ಉತ್ತರ ಕೊರಿಯಾ `ಒಂದು ರೀತಿಯ ಪರಮಾಣು ಶಕ್ತಿ' : ಡೊನಾಲ್ಡ್ ಟ್ರಂಪ್

ಡೊನಾಲ್ಡ್ ಟ್ರಂಪ್ | Photo Credit : PTI
ವಾಷಿಂಗ್ಟನ್, ಅ.25: ಉತ್ತರ ಕೊರಿಯಾ `ಒಂದು ರೀತಿಯ ಪರಮಾಣು ಶಕ್ತಿ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ದಕ್ಷಿಣ ಕೊರಿಯಾದಲ್ಲಿ ನಡೆಯುವ ಏಶ್ಯಾ ಪೆಸಿಫಿಕ್ ಆರ್ಥಿಕ ಸಹಕಾರ ವೇದಿಕೆ(ಅಪೆಕ್) ಶೃಂಗಸಭೆಯ ನೇಪಥ್ಯದಲ್ಲಿ ಟ್ರಂಪ್ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ರನ್ನು ಭೇಟಿಯಾಗುವ ನಿರೀಕ್ಷೆಯಿದೆ. ಆದರೆ ಉತ್ತರ ಕೊರಿಯಾವನ್ನು ಪರಮಾಣು ಶಕ್ತ ದೇಶವೆಂದು ಅಮೆರಿಕ ಗುರುತಿಸಿದರೆ ಮಾತ್ರ ಮಾತುಕತೆ ಸಾಧ್ಯ ಎಂದು ಕಿಮ್ ಷರತ್ತು ವಿಧಿಸಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಟ್ರಂಪ್ `ಅವರು ಒಂದು ರೀತಿಯಲ್ಲಿ ಪರಮಾಣು ಶಕ್ತಿ ಎಂದು ಭಾವಿಸುವುದಾಗಿ' ಹೇಳಿದ್ದಾರೆ.
`ಅವರನ್ನು ಪರಮಾಣು ಶಕ್ತಿಯೆಂದು ಗುರುತಿಸಬೇಕೆಂದು ನೀವು ಹೇಳಿದರೆ, ಹೌದು ಅವರ ಬಳಿ ಸಾಕಷ್ಟು ಪರಮಾಣು ಶಸ್ತ್ರಾಸ್ತ್ರಗಳಿವೆ ಎಂದು ನಾನು ಹೇಳಬಲ್ಲೆ' ಎಂದು ಟ್ರಂಪ್ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ. ಈ ಮಧ್ಯೆ, ಮುಂದಿನ ವಾರ ನಡೆಯಲಿರುವ ಅಪೆಕ್ ಶೃಂಗಸಭೆಯ ನೇಪಥ್ಯದಲ್ಲಿ ಟ್ರಂಪ್-ಕಿಮ್ ಭೇಟಿಯ ಗಣನೀಯ ಸಾಧ್ಯತೆಯಿದೆ ಎಂದು ದಕ್ಷಿಣ ಕೊರಿಯಾದ ಸಚಿವ ಡಾಂಗ್ ಯುಂಗ್ ಶುಕ್ರವಾರ ಹೇಳಿದ್ದಾರೆ.





