ಆ್ಯಪಲ್ ಫೋನ್ ಭಾರತದಲ್ಲಿ ತಯಾರಿಸುವುದನ್ನು ನಿಲ್ಲಿಸಿ, ಇಲ್ಲವಾದಲ್ಲಿ ಹೆಚ್ಚಿನ ಸುಂಕ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಡೊನಾಲ್ಡ್ ಟ್ರಂಪ್ | PC : PTI
ವಾಷಿಂಗ್ಟನ್: ಭಾರತದಲ್ಲಿ ಅಥವಾ ಇತರ ಯಾವ ರಾಷ್ಟ್ರದಲ್ಲಿ ಆ್ಯಪಲ್ ಫೋನ್ ತಯಾರಿಸುವುದನ್ನು ನಿಲ್ಲಿಸಿ, ಆ ತಯಾರಿಕಾ ಘಟಕಗಳನ್ನು ಅಮೆರಿಕಾಗೆ ಸ್ಥಳಾಂತರಿಸಬೇಕೆಂದು ಅಮೆರಿಕ ಅಧ್ಯಕ್ಷ ಟ್ರಂಪ್ ಆ್ಯಪಲ್ ಸಂಸ್ಥೆಯ ಮುಖ್ಯಸ್ಥ ಟಿಮ್ ಕುಕ್ ಅವರಿಗೆ ಎಚ್ಚರಿಸಿದ್ದಾರೆ.
“ಅಮೆರಿಕದಲ್ಲಿ ಮಾರಾಟವಾಗುವ ಐಫೋನ್ ಗಳನ್ನು ಅಮೆರಿಕಾದಲ್ಲಿಯೇ ತಯಾರಿಸಬೇಕು, ಭಾರತ ಅಥವಾ ಬೇರೆಡೆಯಲ್ಲವೆಂದು ಈ ಹಿಂದೆಯೇ ನಾನು ಆ್ಯಪಲ್ ನ ಟಿಮ್ ಕುಕ್ ಅವರಿಗೆ ತಿಳಿಸಿದ್ದೇನೆ. ಇದನ್ನು ಪಾಲಿಸದಿದ್ದರೆ ಆ್ಯಪಲ್ ಕಂಪೆನಿಯು ಕನಿಷ್ಠ 25% ಸುಂಕವನ್ನು ಅಮೆರಿಕಾಗೆ ನೀಡಬೇಕಾಗುತ್ತದೆ”, ಎಂದು ಅವರು ತಮ್ಮ ಸಾಮಾಜಿಕ ಜಾಲತಾಣ ‘ಟ್ರುತ್ ಸೋಷಿಯಲ್’ ನಲ್ಲಿ ಟ್ರಂಪ್ ಬರೆದಿದ್ದಾರೆ.
ನ್ಯೂಯಾರ್ಕ್ ಸ್ಟಾಕ್ ಎಕ್ಸ್ಚೇಂಜ್ ನಲ್ಲಿ ಶುಕ್ರವಾರ ಪ್ರಾರಂಭಿಕ ಹಂತದಲ್ಲಿ ಆ್ಯಪಲ್ ಶೇರುಗಳು 3% ಕುಸಿತ ಕಂಡಿದೆ.
ಕಳೆದ ವಾರ ಟ್ರಂಪ್ ಅಮೆಝಾನ್ ಮತ್ತು ವಾಲ್ ಮಾರ್ಟ್ ಕಂಪೆನಿಗಳಿಗೆ ಸುಂಕದ ಪ್ರಮಾಣವನ್ನು ಗ್ರಾಹಕರ ಮೇಲೆ ಹಾಕದೆ ತಮ್ಮ ಲಾಭವನ್ನು ಕಡಿಮೆ ಮಾಡುವ ಮೂಲಕ ಬೆಲೆಗಳನ್ನು ನಿಯಂತ್ರಿಸಬೇಕೆಂದು ಆದೇಶಿಸಿದ್ದರು. ಟ್ರಂಪ್ ಗೆ ಆಯ್ದ ಕಂಪೆನಿಗಳನ್ನು ಗುರಿಯಾಗಿಸಿಕೊಂಡು ಅವುಗಳ ಮೇಲೆ ಸುಂಕವನ್ನು ವಿಧಿಸುವ ಅಧಿಕಾರ ಇದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಇನ್ನೂ ಅಮೆರಿಕಾದಲ್ಲಿ ಸ್ಪಷ್ಟತೆ ಇಲ್ಲ.
