ನಾವು ಚೀನಾಗೆ ಭಾರತ, ರಶ್ಯವನ್ನು ಕಳೆದುಕೊಂಡಿದ್ದೇವೆ: ಡೊನಾಲ್ಡ್ ಟ್ರಂಪ್ ವಿಷಾದ

ಡೊನಾಲ್ಡ್ ಟ್ರಂಪ್ | PC :NDTV
ವಾಶಿಂಗ್ಟನ್: ಭಾರತ, ರಶ್ಯ ಮತ್ತು ಚೀನಾಗೆ ಸಮೃದ್ಧ ಭವಿಷ್ಯ ಪ್ರಾಪ್ತವಾಗಲಿ ಎಂದು ವ್ಯಂಗ್ಯವಾಗಿ ಹಾರೈಸಿರುವ ಡೊನಾಲ್ಡ್ ಟ್ರಂಪ್, “ನಾವು ಚೀನಾಗೆ ಭಾರತ ಮತ್ತು ರಶ್ಯವನ್ನು ಕಳೆದುಕೊಂಡಂತೆ ಕಂಡು ಬರುತ್ತಿದೆ” ಎಂದೂ ಸಾಮಾಜಿಕ ಮಾಧ್ಯಮ ಪೋಸ್ಟ್ ಒಂದರಲ್ಲಿ ವಿಷಾದಿಸಿದ್ದಾರೆ.
“ನಾವು ಆಳವಾದ ಕರಾಳ ಮುಖವಿರುವ ಚೀನಾಗೆ ಭಾರತ ಮತ್ತು ರಶ್ಯ ವನ್ನು ಕಳೆದುಕೊಂಡಿರುವಂತೆ ಕಂಡು ಬರುತ್ತಿದೆ. ಅವರೆಲ್ಲರಿಗೂ ದೀರ್ಘಕಾಲೀನ, ಸಮೃದ್ಧ ಭವಿಷ್ಯ ಪ್ರಾಪ್ತವಾಗಲಿ” ಎಂದು ಡೊನಾಲ್ಡ್ ಟ್ರಂಪ್ ತಮ್ಮ ಟ್ರೂತ್ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ವಾರದ ಆರಂಭದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ತಿಯಾಂಜಿನ್ ನಲ್ಲಿ ಆಯೋಜನೆಗೊಂಡಿದ್ದ ಶಾಂಘೈ ಕೋ-ಆಪರೇಷನ್ ಆರ್ಗನೈಸೇಷನ್ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಆತಿಥ್ಯ ನೀಡಿದ್ದರು. ಈ ಹಿನ್ನೆಲೆಯಲ್ಲಿ ಡೊನಾಲ್ಡ್ ಟ್ರಂಪ್ ರ ಈ ಪೋಸ್ಟ್ ಮಹತ್ವ ಪಡೆದುಕೊಂಡಿದೆ.
ದಶಕಗಳ ಕಾಲ ಅಮೆರಿಕವು ಚೀನಾದ ವ್ಯಾಪಿಸುತ್ತಿರುವ ಪ್ರಭಾವಕ್ಕೆ ಭಾರತವನ್ನು ಸಮಾನ ಪ್ರತಿಸ್ಪರ್ಧಿ ಎಂದೇ ಭಾವಿಸಿಕೊಂಡು ಬಂದಿತ್ತು. ರಿಪಬ್ಲಿಕನ್ ಹಾಗೂ ಡೆಮಾಕ್ರಟಿಕ್ ಸರಕಾರಗಳೆರಡೂ ಭಾರತವನ್ನು ವ್ಯೂಹಾತ್ಮಕ ಪಾಲುದಾರನನ್ನಾಗಿ ಪೋಷಿಸಿಕೊಂಡು ಬಂದಿದ್ದವು. 2019ರಲ್ಲಿ ಹೂಸ್ಟನ್ ನಲ್ಲಿ ಆಯೋಜನೆಗೊಂಡಿದ್ದ ‘ಹೌಡಿ ಮೋದಿ’ ಸಮಾವೇಶದಲ್ಲಿ ಖುದ್ದು ಡೊನಾಲ್ಡ್ ಟ್ರಂಪ್ ಭಾರತದ ಬೆನ್ನಿಗೆ ನಿಂತಿದ್ದರು. ಅಲ್ಲದೆ, ಜಪಾನ್ ಮತ್ತು ಆಸ್ಟ್ರೇಲಿಯಾದೊಂದಿಗೆ ಚತುಷ್ಕೋನ ಪಕ್ಷೀಯ ಭದ್ರತೆಯನ್ನು ಪುನರುಜ್ಜೀವನಗೊಳಿಸುವ ಮಾತುಕತೆಗಳನ್ನು ನಡೆಸಿದ್ದರು.
ಆದರೆ, ತಿಯಾಂಜಿನ್ ನಲ್ಲಿ ಆಯೋಜನೆಗೊಂಡಿದ್ದ ಶಾಂಘೈ ಕೋ-ಆಪರೇಷನ್ ಆರ್ಗನೈಸೇಷನ್ ಶೃಂಗಸಭೆಯಲ್ಲಿ ಭಾರತ, ರಶ್ಯ ಹಾಗೂ ಚೀನಾ ಒಟ್ಟಾಗಿ ಪಾಲ್ಗೊಳ್ಳುವ ಮೂಲಕ, ಅವುಗಳ ನಡುವಿನ ಬಾಂಧವ್ಯ ಆಳವಾಗತೊಡಗಿದೆ ಎಂಬುದನ್ನು ಡೊನಾಲ್ಡ್ ಟ್ರಂಪ್ ಅವರ ಈ ಸಾರ್ವಜನಿಕ ಹೇಳಿಕೆ ಪುಷ್ಟೀಕರಿಸಿದೆ.







