದಂತೆ ಅನುಮತಿರಹಿತ ಪಟಾಕಿಗಳನ್ನು ಸಿಡಿಸಿದರು. ಅಗ್ನಿಶಾಮಕ ದಳದ ಅಧಿಕಾರಿಗಳು ಸುರಕ್ಷತೆಗಾಗಿ ಮಾತ್ರ ನೀರನ್ನು ಸಿಂಪಡಿಸಿದರು. ದೀಪಾವಳಿ ಆಚರಣೆಯನ್ನು ತಡೆಯಲು ಅಲ್ಲ. ಪೊಲೀಸರು ಜನಸಂದಣಿಯನ್ನು ನಿಯಂತ್ರಣಕ್ಕೆ ತಂದರು. ದಯವಿಟ್ಟು ತಪ್ಪು ಮಾಹಿತಿ ಹರಡಬೇಡಿ. ದೀಪಾವಳಿ ಬೆಳಕು, ಪ್ರೀತಿ ಮತ್ತು ಏಕತೆಯ ಸಂಕೇತವಾಗಿದೆ ಎಂದು ಹೇಳಿದರು.
Visuals from New Jersey, USA
— Gabbar (@Gabbar0099) October 22, 2025
Police and fire department stopped diwali fireworks in an Indian Street in New Jersey for setting off fire crackers after 10PM pic.twitter.com/BNMEDlYs60