ಈ ನಡುವೆ ಅಮೆರಿಕ ಮತ್ತು ಯೂರೋಪಿಯನ್ ಯೂನಿಯನ್ ನಡುವಿನ ಮಾತುಕತೆಗಳು ಅಡಚಣೆಗೊಂಡಿವೆ. ಯೂರೋಪಿಯನ್ ಯೂನಿಯನ್ ಜೊತೆಗಿನ ಆರ್ಥಿಕ ಮಾತುಕತೆಗಳು “ವ್ಯವಹರಿಸಲು ಕಷ್ಟಕರ”ವಾಗಿದೆಯೆಂದು ಟ್ರಂಪ್ ಹೇಳಿದ್ದಾರೆ. “ಅವರೊಂದಿಗಿನ ಮಾತುಕತೆಗಳು ಮುಂದೆ ಸಾಗುತ್ತಲೇ ಇಲ್ಲ. ಆದ್ದರಿಂದ ನಾನು ಜೂನ್ 1, 2025ರಿಂದ ಯೂರೋಪಿಯನ್ ಯೂನಿಯನ್ ಆಮದುಗಳ ಮೇಲೆ ನೇರ 50% ಸುಂಕವನ್ನು ಶಿಫಾರಸು ಮಾಡುತ್ತಿದ್ದೇನೆ” ಎಂದು ಟ್ರಂಪ್ ಹೇಳಿದ್ದಾರೆ.
ಯೂರೋಪ್ ನಿಂದ ಅಮೆರಿಕಾಗೆ ಹೆಚ್ಚು ಲಕ್ಷುರಿ ವಸ್ತುಗಳು(ಹ್ಯಾಂಡ್ ಬ್ಯಾಗ್, ಪಾದರಕ್ಷೆಗಳು, ಮದ್ಯ, ಸುಗಂಧ ದ್ರವ್ಯ ಹಾಗೂ ಇನ್ನಿತರ ಫ್ಯಾಷನ್ ವಸ್ತುಗಳು)ಆಮದಾಗುತ್ತವೆ. ಇದಲ್ಲದೆ, ಚೀನಾ ದೇಶವು ಅಮೆರಿಕಾದ ಸುಂಕದ ಬೆದರಿಕೆಗೆ ಜಗ್ಗದೆ ಸೆಟೆದು ನಿಂತಿದೆ. ಚೀನಾ ದೇಶದೊಂದಿಗಿನ ಆರ್ಥಿಕ ಮಾತುಕತೆಗಳು ಟ್ರಂಪ್ ಗೆ ಕಬ್ಬಿಣದ ಕಡಲೆಯಾಗಿದೆ.
ಭಾರತದ ಬಗ್ಗೆ ಮಾತನಾಡುತ್ತಾ ಟ್ರಂಪ್ “ಭಾರತವು ಅಮೆರಿಕಾದ ಆಮದುಗಳ ಮೇಲಿನ ಸುಂಕವನ್ನು ಪೂರ್ಣವಾಗಿ ತೆಗೆಯಲು ಒಪ್ಪಿದೆ”ಯೆಂದು ಹೇಳಿದ್ದಾರೆ. ಇಲ್ಲಿಯವರೆಗೂ ಭಾರತ ಸರಕಾರ ಟ್ರಂಪ್ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಖಡಾತುಂಡುವಾಗಿ ಟ್ರಂಪ್ ಹೇಳಿಕೆಯನ್ನೂ ನಿರಾಕರಿಸಿಲ್ಲ.
ಸುಂಕವನ್ನು ಕಡಿಮೆ ಮಾಡಲು ಟ್ರಂಪ್ ವಿಶ್ವದ ಇತರೆ ರಾಷ್ಟ್ರಗಳಿಗೆ ನೀಡಿದ 90 ದಿನಗಳ ಗಡುವು ಹತ್ತಿರವಾಗುತ್ತಾ ಹೋದಂತೆ ಪ್ರಪಂಚದ ಆರ್ಥಿಕ ವಲಯಗಳಲ್ಲಿ ಮತ್ತೊಮ್ಮೆ ಕರಾಳ ಛಾಯೆ ಮೂಡುತ್ತಿದೆ. ಅಮೆರಿಕಾದ ಪ್ರಜೆಗಳು ಈ ಮಧ್ಯೆ ತಾವು ಖರೀದಿಸುವ ವಸ್ತುಗಳ ಮೇಲೆ ಹೆಚ್ಚು ಬೆಲೆ ನೀಡಬೇಕಾಗಿದೆ. ಹೆಚ್ಚಿನವರು ಈ ಬೆಲೆ ಏರಿಕೆಯಿಂದ, ತಾವು ಖರೀದಿಸುವ ವಸ್ತುಗಳನ್ನು ಕಡಿಮೆ ಮಾಡುವುದು, ಇಲ್ಲವೆ ಕಡಿಮೆ ಬೆಲೆಯ ಬದಲಿ ವಸ್ತುಗಳನ್ನು ಖರೀದಿಸಲು ಪ್ರಾರಂಭಿಸಿದ್ದಾರೆ. ದೊಡ್ಡ ಕಾರ್ಪೊರೇಟ್ ಗಳು ಹಬ್ಬ ಅಥವಾ ವಿಶೇಷ ದಿನಗಳಿಗೆ ಸರಕುಗಳನ್ನು ತಿಂಗಳುಗಳ ಮೊದಲೇ ಉತ್ಪಾದಕರಿಗೆ ಆರ್ಡರ್ ನೀಡಬೇಕು. ಇದರಿಂದ ಬೇಡಿಕೆಯ ಸಮಯದಲ್ಲಿ ಕೊರತೆಯನ್ನು ಎದುರಿಸುವ ಸಂಭವ ಬರುವುದಿಲ್ಲ. ಆದರೆ, ಸುಂಕದ ಅನಿಶ್ಚಿತೆಯ ವಾತಾವರಣದಿಂದ ವಾಲ್ ಮಾರ್ಟ್, ಅಮೆಝಾನ್, ಟಾರ್ಗೆಟ್ ಇಂತಹ ಹಲವಾರು ಕಾರ್ಪೊರೇಟ್ ಕಂಪೆನಿಗಳು ಕ್ರಿಸ್ ಮಸ್, ಥ್ಯಾಂಕ್ಸ್ ಗಿವಿಂಗ್, ಹೊಸ ವರ್ಷದ ಆಚರಣೆಗೆ ಬೇಕಾದ ಸಾಮಗ್ರಿಗಳನ್ನು ಇಲ್ಲಿಯವರೆಗೂ ಆರ್ಡರ್ ಮಾಡಿಲ್ಲ. ಇದರಿಂದ ಬರುವ ಕ್ರಿಸ್ ಮಸ್ ಸಮಯದಲ್ಲಿ ಅಂಗಡಿಯ ಷೆಲ್ಫ್ ಗಳು ಖಾಲಿ ಇರುವ ಸಾಧ್ಯತೆ ಹೆಚ್ಚಿದೆಯೆಂದು ಹೇಳುತ್ತಿದ್ದಾರೆ. ಇದಕ್ಕೆ ಉತ್ತರವಾಗಿ ಟ್ರಂಪ್ “ ಕ್ರಿಸ್ ಮಸ್ ನಲ್ಲಿ ಮಕ್ಕಳಿಗೆ 30 ಆಟಿಕೆಗಳ ಬದಲು 2 ಆಟಿಕೆಗಳನ್ನು ನೀಡಿ” ಎಂದು ಅಮೆರಿಕನ್ನರಿಗೆ ಹೇಳಿದ್ದಾರೆ. ಇದರಿಂದ ಟ್ರಂಪ್ ಅಮೆರಿಕನ್ನರ ಟ್ರೊಲ್ ಗೆ ಗುರಿಯಾಗಿದ್ದಾರೆ.
ಇಂತಹ ಅನಿಶ್ಚತೆಯು ವಿಶ್ವವನ್ನು ಆರ್ಥಿಕ ಸಂದಿಗ್ಧ ಸ್ಥಿಯಲ್ಲಿ ನಿಲ್ಲಿಸಿದೆ. ಮುಂದಿನ ದಿನಗಳಲ್ಲಿ ಟ್ರಂಪ್ ತೆಗೆದುಕೊಳ್ಳುವ ನಿರ್ಧಾರಗಳ ಪರಿಣಾಮವನ್ನು ಕಾದು ನೋಡಬೇಕಿದೆ.







