ಹೊಸ ಮಧ್ಯಪ್ರಾಚ್ಯದ ಐತಿಹಾಸಿಕ ಅರುಣೋದಯ

ಡೊನಾಲ್ಡ್ ಟ್ರಂಪ್ | Photo Credit : PTI
ಜೆರುಸಲೇಂ, ಅ.13: ಗಾಝಾ ಯುದ್ಧದಲ್ಲಿ ಕದನ ವಿರಾಮಕ್ಕೆ ತಾನು ನಡೆಸಿದ ಪ್ರಯತ್ನಗಳು ಹೊಸ ಮಧ್ಯಪ್ರಾಚ್ಯದ ಐತಿಹಾಸಕ ಅರುಣೋದಯವನ್ನು ಗುರುತಿಸಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಇಸ್ರೇಲಿ ಸಂಸತ್ತಿನಲ್ಲಿ ಘೋಷಿಸಿದ್ದಾರೆ.
`ಜೊತೆಗೆ, ಇಷ್ಟು ವರ್ಷಗಳ ನಿರಂತರ ಯುದ್ಧ ಮತ್ತು ಅಂತ್ಯವಿಲ್ಲದ ಅಪಾಯದ ನಂತರ, ಇಂದು ಆಕಾಶಗಳು ಶಾಂತವಾಗಿವೆ, ಬಂದೂಕುಗಳು ಶಾಂತವಾಗಿವೆ, ಸೈರನ್ಗಳು ಸ್ಥಬ್ಧಗೊಂಡಿವೆ. ಮತ್ತು ಅಂತಿಮವಾಗಿ ಶಾಂತಿ, ಸಮೃದ್ಧಿ, ಜೀವಂತಿಕೆಯ ಕಳೆಯಿರುವ, ದೇವರು ಇಚ್ಛಿಸುವ, ಶಾಶ್ವತ ಶಾಂತಿಯಿರುವ ಪವಿತ್ರ ಭೂಮಿಯಲ್ಲಿ ಸೂರ್ಯ ಉದಯಿಸಿದ್ದಾನೆ. ಇದು ಕೇವಲ ಯುದ್ಧದ ಅಂತ್ಯ ಮಾತ್ರವಲ್ಲ, ಹೊಸ ಮಧ್ಯಪ್ರಾಚ್ಯದ ಐತಿಹಾಸಿಕ ಅರುಣೋದಯವಾಗಿದೆ' ಎಂದು ಟ್ರಂಪ್ ಹೇಳಿದ್ದಾರೆ.
ಒತ್ತೆಯಾಳುಗಳ ಬಿಡುಗಡೆಗೊಳಿಸಲು ಹಮಾಸ್ ಮೇಲೆ ಒತ್ತಡ ಹೇರಿದ ಎಲ್ಲಾ ಅರಬ್ ಮತ್ತು ಮುಸ್ಲಿಮ್ ಜಗತ್ತಿನ ರಾಷ್ಟ್ರಗಳಿಗೆ ಮೆಚ್ಚುಗೆ ಸೂಚಿಸುವುದಾಗಿ ಹೇಳಿದ ಟ್ರಂಪ್, ಇದು ಇಸ್ರೇಲ್ಗೆ ಮತ್ತು ಶಾಂತಿಗಾಗಿ ಒಟ್ಟಾಗಿ ಕೆಲಸ ಮಾಡುತ್ತಿರುವ ಎಲ್ಲಾ ದೇಶಗಳಿಗೆ ನಂಬಲಾಗದ ಗೆಲುವಾಗಿದೆ ಎಂದರು.
ಇದಕ್ಕೂ ಮುನ್ನ ಸಂಸತ್ತಿಗೆ ಟ್ರಂಪ್ ಆಗಮಿಸುತ್ತಿದ್ದಂತೆಯೇ ಸಂಸದ್ ಸದಸ್ಯರು ಎದ್ದುನಿಂತು ಕರತಾಡನದೊಂದಿಗೆ ಸ್ವಾಗತಿಸಿದರು. ಇಸ್ರೇಲ್ನ ಅತ್ಯುನ್ನತ ಗೌರವ `ದಿ ಇಸ್ರೇಲ್ ಪ್ರೈಜ್'ಗೆ ಟ್ರಂಪ್ರನ್ನು ನಾಮನಿರ್ದೇಶನ ಮಾಡುವುದಾಗಿ ಪ್ರಧಾನಿ ನೆತನ್ಯಾಹು ಈ ಸಂದರ್ಭ ಘೋಷಿಸಿದರು.







