ಭಾರತದಿಂದ ಅಮೆರಿಕಕ್ಕೆ ಶೂನ್ಯ ಸುಂಕದ ಕೊಡುಗೆ ಪುನರುಚ್ಚರಿಸಿದ ಡೊನಾಲ್ಡ್ ಟ್ರಂಪ್
ಭಾರತ-ಪಾಕ್ ಉದ್ವಿಗ್ನತೆ ಶಮನದಲ್ಲಿ ಪಾತ್ರವಹಿಸಿರುವುದನ್ನು ಒತ್ತಿಹೇಳಿದ ಅಮೆರಿಕ ಅಧ್ಯಕ್ಷ

ಡೊನಾಲ್ಡ್ ಟ್ರಂಪ್ | PTI
ವಾಶಿಂಗ್ಟನ್: ಅಮೆರಿಕದ ಉತ್ಪನ್ನಗಳಿಗೆ ಶೂನ್ಯ ಸುಂಕದ ಕೊಡುಗೆಯನ್ನು ಭಾರತ ತನ್ನ ಮುಂದಿಟ್ಟಿದೆಯೆಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಪುನರುಚ್ಚರಿಸಿದ್ದಾರೆ. ಶೀಘ್ರದಲ್ಲೇ ಹೊಸದಿಲ್ಲಿ ಹಾಗೂ ವಾಶಿಂಗ್ಟನ್ ನಡುವೆ ವ್ಯಾಪಾರ ಒಪ್ಪಂದ ಏರ್ಪಡಲಿದೆಯೆಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಆಪರೇಷನ್ ಸಿಂಧೂರ್ ಆನಂತರ ಭಾರತ ಹಾಗೂ ಪಾಕಿಸ್ತಾನ ನಡುವೆ ಉಂಟಾಗಿದ್ದ ಸಂಘರ್ಷವನ್ನು ಪರಿಸ್ಥಿತಿಯನ್ನು ಶಮನಗೊಳಿಸುವಲ್ಲಿ ತನ್ನ ಪಾತ್ರವಿರುವುದನ್ನು ಕೂಡಾ ಅವರು ಒತ್ತಿ ಹೇಳಿದ್ದಾರೆ.
ಫಾಕ್ಸ್ ನ್ಯೂಸ್ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಕದನವಿರಾಮದ ಬಗ್ಗೆ ಚರ್ಚಿಸುತ್ತಿದ್ದ ಸಂದರ್ಭ ಅವರು ಈ ವಿಷಯವನ್ನು ಪ್ರಸ್ತಾವಿಸಿದರು. ವ್ಯಾಪಾರದ ವಿಷಯವನ್ನು ಮಾತುಕತೆಯ ವೇಳೆ ಪ್ರಸ್ತಾವಿಸುವ ಮೂಲಕ ತಾನು ಉಭಯದೇಶಗಳ ನಡುವಿನ ಉದ್ವಿಗ್ನತೆಯನ್ನು ತಡೆಹಿಡಿದಿರುವೆ. ಜಗತ್ತಿನ ಅತ್ಯಧಿಕ ಸುಂಕ ವಿಧಿಸುವ ರಾಷ್ಟ್ರಗಳಲ್ಲಿ ಭಾರತ ಕೂಡಾ ಒಂದೆಂದು ಹೇಳಿದ ಅವರು ಶಾಂತಿಸ್ಥಾಪನೆಗೆ ಅಮೆರಿಕವು ವ್ಯಾಪಾರವನ್ನು ಬಳಸಿಕೊಳ್ಳುತ್ತಿದೆ ಎಂದರು.
ಭಾರತ ಹಾಗೂ ಪಾಕ್ ನಡುವೆ ತೀವ್ರ ಹಗೆತನವಿದೆ. ಈ ಸಂದರ್ಭದಲ್ಲಿ ನಾವು ಅವರೊಂದಿಗೆ ವ್ಯಾಪಾರದ ಬಗ್ಗೆ ಮಾತುಕತೆ ನಡೆಸಲಿದೆ. ಶಾಂತಿಸ್ಥಾಪನೆಗೆ ನಾವು ವ್ಯಾಪಾರವನ್ನು ಬಳಸುತ್ತಿದ್ದೇವೆ. ಅಮೆರಿಕಕ್ಕೆ ಶೇ.100ರಷ್ಟು ಸುಂಕವನ್ನು ಕಡಿತಗೊಳಿಸಲು ಅವರು ಇಚ್ಚಿಸಿದ್ದಾರೆುಂದು ನಿಮಗೆ ತಿಳಿದಿದೆಯೇ ಎಂದು ಟ್ರಂಪ್ ಸಂದರ್ಶಕರನ್ನು ಪ್ರಶ್ನಿಸಿದರು. ಆದಾಗ್ಯೂ, ಅಮೆರಿಕದ ಜೊತೆಗಿನ ಸುಂಕ ರಿಯಾಯಿತಿ ಕುರಿತ ಒಪ್ಪಂದವನ್ನು ಭಾರತ ಹಾಗೂ ಪಾಕ್ ಇನ್ನಷ್ಟೇ ಪ್ರಕಟಿಸಬೇಕಿದೆ.
ಭಾರತ ಹಾಗೂ ಪಾಕ್ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸಲು ತಾನು ನೆರವಾಗಿದ್ದೆ ಎಂಬ ಹೇಳಿಕೆಯನ್ನು ಟ್ರಂಪ್ ಪುನರುಚ್ಚರಿಸಿರುವುದು ಇದು ಏಳನೇ ಸಲವಾಗಿದೆ.
