ಭಾರತದ ಮೇಲಿನ ಸುಂಕ ಕಡಿತದ ಸುಳಿವು ನೀಡಿದ ಡೊನಾಲ್ಡ್ ಟ್ರಂಪ್

ಡೊನಾಲ್ಡ್ ಟ್ರಂಪ್ | Photo Credit : PTI
ವಾಷಿಂಗ್ಟನ್, ನ.11: ಭಾರತದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಹತ್ತಿರವಾಗುವುದರ ಕುರಿತು ಮಂಗಳವಾರ ಸುಳಿವು ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದೊಂದು ದಿನ ಅಮೆರಿಕಾವು ಭಾರತದ ಮೇಲಿನ ಸುಂಕವನ್ನು ಕಡಿತಗೊಳಿಸಬಹುದು ಎಂದು ಹೇಳಿದ್ದಾರೆ.
ಭಾರತಕ್ಕೆ ಅಮೆರಿಕಾದ ರಾಯಭಾರಿಯಾಗಿ ಸೆರ್ಗಿಯೊ ಗೋರ್ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್ `ನಾವು ಭಾರತದೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತೇವೆ. ಈಗಿನ ಪ್ರಮಾಣಕ್ಕಿಂತ ತುಂಬಾ ಭಿನ್ನವಾಗಿರುತ್ತದೆ. ಈಗ ಅವರು ನನ್ನನ್ನು ಇಷ್ಟಪಡುವುದಿಲ್ಲ ಆದರೆ ಅವರು ನಮ್ಮನ್ನು ಮತ್ತೊಮ್ಮೆ ಇಷ್ಟಪಡಲಿದ್ದಾರೆ. ನಾವು ನ್ಯಾಯಯುತ ಒಪ್ಪಂದಕ್ಕೆ ಬರಲಿದ್ದೇವೆ. ಎಲ್ಲರಿಗೂ ಒಳ್ಳೆಯದಾಗಿರುವ ಒಪ್ಪಂದಕ್ಕೆ ನಾವು ಬಹಳ ಹತ್ತಿರವಾಗಿರುವುದಾಗಿ ಭಾವಿಸುತ್ತೇನೆ' ಎಂದು ಹೇಳಿದ್ದಾರೆ.
ಭಾರತದ ಮೇಲಿನ ಸುಂಕವನ್ನು ಕಡಿತಗೊಳಿಸುವ ಬಗ್ಗೆ ಪರಿಶೀಲಿಸುವಿರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಟ್ರಂಪ್ `ಈಗ ಭಾರತದ ಮೇಲಿನ ಸುಂಕ ಅತೀ ಹೆಚ್ಚಿರುವುದಕ್ಕೆ ಕಾರಣ ರಶ್ಯದ ತೈಲ ಮತ್ತು ಅವರು ರಶ್ಯದ ತೈಲ ಖರೀದಿಯನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆಗೊಳಿಸಿದ್ದಾರೆ. ಆದ್ದರಿಂದ ಮುಂದೊಂದು ದಿನ ನಾವೂ ಅವರ ವಿರುದ್ಧದ ಸುಂಕವನ್ನು ಕಡಿಮೆಗೊಳಿಸಲಿದ್ದೇವೆ' ಎಂದು ಉತ್ತರಿಸಿರುವುದಾಗಿ ವರದಿಯಾಗಿದೆ.





