ಗಾಝಾದಲ್ಲಿ ಕದನ ವಿರಾಮ ಜಾರಿಯಲ್ಲಿದೆ : ಡೊನಾಲ್ಡ್ ಟ್ರಂಪ್

ಡೊನಾಲ್ಡ್ ಟ್ರಂಪ್ | Photo Credit : PTI
ವಾಷಿಂಗ್ಟನ್, ಅ.20: ಗಾಝಾದಲ್ಲಿ ಇಸ್ರೇಲ್ ಯೋಧರ ಮೇಲಿನ ದಾಳಿಗೆ ಹಮಾಸ್ ಗುಂಪಿನ ಒಳಗಿರುವ ಕೆಲವು ದುಷ್ಟಶಕ್ತಿಗಳು ಕಾರಣ. ಗಾಝಾದಲ್ಲಿ ಕದನ ವಿರಾಮಕ್ಕೆ ಯಾವುದೇ ಬೆದರಿಕೆಯಿಲ್ಲ ಮತ್ತು ಅದು ಒಪ್ಪಂದದ ಪ್ರಕಾರ ಜಾರಿಯಲ್ಲಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಪಾದಿಸಿದ್ದಾರೆ.
ರಫಾದಲ್ಲಿ ಹಮಾಸ್ ಸಶಸ್ತ್ರ ಹೋರಾಟಗಾರರು ಇಸ್ರೇಲ್ ರಕ್ಷಣಾ ಪಡೆ(ಐಡಿಎಫ್)ಯ ಇಬ್ಬರು ಯೋಧರನ್ನು ಹತ್ಯೆಮಾಡಿದ ಬಳಿಕ ರವಿವಾರ ಗಾಝಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿತ್ತು. ಹೊಸದಾಗಿ ನಡೆದ ವೈಮಾನಿಕ ದಾಳಿಯು ಕದನ ವಿರಾಮ ಕುಸಿಯುವ ಆತಂಕವನ್ನು ಹುಟ್ಟಿಹಾಕಿತ್ತು.
ಈ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಟ್ರಂಪ್ `ನಿಮಗೆ ತಿಳಿದಿರುವಂತೆ ಅವರು ಸಾಕಷ್ಟು ವಿಚಲಿತರಾಗಿದ್ದು ಒಂದಿಷ್ಟು ಗುಂಡಿನ ದಾಳಿ ನಡೆಸುತ್ತಿದ್ದಾರೆ. ಆದರೆ ಆಪಾದಿತ ಉಲ್ಲಂಘನೆಯಲ್ಲಿ ಹಮಾಸ್ನ ನಾಯಕತ್ವದ ಪಾತ್ರವಿಲ್ಲ. ಹಮಾಸ್ ಗುಂಪಿನೊಳಗಿನ ಕೆಲವು ಬಂಡುಕೋರರು ಇದಕ್ಕೆ ಕಾರಣ. ಆದರೂ ಎರಡೂ ಕಡೆಯವರು ಇದನ್ನು(ಕದನ ವಿರಾಮವನ್ನು) ಸೂಕ್ತವಾಗಿ ನಿರ್ವಹಿಸುತ್ತಿದ್ದಾರೆ' ಎಂದರು.
ಇದಕ್ಕೂ ಮುನ್ನ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ` ಕದನ ವಿರಾಮದಲ್ಲಿ ಕೆಲವೊಂದು ಅಡೆತಡೆ ಇರಬಹುದು. ಹಮಾಸ್ ಇಸ್ರೇಲ್ನ ಮೇಲೆ ಗುಂಡು ಹಾರಿಸಿದರೆ ಇಸ್ರೇಲ್ ಪ್ರತಿಕ್ರಿಯಿಸಬೇಕಾಗುತ್ತದೆ. ಆದ್ದರಿಂದ ಸುಸ್ಥಿರ ಶಾಂತಿಗೆ ಇದು ಅತ್ಯುತ್ತಮ ಅವಕಾಶವಾಗಿದೆ. ನಾವು ಪರಿಸ್ಥಿತಿಯ ಮೇಲೆ ನಿಗಾ ಮುಂದುವರಿಸುತ್ತೇವೆ. ಒಪ್ಪಂದದ ಪ್ರಮುಖ ಅಂಶವಾಗಿರುವ ಹಮಾಸ್ನ ನಿಶ್ಯಸ್ತ್ರೀಕರಣವನ್ನು ಖಾತರಿ ಪಡಿಸಲು ಅರಬ್ ದೇಶಗಳು ಭದ್ರತಾ ವ್ಯವಸ್ಥೆಯನ್ನು ಸ್ಥಾಪಿಸಬೇಕು ' ಎಂದಿದ್ದರು.
ರವಿವಾರ ಹಮಾಸ್ನ ನೆಲೆಗಳನ್ನು ಗುರಿಯಾಗಿಸಿದ ದಾಳಿಯ ಬಳಿಕ ಗಾಝಾ ಕದನ ವಿರಾಮ ಜಾರಿಗೊಳಿಸುವುದನ್ನು ಪುನರಾರಂಭಿಸಿರುವುದಾಗಿ ಇಸ್ರೇಲ್ ಹೇಳಿದೆ.







