ಅಮೆರಿಕ ಸಂಸತ್ ನ ಪ್ರಥಮ ತಡೆ ದಾಟಿದ `ವ್ಯಾಪಕ ತೆರಿಗೆ ಕಡಿತ, ಖರ್ಚು ಮಸೂದೆ'
ಮಹಾನ್ ಗೆಲುವು ಎಂದು ಟ್ರಂಪ್ ಪ್ರತಿಕ್ರಿಯೆ

Photo credit: PTI
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವ್ಯಾಪಕ ತೆರಿಗೆ ಕಡಿತ ಮತ್ತು ಖರ್ಚು ಮಸೂದೆ ಅಮೆರಿಕದ ಸಂಸತ್ತಿನಲ್ಲಿ ನಿರ್ಣಾಯಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿದೆ. ಇದೊಂದು ಮಹಾನ್ ಗೆಲುವು ಎಂದು ಟ್ರಂಪ್ ಶ್ಲಾಘಿಸಿದ್ದು ಇದಕ್ಕಾಗಿ ರಿಪಬ್ಲಿಕನ್ ಸಂಸದರನ್ನು ಅಭಿನಂದಿಸಿದ್ದಾರೆ.
ಟ್ರಂಪ್ ಅವರ `ಗ್ರೇಟ್ , ಬಿಗ್, ಬ್ಯೂಟಿಫುಲ್ ಆ್ಯಕ್ಟ್'ಗೆ ಅಮೆರಿಕದ ಸೆನೆಟ್ ನಲ್ಲಿ 51-49 ಮತಗಳ ಅಲ್ಪ ಅಂತರದ ಗೆಲುವು ದೊರಕಿದೆ. ಒಂದು ವೇಳೆ `ಟೈ' ಆದರೆ `ಟೈ ಬ್ರೇಕರ್' ಆಗಿ ಮತ ಚಲಾಯಿಸಲು ಅಮೆರಿಕ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಸದನದಲ್ಲಿ ಉಪಸ್ಥಿತರಿದ್ದರು. ಮಸೂದೆಯು ಚರ್ಚೆಗೆ ಮುಂದುವರಿಯುವ ನಿರ್ಣಯವನ್ನು ವಿರೋಧಿಸಿದ ಡೆಮಾಕ್ರಟಿಕ್ ಸಂಸದರ ಜೊತೆ ಇಬ್ಬರು ರಿಪಬ್ಲಿಕನ್ನರು ಸೇರಿಕೊಂಡರು.
ಟ್ರಂಪ್ ಅವರ 2017ರ ತೆರಿಗೆ ಕಡಿತವನ್ನು ಶಾಶ್ವತವಾಗಿಸಲು, ಟಿಪ್ಸ್, ಓವರ್ಟೈಮ್ ಕೆಲಸದ ಮೇಲೆ ತೆರಿಗೆ ಕೊನೆಗೊಳಿಸುವ, ಗಡಿ ಭದ್ರತಾ ನಿಧಿಯನ್ನು ಹೆಚ್ಚಿಸುವ, ಬೈಡನ್ ಆಡಳಿತದ ಸಮಯದಲ್ಲಿ ಅಂಗೀಕರಿಸಲ್ಪಟ್ಟ ಹಸಿರು ಇಂಧನ(ಗ್ರೀನ್ ಎನರ್ಜಿ) ಸಾಲಗಳನ್ನು ರದ್ದುಗೊಳಿಸುವ 3.8 ಶತಕೋಟಿ ಡಾಲರ್ ಮೊತ್ತದ ಮಸೂದೆಯ ಕುರಿತು ಚರ್ಚೆಯನ್ನು ಪ್ರಾರಂಭಿಸಲು ಸೆನೆಟ್ ಸದಸ್ಯರು ಕಾರ್ಯವಿಧಾನದ ಹೆಜ್ಜೆ ಇಟ್ಟರು.
ಹೌಸ್ ಆಫ್ ರೆಪ್ರಸೆಂಟೇಟಿವ್ಸ್(ಸಂಸತ್ನ ಕೆಳಮನೆ) ಮತ್ತು ಸೆನೆಟ್ ಎರಡರಲ್ಲೂ ಬಹುಮತ ಹೊಂದಿರುವ ರಿಪಬ್ಲಿಕನ್ನರು ತಮ್ಮ ರಜಾದಿನದ ಪ್ರವಾಸವನ್ನು ತಕ್ಷಣ ಮೊಟಕುಗೊಳಿಸಿ ಸದನಕ್ಕೆ ಧಾವಿಸಬೇಕು ಮತ್ತು ಜುಲೈ 4ರ ಮೊದಲು ಮಸೂದೆ ಸದನದ ಅನುಮೋದನೆ ಪಡೆಯಬೇಕು ಎಂದು ಟ್ರಂಪ್ ಸೂಚಿಸಿದ್ದಾರೆ. ಆದರೆ ಮಸೂದೆಯ ವಿರುದ್ಧ ಒಗ್ಗೂಡಿರುವ ಡೆಮಾಕ್ರಾಟ್ಸ್ ಸದಸ್ಯರು 940 ಪುಟಗಳ ಮಸೂದೆಯನ್ನು ಸದನದಲ್ಲಿ ಓದಿ ಹೇಳಬೇಕೆಂದು ಆಗ್ರಹಿಸುವ ಮೂಲಕ ಚರ್ಚೆಯ ಪ್ರಕ್ರಿಯೆಯನ್ನು 12ರಿಂದ 15 ಗಂಟೆಗಳಷ್ಟು ವಿಳಂಬಿಸಲು ಪ್ರಯತ್ನಿಸಿದರು ಎಂದು `ನ್ಯೂಯಾರ್ಕ್ ಪೋಸ್ಟ್' ವರದಿ ಮಾಡಿದೆ.
