ಟ್ರಂಪ್ ಅವರ ಜನಾಂಗೀಯ ದ್ವೇಷಭಾಷಣ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತದೆ : ವಿಶ್ವಸಂಸ್ಥೆ ಬೆಂಬಲಿತ ಸಮಿತಿ ಕಳವಳ

ಡೊನಾಲ್ಡ್ ಟ್ರಂಪ್ | Photo Credit : PTI , AP
ಜಿನೆವಾ, ಮಾ.14: ಜನಾಂಗೀಯ ತಾರತಮ್ಯದ ಬಗ್ಗೆ ವಿಶ್ವಸಂಸ್ಥೆ ಬೆಂಬಲಿತ ಸ್ವತಂತ್ರ ತಜ್ಞರ ಸಮಿತಿಯು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕದ ಇತರ ರಾಜಕೀಯ ನಾಯಕರ ಜನಾಂಗೀಯ ದ್ವೇಷ ಭಾಷಣದಿಂದ ಉಂಟಾದ ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಎತ್ತಿ ತೋರಿಸಿದೆ.
ಜೊತೆಗೆ, ಅಮೆರಿಕದಲ್ಲಿ ವಲಸೆಯನ್ನು ಹತೋಟಿಗೆ ತರುವ ಕಾರ್ಯಾಚರಣೆಗಳ ಬಗ್ಗೆಯೂ ಸಮಿತಿ ಕಳವಳ ವ್ಯಕ್ತಪಡಿಸಿದೆ.
`ಜನಾಂಗೀಯ ತಾರತಮ್ಯ ನಿವಾರಣಾ ಸಮಿತಿ' ಬುಧವಾರ ಬಿಡುಗಡೆಗೊಳಿಸಿರುವ ವರದಿಯಲ್ಲಿ ಶಾಲೆಗಳು, ಆಸ್ಪತ್ರೆಗಳು ಹಾಗೂ ನಂಬಿಕೆ - ಆಧಾರಿತ ಸಂಸ್ಥೆಗಳ ಬಳಿ ವಲಸೆ ಜಾರಿ ಕಾರ್ಯಾಚರಣೆಗಳನ್ನು ನಿಲ್ಲಿಸಲು ಅಮೆರಿಕವನ್ನು ಒತ್ತಾಯಿಸಲಾಗಿದೆ. ವಲಸಿಗರು, ನಿರಾಶ್ರಿತರು ಮತ್ತು ಆಶ್ರಯ ಪಡೆಯುವವರ ಬಗ್ಗೆ ಅವಹೇಳನಕಾರಿ ಮತ್ತು ಅಮಾನವೀಯ ಭಾಷೆಯ ಬಳಕೆಯ ಬಗ್ಗೆ ಸಮಿತಿ ಆತಂಕ ವ್ಯಕ್ತಪಡಿಸಿದೆ. ರಾಜಕಾರಣಿಗಳು ಮತ್ತು ಪ್ರಭಾವಿ ವ್ಯಕ್ತಿಗಳು, ವಿಶೇಷವಾಗಿ ಅಧ್ಯಕ್ಷರು ಅವರನ್ನು (ವಲಸಿಗರು, ನಿರಾಶ್ರಿತರು) ಅಪರಾಧಿಗಳು ಅಥವಾ ಹೊರೆ ಎಂದು ಬಿಂಬಿಸುವುದು ಜನಾಂಗೀಯ ತಾರತಮ್ಯ ಮತ್ತು ದ್ವೇಷಾಪರಾಧವನ್ನು ಪ್ರಚೋದಿಸಬಹುದು' ಎಂದು ಸಮಿತಿ ಹೇಳಿದೆ.
`ಪೂರ್ವಾಗ್ರಹ ಪೀಡಿತ ವಿಶ್ವಸಂಸ್ಥೆಯ ತಥಾಕಥಿತ ತಜ್ಞರ ಸಮಿತಿ ಏನು ಯೋಚಿಸುತ್ತಾರೆ ಎಂಬ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ಅಮೆರಿಕನ್ನರು ಹಿಂದೆಂದಿಗಿಂತಲೂ ಸುರಕ್ಷಿತ, ಬಲಿಷ್ಠ ದೇಶದಲ್ಲಿ ವಾಸಿಸುತ್ತಿದ್ದಾರೆ. ಈ ವಿಶ್ವಸಂಸ್ಥೆಯ ಮೌಲ್ಯಮಾಪನವು ನಿಷ್ಪ್ರಯೋಜಕವಾಗಿದೆ ಮತ್ತು ಅವರನ್ನು ಯಾಕೆ ಯಾರೂ ಗಂಭೀರವಾಗಿ ಪರಿಗಣಿಸಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ' ಎಂದು ಶ್ವೇತಭವನದ ವಕ್ತಾರೆ ಒಲಿವಿಯಾ ವೇಲ್ಸ್ ಪ್ರತಿಕ್ರಿಯಿಸಿದ್ದಾರೆ.





