ಚೀನಾದಿಂದ ಆಮದುಗಳ ಮೇಲೆ ಶೇ.245ರವರೆಗೆ ಸುಂಕ ಘೋಷಿಸಿದ ಡೊನಾಲ್ಡ್ ಟ್ರಂಪ್
ತೀವ್ರಗೊಂಡ ಉಭಯ ದೇಶಗಳ ನಡುವಿನ ವ್ಯಾಪಾರ ಸಂಘರ್ಷ

ಡೊನಾಲ್ಡ್ ಟ್ರಂಪ್ | PC : PTI
ಹೊಸದಿಲ್ಲಿ: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಚೀನಾದಿಂದ ಅಮೆರಿಕಕ್ಕೆ ಆಮದಾಗುವ ಸರಕುಗಳ ಮೇಲೆ ಶೇ.245ರವರೆಗೆ ಹೊಸ ಸುಂಕವನ್ನು ಪ್ರಕಟಿಸಿದ್ದು,ಇದರೊಂದಿಗೆ ಉಭಯ ದೇಶಗಳ ನಡುವಿನ ವ್ಯಾಪಾರ ಸಂಘರ್ಷ ತೀವ್ರ ಉಲ್ಬಣಗೊಂಡಿದೆ. ಶ್ವೇತಭವನವು ಮಂಗಳವಾರ ತಡರಾತ್ರಿ ಬಿಡುಗಡೆಗೊಳಿಸಿದ ಫ್ಯಾಕ್ಟ್ ಶೀಟ್ ನಲ್ಲಿ ವಿವರಿಸಲಾಗಿರುವ ಈ ನಿರ್ಧಾರವು ಚೀನಾದ ಇತ್ತೀಚಿನ ರಫ್ತು ನಿರ್ಬಂಧಗಳು ಮತ್ತು ಪ್ರತೀಕಾರ ಸುಂಕಗಳಿಗೆ ಉತ್ತರವಾಗಿದೆ.
ಚೀನಾ ತನ್ನ ಪ್ರತೀಕಾರ ಕ್ರಮಗಳ ಪರಿಣಾಮವಾಗಿ ಈಗ ಅಮೆರಿಕಕ್ಕೆ ರಫ್ತು ಮಾಡುವ ಸರಕುಗಳ ಮೇಲೆ ಶೇ.245ರವರೆಗೆ ಸುಂಕವನ್ನು ಎದುರಿಸುತ್ತಿದೆ ಎಂದು ತಿಳಿಸಿರುವ ಶ್ವೇತಭವನವು, ಈ ಕ್ರಮವು ಟ್ರಂಪ್ ಅವರ ಪ್ರಸಕ್ತ ‘ಅಮೆರಿಕ ಮೊದಲು ವ್ಯಾಪಾರ ನೀತಿ’ಯ ಭಾಗವಾಗಿದೆ ಎಂದು ಒತ್ತಿ ಹೇಳಿದೆ.
ಮಿಲಿಟರಿ,ವೈಮಾನಿಕ ಮತ್ತು ಸೆಮಿಕಂಡಕ್ಟರ್ ಕೈಗಾರಿಕೆಗಳಿಗೆ ನಿರ್ಣಾಯಕವಾಗಿರುವ ಧಾತುಗಳಾದ ಗ್ಯಾಲಿಯಂ, ಜರ್ಮೇನಿಯಂ ಮತ್ತು ಆ್ಯಂಟಿಮನಿ ಸೇರಿದಂತೆ ಹೈ-ಟೆಕ್ ಸಾಮಗ್ರಿಗಳನ್ನು ಚೀನಾ ಉದ್ದೇಶಪೂರ್ವಕವಾಗಿ ನಿರ್ಬಂಧಿಸುತ್ತಿದೆ ಎಂದು ಆಡಳಿತವು ಆರೋಪಿಸಿದೆ.
ಚೀನಾ ಇತ್ತೀಚಿಗೆ ಆರು ಹೆವ್ಹಿ ರೇರ್ ಅರ್ತ್ ಧಾತುಗಳು ಮತ್ತು ರೇರ್ ಅರ್ತ್ ಆಯಸ್ಕಾಂತಗಳ ರಫ್ತುಗಳನ್ನು ಸ್ಥಗಿತಗೊಳಿಸುವ ಮೂಲಕ ಜಾಗತಿಕ ಪೂರೈಕೆ ಸರಪಳಿಗಳಿಗೆ ಅಗತ್ಯವಾದ ಘಟಕಗಳ ಮೇಲೆ ತನ್ನ ಹಿಡಿತವನ್ನು ಬಿಗಿಗೊಳಿಸಿದೆ.