ಮಸೂದೆಯು ಸಂಸತ್ತು ಮತ್ತು ಟ್ರಂಪ್ ಆಡಳಿತದ ಹಂಚಿಕೆಯ ಆದ್ಯತೆಗಳನ್ನು ಪ್ರತಿಬಿಂಬಿಸುತ್ತದೆ. ಆದ್ದರಿಂದ ಸಂಸತ್ತು ಈ ಮಸೂದೆಯನ್ನು ತಕ್ಷಣವೇ ಅನುಮೋದಿಸಿ ಅಧ್ಯಕ್ಷರ ಕಚೇರಿಗೆ ಜುಲೈ 4ರ ಒಳಗೆ ತಲುಪಿಸಬೇಕು ಎಂದು ಶ್ವೇತಭವನ ಆಗ್ರಹಿಸಿದೆ. ಪ್ರಮುಖ ಕಾರ್ಯವಿಧಾನ ಅನುಮೋದನೆ ಪಡೆಯುವಲ್ಲಿ ಸಫಲವಾದರೂ ಇನ್ನೂ ಹಲವು ತಡೆಗಳಿವೆ. ಮಸೂದೆಯಲ್ಲಿ ಬದಲಾವಣೆಗೆ ಆಗ್ರಹಿಸುತ್ತಿರುವ ಸ್ವಪಕ್ಷೀಯರನ್ನು ರಿಪಬ್ಲಿಕನ್ನರು ಸಮಾಧಾನಪಡಿಸಬೇಕಿದೆ.
ಟ್ರಂಪ್ ಅವರ ಮಹಾತ್ವಾಕಾಂಕ್ಷೆಯ ಮಸೂದೆಯು ಫೆಡರಲ್ ತೆರಿಗೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಪೆಂಟಗಾನ್ ಹಾಗೂ ಗಡಿ ಭದ್ರತಾ ಏಜೆನ್ಸಿಗಳಿಗೆ ಹೆಚ್ಚಿನ ಹಣವನ್ನು ಒದಗಿಸುತ್ತದೆ. ಆದರೆ ವೈದ್ಯಕೀಯ ನೆರವು ಸೇರಿದಂತೆ ಸರಕಾರದ `ಸುರಕ್ಷತಾ ಯೋಜನೆಗಳಿಗೆ' ಅನುದಾನವನ್ನು ಕಡಿಮೆಗೊಳಿಸುತ್ತದೆ.
►ತೆರಿಗೆ ಮಸೂದೆಯಿಂದ ಲಕ್ಷಾಂತರ ಉದ್ಯೋಗ ನಷ್ಟ: ಮಸ್ಕ್ ಟೀಕೆ
ಅಮೆರಿಕ ಅಧ್ಯಕ್ಷರ ವಿರುದ್ಧದ ಟೀಕೆಗಳನ್ನು ಮುಂದುವರಿಸಿರುವ ಉದ್ಯಮಿ ಎಲಾನ್ ಮಸ್ಕ್ `ಈ ವಾರಾಂತ್ಯದೊಳಗೆ ತರಾತುರಿಯಲ್ಲಿ ಅನುಮೋದನೆ ಪಡೆಯಬೇಕೆಂದು ರಿಪಬ್ಲಿಕನ್ನರು ಪ್ರಯತ್ನಿಸುತ್ತಿರುವ ಮಸೂದೆಯು ಲಕ್ಷಾಂತರ ಉದ್ಯೋಗಗಳನ್ನು ನಾಶಗೊಳಿಸುವ ಜೊತೆಗೆ ಕೈಗಾರಿಕೆಗಳಿಗೂ ಮಾರಕವಾಗಲಿದೆ ಎಂದಿದ್ದಾರೆ.
ಸದನದಲ್ಲಿ ಚರ್ಚೆಗೆ ಬಂದಿರುವ ಮಸೂದೆಯು ಅಮೆರಿಕದಲ್ಲಿ ಲಕ್ಷಾಂತರ ಉದ್ಯೋಗಗಳನ್ನು ನಾಶಗೊಳಿಸಲಿದೆ ಮತ್ತು ನಮ್ಮ ದೇಶಕ್ಕೆ ಅಪಾರ ಕಾರ್ಯತಂತ್ರದ ಹಾನಿಯನ್ನು ಉಂಟು ಮಾಡುತ್ತದೆ ಎಂದವರು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.







