ಡೊನಾಲ್ಡ್ ಟ್ರಂಪ್ ಅವರಿಗೆ ಗಂಭೀರ ಕಾಯಿಲೆ?; ಅಮೆರಿಕ ಅಧ್ಯಕ್ಷರ ಆರೋಗ್ಯದ ಬಗ್ಗೆ ವದಂತಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Photo: PTI)
ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ದೀರ್ಘಕಾಲದ CVI (Chronic Venous Insufficiency) ಇರುವುದು ಪತ್ತೆಯಾಗಿದೆ ಎಂದು ಹೇಳಲಾಗಿದ್ದು, ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತವಾಗಿದೆ ಎಂದು livemint.com ವರದಿ ಮಾಡಿದೆ.
ಕಳೆದ ಕೆಲವು ದಿನಗಳಿಂದ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದ ಟ್ರಂಪ್ ವರ್ಜೀನಿಯಾದ ಸ್ಟರ್ಲಿಂಗ್ನಲ್ಲಿರುವ ಟ್ರಂಪ್ ನ್ಯಾಷನಲ್ ಗಾಲ್ಫ್ ಕ್ಲಬ್ನಲ್ಲಿ ಕಾಣಿಸಿಕೊಂಡಿದ್ದಾರೆ. ಹಿರಿಯ ಪತ್ರಕರ್ತೆ ಲಾರಾ ರೋಜೆನ್ ಅವರು ಶನಿವಾರ ವರ್ಜೀನಿಯಾ ಗಾಲ್ಫ್ ಕ್ಲಬ್ನ ಲ್ಲಿರುವ ಟ್ರಂಪ್ ಅವರ ಹೊಸ ಫೋಟೋವೊಂದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಅಮೆರಿಕದ ವೈದ್ಯೆ ಮಿಮ್ಮಿ ಕ್ವಾಂಗ್ ಈ ಕುರಿತು ಪ್ರತಿಕ್ರಿಯಿಸಿ, CVI ರೋಗಕ್ಕೆ ಚಿಕಿತ್ಸೆ ನೀಡದಿದ್ದರೆ ಗಂಭೀರವಾಗಿ ಕಾಲು ಕತ್ತರಿಸುವ ಪರಿಸ್ಥಿತಿ ಎದುರಾಗಬಹುದು ಎಂದು ಹೇಳಿದ್ದಾರೆ. “ಸಾಮಾನ್ಯವಾಗಿ ಕಾಲುಗಳಲ್ಲಿ ಊತ ಕಾಣಿಸುತ್ತದೆ. ಊತ ಹೆಚ್ಚಾದಂತೆ ಚರ್ಮ ದಪ್ಪವಾಗುವುದು, ಉರಿಯೂತದಂತಹ ಸಮಸ್ಯೆಗಳು ಕಂಡು ಬರುತ್ತದೆ. ಕಾಲುಗಳ ಮೇಲೆ ವಾಸಿಯಾಗದ ಗಾಯಗಳು ಕೂಡ ಕಂಡು ಬರಬಹುದು. ಪರಿಸ್ಥಿತಿ ಹದಗೆಟ್ಟರೆ ಕಾಲು ಕತ್ತರಿಸಬೇಕಾಗುತ್ತದೆ” ಎಂದು ಹೇಳಿದ್ದಾರೆ.
ಟ್ರಂಪ್ ಆರೋಗ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳು ಹರಿದಾಡಿದ್ದವು. “ಟ್ರಂಪ್ ಎಲ್ಲಿದ್ದಾರೆ?" ಮತ್ತು "ಟ್ರಂಪ್ ಸತ್ತಿದ್ದಾರೆ" ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿತ್ತು.
ಆಗಸ್ಟ್ 27ರಂದು ಅಮರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಸಂದರ್ಶನವೊಂದರಲ್ಲಿ ತುರ್ತು ಪರಿಸ್ಥಿತಿ ಎದುರಾದರೆ ಅಧ್ಯಕ್ಷನಾಗಲು ಸಿದ್ಧನಿದ್ದೇನೆ ಎಂದು ಹೇಳಿದ್ದರು. ಇದು ಟ್ರಂಪ್ ಅವರ ಆರೋಗ್ಯದ ಕುರಿತ ಊಹಾಪೋಹವನ್ನು ಮತ್ತಷ್ಟು ಬಲಗೊಳಿಸಿತ್ತು.
ಟ್ರಂಪ್ ಅವರ ಆರೋಗ್ಯ ಸ್ಥಿತಿಯ ಕುರಿತು ಶ್ವೇತಭವನದ ವೈದ್ಯ ಸೀನ್ ಬಾರ್ಬರೆಲ್ಲಾ ಪ್ರತಿಕ್ರಿಯಿಸಿ, ಟ್ರಂಪ್ ಅವರ ಆರೋಗ್ಯ ಸ್ಥಿರವಾಗಿದೆ. ಅವರ ಕಾಲುಗಳಲ್ಲಿ ಸ್ವಲ್ಪ ಊತ ಕಂಡುಬಂದಿದೆ. ಹೃದಯ ವೈಫಲ್ಯ, ಮೂತ್ರಪಿಂಡದ ದುರ್ಬಲತೆ ಸೇರಿದಂತೆ ಯಾವುದೇ ಲಕ್ಷಣಗಳಿಲ್ಲ ಎಂದು ಹೇಳಿದ್ದಾರೆ.