‘‘ಸುಂಕ ರಿಯಾಯಿತಿಗೆ ಸಂಬಂಧಿಸಿ ಭಾರತದ ಜೊತೆಗಿನ ಒಪ್ಪಂದ ಶೀಘ್ರದಲ್ಲೇ ಜಾರಿಗೆಬರಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ಹೌದು, ಶೀಘ್ರವೇ ಅದು ಜಾರಿಗೆ ಬರಲಿದೆ. ಆದರೆ ನನಗೆ ತರಾತುರಿಯೇನಿಲ್ಲ. ದಕ್ಷಿಣ ಕೊರಿಯಾ ನಮ್ಮೊಂದಿಗೆ (ಅಮೆರಿಕ) ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ. ಸುಮಾರು 150 ದೇಶಗಳು ಅಮೆರಿಕ ಜೊತೆ ಸುಂಕ ರಿಯಾಯಿತಿಗೆ ಸಂಬಂಧಿಸಿ ಒಪ್ಪಂದ ಮಾಡಿಕೊಳ್ಳಲು ಬಯಸುತ್ತಿವೆ ಎಂದು ಟ್ರಂಪ್ ಹೇಳಿದರು.
ಅಮೆರಿಕ ಹಾಗೂ ಭಾರತ ನಡುವೆ ಪ್ರಸ್ತಾವಿತ ದ್ವಿಪಕ್ಷೀಯ ಒಪ್ಪಂದಕ್ಕೆ ಸಂಬಂಧಿಸಿ ನಡೆಯುತ್ತಿರುವ ಮಾತುಕತೆಗಳ ಪ್ರಗತಿಯ ಪರಾಮರ್ಶೆ ನಡೆಸಲು ಉಭಯ ದೇಶಗಳ ಸಚಿವಾಂಗ ಮಟ್ಟದ ಮಾತುಕತೆಗಳನ್ನು ನಡೆಸುತ್ತಿರುವ ಸಮಯದಲ್ಲೇ ಟ್ರಂಪ್ ಅವರು ಈ ಅನಿಸಿಕೆಗಳನ್ನು ವ್ಯಕ್ತಪಡಿಸಿರುವುದು ಹೆಚ್ಚಿನ ಮಹತ್ವವನ್ನು ಪಡೆದಿದೆ.
ಅಮೆರಿಕದ ಜೊತೆ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅಮೆರಿಕ ಪ್ರವಾಸದಲ್ಲಿದ್ದಾರೆ. ಅವರು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹಾವರ್ಡ್ ಲ್ಯೂಟ್ನಿಕ್ ಹಾಗೂ ವ್ಯಾಪಾರ ರಂಗದ ಪ್ರತಿನಿಧಿ ಜೆಮಿಸನ್ ಗೀರ್ ಜೊತೆ ಈ ವಿಷಯವಾಗಿ ಚರ್ಚಿಸಲಿದ್ದಾರೆ.
ಅಮೆರಿಕವು ಕೈಗಾರಿಕಾ ಉತ್ಪನ್ನಗಳು, ವಿದ್ಯುತ್ಚಾಲಿತ ವಾಹನಗಳು ಸೇರಿದಂತೆ ಆಟೋಮೊಬೈಲ್ ಸಾಮಾಗ್ರಿಗಳು,ವೈನ್, ಪೆಟ್ರೋಕೆಮಿಕಲ್, ಡೇರಿ ಉತ್ಪನ್ನಗಳು, ಸೇಬು, ಒಣಹಣ್ಣುಗಳು ಹಾಗೂ ಇತರ ಕೃಷಿ ಉತ್ಪನ್ನಗಳ ಮೇಲಿನ ಸುಂಕವನ್ನು ಕಡಿತಗೊಳಿಸಬೇಕೆಂದು ಭಾರತದ ಮೇಲೆ ಬಲವಾಗಿ ಒತ್ತಡವನ್ನು ಹೇರುತ್ತಿದೆ.
ವ್ಯಾಪಾರ ಒಪ್ಪಂದವು ಇಬ್ಬರಿಗೂ ಲಾಭದಾಯಕವಾಗಿರಬೇಕು: ಜೈಶಂಕರ್
ಭಾರತವು ಅಮೆರಿಕದ ಉತ್ಪನ್ನಗಳಿಗೆ ಶೂನ್ಯ ಸುಂಕದ ಕೊಡುಗೆಯನ್ನು ನೀಡಿದೆಯೆಂಬ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವ ಜೈಶಂಕರ್ ಅವರು, ‘‘ ಯಾವುದೇ ಒಪ್ಪಂದವು ಇಬ್ಬರಿಗೂ ಲಾಭದಾಯಕವಾಗಿರಬೇಕು’’ ಎಂದು ಹೇಳಿದ್ದಾರೆ.
ಆಪರೇಶನ್ ಸಿಂಧೂರ್ ಹಿನ್ನೆಲೆಯಲ್ಲಿ ಭಾರತ ಹಾಗೂ ಅಮೆರಿಕ ನಾಯಕತ್ವದ ನಡುವೆ ನಡೆದ ದೂರವಾಣಿ ಮಾತುಕತೆಗಳಲ್ಲಿ ಭಾರತ- ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ವಿಷಯ ಪ್ರಸ್ತಾವವಾಗಿಲ್ಲವೆಂದು ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ರಣಧೀರ ಜೈಸ್ವಾಲ್ ಹೇಳಿದ್ದಾರೆ.







