ಹಾರ್ಮುಝ್ನಲ್ಲಿ ಸಿಕ್ಕಿಬಿದ್ದಿರುವ ನೌಕೆಗಳಿಗೆ ಬೆಂಗಾವಲು: ಟ್ರಂಪ್ ಘೋಷಣೆ

ಡೊನಾಲ್ಡ್ ಟ್ರಂಪ್ | Photo Credit : PTI
ವಾಶಿಂಗ್ಟನ್, ಮೇ 4: ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದಿಂದ ಹಾರ್ಮುಝ್ ಜಲಸಂಧಿಯಲ್ಲಿ ಸಿಕ್ಕಿಬಿದ್ದಿರುವ ವಾಣಿಜ್ಯ ನೌಕೆಗಳಿಗೆ ಅಮೆರಿಕ ಮಾರ್ಗದರ್ಶನ ನೀಡುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಹಾರ್ಮುಝ್ ಜಲಸಂಧಿಯಲ್ಲಿ ಸಿಲುಕಿರುವ ವಿದೇಶಿ ಹಡಗುಗಳನ್ನು ಸುರಕ್ಷಿತವಾಗಿ ಬೆಂಗಾವಲು ಮಾಡುವ ಗುರಿಯನ್ನು ಹೊಂದಿರುವ `ಪ್ರಾಜೆಕ್ಟ್ ಫ್ರೀಡಂ' ( ಮುಕ್ತಿ ಯೋಜನೆ) ಎಂಬ ಹೊಸ ಕಡಲ ಉಪಕ್ರಮವನ್ನು ಟ್ರಂಪ್ ಘೋಷಿಸಿದ್ದಾರೆ.
ನಿರ್ಣಾಯಕ ಕಡಲ ಮಾರ್ಗದಲ್ಲಿ ಸಿಕ್ಕಿಬಿದ್ದಿರುವ ತಮ್ಮ ಹಡಗುಗಳನ್ನು ಮುಕ್ತಗೊಳಿಸಲು ಹಲವಾರು ದೇಶಗಳು(ಇವುಗಳಲ್ಲಿ ಹೆಚ್ಚಿನವು ಮಧ್ಯಪ್ರಾಚ್ಯ ಸಂಘರ್ಷದಲ್ಲಿ ನೇರವಾಗಿ ಭಾಗಿಯಾಗಿಲ್ಲ) ಅಮೆರಿಕದ ನೆರವನ್ನು ಯಾಚಿಸಿವೆ. ಈ ಹಡಗುಗಳ ಸಿಬ್ಬಂದಿಗಳು ತಟಸ್ಥ ಮತ್ತು ಅಮಾಯಕರು. ಅಮೆರಿಕ ಈ ಹಡಗುಗಳನ್ನು ನಿರ್ಬಂಧಿತ ಜಲಮಾರ್ಗದಿಂದ ಹೊರಗೆ ತೆರಳಲು ಮಾರ್ಗದರ್ಶನ ನೀಡುತ್ತದೆ ಮತ್ತು ಈ ಹಡಗುಗಳು ತಮ್ಮ ವ್ಯವಹಾರವನ್ನು ಮುಂದುವರಿಸಬಹುದು ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಹಲವು ದೊಡ್ಡ ಹಡಗುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಸಿಬ್ಬಂದಿಗಳು ಆಹಾರ ಮತ್ತು ನೀರಿನ ಕೊರತೆ ಎದುರಿಸುತ್ತಿದ್ದು ಇದು ಮಾನವೀಯ ಪ್ರಯತ್ನವಾಗಿದೆ. ಈ ಉಪಕ್ರಮವು ಇರಾನ್ ಸೇರಿದಂತೆ ಪ್ರದೇಶದಲ್ಲಿನ ಎಲ್ಲಾ ಪಕ್ಷಗಳಿಗೂ ಪ್ರಯೋಜನವನ್ನು ನೀಡುವ ಉದ್ದೇಶವನ್ನು ಹೊಂದಿದೆ. ಅವರ ಹಡಗುಗಳು ಮತ್ತು ಸಿಬ್ಬಂದಿಗಳನ್ನು ಜಲಸಂಧಿಯಿಂದ ಸುರಕ್ಷಿತವಾಗಿ ಹೊರತರಲು ನಾವು ಉತ್ತಮ ಪ್ರಯತ್ನಗಳನ್ನು ಮಾಡುತ್ತೇವೆ ಎಂದು ಅವರಿಗೆ ತಿಳಿಸುವಂತೆ ನನ್ನ ಪ್ರತಿನಿಧಿಗಳಿಗೆ ಸೂಚಿಸಿರುವುದಾಗಿ ಟ್ರಂಪ್ ಹೇಳಿದ್ದಾರೆ.
15,000 ಸೈನಿಕರ ನಿಯೋಜನೆ
`ಪ್ರಾಜೆಕ್ಟ್ ಫ್ರೀಡಂ'ಗೆ ಯಾವುದೇ ರೀತಿಯ ಅಡಚಣೆ ಎದುರಾದರೂ ಅದನ್ನು ಬಲವಾಗಿ ಎದುರಿಸಲಾಗುವುದು. ಹಾರ್ಮುಝ್ ಜಲಸಂಧಿಯಲ್ಲಿ ನೌಕಾಯಾನ ಸ್ವಾತಂತ್ರ್ಯ ಮರುಸ್ಥಾಪಿಸುವ ಕಾರ್ಯಾಚರಣೆಯನ್ನು ಬೆಂಬಲಿಸುವುದಾಗಿ ಅಮೆರಿಕದ ಸೆಂಟ್ರಲ್ ಕಮಾಂಡ್ ಹೇಳಿದೆ.
ಅಮೆರಿಕದ ರಕ್ಷಣಾ ಪಡೆ ನಿರ್ದೇಶಿತ ಕಾರ್ಯಾಚರಣೆಯು ಗಮನಾರ್ಹ ಮಿಲಿಟರಿ ನಿಯೋಜನೆಯನ್ನು ಒಳಗೊಂಡಿರುತ್ತದೆ. ಮಾರ್ಗದರ್ಶಿ-ಕ್ಷಿಪಣಿ ವಿಧ್ವಂಸಕಗಳು, 100ಕ್ಕೂ ಹೆಚ್ಚು ಯುದ್ಧ ವಿಮಾನಗಳು, ಮಾನವರಹಿತ ಸಾಧನಗಳು ಹಾಗೂ ಸುಮಾರು 15,000 ಸೈನಿಕರನ್ನು ನಿಯೋಜಿಸಲಾಗುವುದು. ಕಾರ್ಯಾಚರಣೆಗೆ ವಿಶಾಲವಾದ ರಾಜತಾಂತ್ರಿಕ ಮತ್ತು ಮಿಲಿಟರಿ ಸಮನ್ವಯದ ಬೆಂಬಲವೂ ಇದೆ. ವಿದೇಶಾಂಗ ಇಲಾಖೆ, ರಕ್ಷಣಾ ಇಲಾಖೆಯ ಸಹಭಾಗಿತ್ವದಲ್ಲಿ ಅಂತರರಾಷ್ಟ್ರೀಯ ಪಾಲುದಾರರ ನಡುವೆ ಮಾಹಿತಿ ಹಂಚಿಕೆ ಮತ್ತು ಸಹಕಾರವನ್ನು ಸುಧಾರಿಸಲು `ಕಡಲ ಸ್ವಾತಂತ್ರ್ಯದ ವ್ಯವಸ್ಥೆ'ಯನ್ನು ಪ್ರಾರಂಭಿಸಲಾಗಿದೆ.






