ಯುದ್ಧವನ್ನು ಟ್ರಂಪ್ ತಪ್ಪಾಗಿ ಲೆಕ್ಕಾಚಾರ ಮಾಡಿದ್ದಾರೆ: ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಟೀಕೆ

ಡೊನಾಲ್ಡ್ ಟ್ರಂಪ್ | Photo Credit : PTI
ವಾಶಿಂಗ್ಟನ್, ಮಾ.13: ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಮುಂದುವರಿದಂತೆ, ಅಮೆರಿಕವು ಆರ್ಥಿಕವಾಗಿ ಹಾಗೂ ಶಸ್ತ್ರಾಸ್ತ್ರಗಳ ವಿಷಯದಲ್ಲಿ ಭಾರೀ ಹಾನಿಯನ್ನು ಎದುರಿಸುತ್ತಿದೆ. ಆದರೆ ಇರಾನ್ ಹಿಂದೆ ಸರಿಯುವ ಯಾವುದೇ ಲಕ್ಷಣಗಳನ್ನು ತೋರಿಸಿಲ್ಲ.
ಸಂಘರ್ಷ ಉಲ್ಬಣಗೊಳ್ಳುತ್ತಿರುವ ನಡುವೆಯೇ, ಇರಾನ್ನಲ್ಲಿನ ಪರಿಸ್ಥಿತಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಪ್ಪಾಗಿ ಲೆಕ್ಕಾಚಾರ ಮಾಡಿದ್ದಾರೆ ಎಂದು ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಟೀಕಿಸಿದ್ದಾರೆ.
ವೆನೆಝುವೆಲಾದಲ್ಲಿ ನಡೆದಂತೆಯೇ ಇರಾನ್ನಲ್ಲೂ ಕ್ಷಿಪ್ರವಾಗಿ ಆಡಳಿತ ಬದಲಾವಣೆಯನ್ನು ಪ್ರಚೋದಿಸಬಹುದು ಎಂದು ಟ್ರಂಪ್ ನಂಬಿರುವಂತೆ ತೋರುತ್ತದೆ. ಆದರೆ ಈ ಹೋಲಿಕೆ ಆಳವಾಗಿ ತಪ್ಪು ದಾರಿಗೆ ಎಳೆಯಿತು.
ಸಂಘರ್ಷವನ್ನು ನಿಭಾಯಿಸುವಲ್ಲಿ ಟ್ರಂಪ್ ದೀರ್ಘಾವಧಿಯ ಕಾರ್ಯತಂತ್ರದ ಯೋಜನೆಯನ್ನು ಹೊಂದಿಲ್ಲ. ಅಧ್ಯಕ್ಷರು ವಿವರವಾದ ಯೋಜನೆಯಿಲ್ಲದೆ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಅವರು ಕಾರ್ಯತಂತ್ರದ ಚಿಂತನೆಯನ್ನು ಅನುಸರಿಸುವುದಿಲ್ಲ ಎಂದು ಬೋಲ್ಟನ್ ಹೇಳಿದ್ದಾರೆ ಎಂದು ‘ಇಂಡಿಯಾ ಟುಡೆ’ ವರದಿ ಮಾಡಿದೆ.
ಟ್ರಂಪ್ ಅವರ ಮೊದಲ ಅವಧಿಯಲ್ಲಿ ಬೋಲ್ಟನ್ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು.





