ಯುದ್ಧ ನಿಲ್ಲಿಸುವವರೆಗೂ ನಿಮ್ಮೊಂದಿಗೆ ವ್ಯಾಪಾರ ನಡೆಸುವುದಿಲ್ಲವೆಂದು ಭಾರತ ಮತ್ತು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದೆ: ಡೊನಾಲ್ಡ್ ಟ್ರಂಪ್ ಪುನರುಚ್ಚಾರ

ಡೊನಾಲ್ಡ್ ಟ್ರಂಪ್ | PC : PTI
ನ್ಯೂಯಾರ್ಕ್/ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ಸ್ಥಗಿತಗೊಳ್ಳುವವರೆಗೂ, ಎರಡೂ ದೇಶಗಳ ನಡುವಿನ ವ್ಯಾಪಾರವನ್ನು ರದ್ದುಗೊಳಿಸುವಂತೆ ನನ್ನ ಸರಕಾರದ ಅಧಿಕಾರಿಗಳಿಗೆ ಸೂಚಿಸಿದ ನಂತರ, ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ಸ್ಥಗಿತಗೊಂಡಿತು ಎಂದು ಶುಕ್ರವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ.
ತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್, “ನಾವು ಕೆಲವು ಅದ್ಭುತ ಕೆಲಸಗಳನ್ನು ಮಾಡಿದೆವು. ಇದಕ್ಕಿಂತ ಹೆಚ್ಚಿನದನ್ನು ಈ ಹಿಂದಿನ ಯಾರಾದರೂ ಅಮೆರಿಕ ಅಧ್ಯಕ್ಷರು ಮಾಡಿದ್ದರೆ ಎಂಬುದು ನನಗೆ ತಿಳಿದಿಲ್ಲ” ಎಂದು ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನದೊಂದಿಗೆ ಅಮೆರಿಕ ವ್ಯಾಪಾರ ನಡೆಸುವುದಿಲ್ಲ ಎಂದು ಎಚ್ಚರಿಸುವ ಮೂಲಕ, ಅಣ್ವಸ್ತ್ರ ಯುದ್ಧವಾಗಿ ಪರಿವರ್ತನೆಗೊಳ್ಳಬಹುದಿದ್ದ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧವನ್ನು ನಾನು ಸ್ಥಗಿತಗೊಳಿಸಿದೆ ಎಂಬ ತಮ್ಮ ಪ್ರತಿಪಾದನೆಯನ್ನು ಅವರು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.
“ಸೆರ್ಬಿಯಾ ಹಾಗೂ ಕೊಸೊವೊ ದೊಡ್ಡ ಯುದ್ಧದತ್ತ ಹೋಗುತ್ತಿವೆ. ನೀವೂ ಹೋಗುವುದಿದ್ದರೆ ಹೋಗಿ ಎಂದು ನಾನು ಅವರಿಗೆ ಹೇಳಿದೆ” ಎಂದ ಟ್ರಂಪ್, “ಅಮೆರಿಕ ನಿಮ್ಮೊಂದಿಗೆ ವ್ಯಾಪಾರ ಮಾಡುವುದಿಲ್ಲ ಎಂದು ನಾನು ಅವರಿಗೆ ಎಚ್ಚರಿಸಿದೆ. ಇದೇ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದದ್ದು” ಎಂದು ಅವರು ತಮ್ಮ ಮಾತನ್ನು ಪುನರಾವರ್ತಿಸಿದ್ದಾರೆ.
“ನಾನು ಎರಡೂ ದೇಶಗಳೊಂದಿಗೆ ಮಾತುಕತೆ ನಡೆಸತೊಡಗಿದೆ ಹಾಗೂ ಖಜಾನೆ ಕಾರ್ಯದರ್ಶಿ ಬೆಸೆಂಟ್ ಹಾಗೂ ವಾಣಿಜ್ಯ ಕಾರ್ಯದರ್ಶಿ ಹೋವರ್ಡ್ (ಲುಟ್ನಿಕ್) ಅವರಿಗೆ ಭಾರತ ಮತ್ತು ಪಾಕಿಸ್ತಾನ ನಡುವಿನ ಎಲ್ಲ ವ್ಯಾಪಾರ ಒಪ್ಪಂದಗಳನ್ನು ರದ್ದುಗೊಳಿಸುವಂತೆ ಸೂಚಿಸಿದೆ. ಯುದ್ಧದಿಂದಾಗಿ ನೀವಿಬ್ಬರೂ ನಮ್ಮೊಂದಿಗೆ ವ್ಯಾಪಾರ ನಡೆಸಲು ಸಾಧ್ಯವಿಲ್ಲ ಎಂದು ನಾನು ಅವರಿಗೆ ಹೇಳಿದೆ” ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ, ಜಿ-7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲೆಂದು ಕೆನಡಾಗೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನದ ಮನವಿಯ ಮೇರೆಗೆ ನಾವು ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆವು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ದೂರವಾಣಿ ಕರೆ ಮಾಡಿ ಸ್ಪಷ್ಟಪಡಿಸಿದ್ದರು. ಇದಾದ ನಂತರವೂ ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ಸ್ಥಗಿತಗೊಳಿಸಲು ನಾನು ಉಭಯ ದೇಶಗಳ ನಡುವಿನ ಅಮೆರಿಕ ವ್ಯಾಪಾರವನ್ನು ರದ್ದುಗೊಳಿಸುವ ಬೆದರಿಕೆ ಒಡ್ಡಿದ್ದೆ ಎಂದು ಡೊನಾಲ್ಡ್ ಟ್ರಂಪ್ ಪದೇ ಪದೇ ಪುನರುಚ್ಚರಿಸುತ್ತಿದ್ದಾರೆ.







