ತನ್ನನ್ನು ‘ವೆನೆಝುವೆಲಾದ ಹಂಗಾಮಿ ಅಧ್ಯಕ್ಷ’ ಎಂದು ಹೇಳಿಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Photo: PTI)
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ರುತ್ ಸೋಶಿಯಲ್ನಲ್ಲಿ ತಮ್ಮನ್ನು ‘ವೆನೆಝುವೆಲಾದ ಹಂಗಾಮಿ ಅಧ್ಯಕ್ಷ’ ಎಂದು ಬಣ್ಣಿಸಿಕೊಂಡಿರುವುದು ಅಂತರರಾಷ್ಟ್ರೀಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ರವಿವಾರ ಹಂಚಿಕೊಂಡಿರುವ ಪೋಸ್ಟ್ನಲ್ಲಿ, “ವೆನೆಝುವೆಲಾದ ಹಂಗಾಮಿ ಅಧ್ಯಕ್ಷ – ಜನವರಿ 2026ರಿಂದ ಅಧಿಕಾರ ವಹಿಸಿಕೊಂಡವರು” ಎಂಬ ಪದನಾಮದೊಂದಿಗೆ ಟ್ರಂಪ್ ಅವರ ಅಧಿಕೃತ ಭಾವಚಿತ್ರವನ್ನು ಪ್ರಕಟಿಸಲಾಗಿದೆ. ಚಿತ್ರದಲ್ಲಿ ಅವರನ್ನು ಅಮೆರಿಕದ 45ನೇ ಹಾಗೂ 47ನೇ ಅಧ್ಯಕ್ಷರೆಂದು ಉಲ್ಲೇಖಿಸಲಾಗಿದ್ದು, ಜನವರಿ 20, 2025ರಂದು ಅಧಿಕಾರ ಸ್ವೀಕರಿಸಿದ್ದಾರೆ ಎಂದು ವಿವರಿಸಲಾಗಿದೆ.
ಇತ್ತೀಚೆಗೆ ಅಮೆರಿಕ ವೆನೆಝುವೆಲಾದಲ್ಲಿ ನಡೆಸಿದ ಭಾರೀ ಸೇನಾ ಕಾರ್ಯಾಚರಣೆಯ ನಂತರ ಈ ಬೆಳವಣಿಗೆ ನಡೆದಿದೆ. ಆ ಕಾರ್ಯಾಚರಣೆಯಲ್ಲಿ ವೆನೆಝುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಹಾಗೂ ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಬಂಧಿಸಿ ನ್ಯೂಯಾರ್ಕ್ಗೆ ಕರೆದೊಯ್ಯಲಾಗಿದೆ. ಅವರ ವಿರುದ್ಧ ಮಾದಕ ದ್ರವ್ಯ–ಭಯೋತ್ಪಾದನಾ ಪಿತೂರಿ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಮೆರಿಕ ಅಧಿಕಾರಿಗಳು ತಿಳಿಸಿದ್ದಾರೆ.
ವೆನೆಝುವೆಲಾದಲ್ಲಿ “ಸುರಕ್ಷಿತ ಹಾಗೂ ಸರಿಯಾದ ಆಡಳಿತ ಪರಿವರ್ತನೆ” ಸಾಧ್ಯವಾಗುವವರೆಗೆ ಅಮೆರಿಕ ಮೇಲ್ವಿಚಾರಣೆ ವಹಿಸಿಕೊಳ್ಳಲಿದೆ ಎಂದು ಟ್ರಂಪ್ ಹೇಳಿದ್ದಾರೆ. ನಾಯಕತ್ವದ ನಿರ್ವಾತವು ದೇಶದ ಹಿತಾಸಕ್ತಿಗಳಿಗೆ ಧಕ್ಕೆಯಾಗಲಿದೆ ಎಂಬುದನ್ನು ಅವರು ಉಲ್ಲೇಖಿಸಿದ್ದಾರೆ.
ಮಡುರೊ ಅವರನ್ನು ತೆಗೆದುಹಾಕಿದ ನಂತರ, ವೆನೆಝುವೆಲಾದ ಉಪಾಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರನ್ನು ಕಳೆದ ವಾರ ಮಧ್ಯಂತರ ಅಧ್ಯಕ್ಷೆಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಮಧ್ಯಂತರ ಆಡಳಿತವು 30ರಿಂದ 50 ಮಿಲಿಯನ್ ಬ್ಯಾರೆಲ್ಗಳಷ್ಟು ತೈಲವನ್ನು ಅಮೆರಿಕಕ್ಕೆ ಹಸ್ತಾಂತರಿಸಲಿದೆ ಎಂದು ಟ್ರಂಪ್ ಹೇಳಿದ್ದಾರೆ. ಮಾರುಕಟ್ಟೆ ದರದಲ್ಲಿ ತೈಲ ಮಾರಾಟ ಮಾಡಿ, ಅದರ ಆದಾಯವನ್ನು ಎರಡೂ ದೇಶಗಳಿಗೆ ಲಾಭವಾಗುವಂತೆ ನಿರ್ವಹಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಯೋಜನೆಯನ್ನು ತಕ್ಷಣ ಜಾರಿಗೊಳಿಸುವಂತೆ ಇಂಧನ ಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ.
ಇದಲ್ಲದೆ, ಟ್ರಂಪ್ ತಮ್ಮ ಪೋಸ್ಟ್ನಲ್ಲಿ ಕ್ಯೂಬಾಗೆ ಎಚ್ಚರಿಕೆ ನೀಡಿದ್ದು, ವೆನೆಝುವೆಲಾದಿಂದ ಅಲ್ಲಿಗೆ ಸಾಗುತ್ತಿದ್ದ ತೈಲ ಸರಬರಾಜು ಮತ್ತು ಹಣಕಾಸು ಸಹಾಯವನ್ನು ಕಡಿತಗೊಳಿಸುವುದಾಗಿ ತಿಳಿಸಿದ್ದಾರೆ.
ಆದರೆ ಈ ಘೋಷಣೆಯ ಹೊರತಾಗಿಯೂ, ಟ್ರಂಪ್ ಅವರನ್ನು ವೆನೆಝುವೆಲಾದ ಹಂಗಾಮಿ ಅಧ್ಯಕ್ಷ ಎಂದು ಯಾವುದೇ ಅಧಿಕೃತ ಅಥವಾ ಸಾರ್ವಜನಿಕ ದಾಖಲೆಗಳಲ್ಲಿ ಪಟ್ಟಿ ಮಾಡಲಾಗಿಲ್ಲ. ವಿಕಿಪೀಡಿಯಾ ಸೇರಿದಂತೆ ಲಭ್ಯವಿರುವ ದಾಖಲೆಗಳಲ್ಲಿ ಅಮೆರಿಕದ ಸೇನಾ ಕಾರ್ಯಾಚರಣೆ, ಮಡುರೊ ಬಂಧನ ಹಾಗೂ ಕ್ಯಾರಕಾಸ್ನಲ್ಲಿ ಜಾರಿಯಲ್ಲಿರುವ ವಿವಾದಿತ ಮಧ್ಯಂತರ ಆಡಳಿತದ ಕುರಿತ ಮಾಹಿತಿಯೇ ಉಲ್ಲೇಖವಾಗಿದೆ.







