ಅಕ್ರಮವಾಗಿ ಮಾದಕವಸ್ತು ಉತ್ಪಾದನೆ, ಸಾಗಣೆ ಮಾಡುವ 23 ದೇಶಗಳ ಪಟ್ಟಿಯಲ್ಲಿ ಭಾರತವನ್ನು ಸೇರಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Photo: PTI)
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತವನ್ನೂ ಸೇರಿಸಿ 23 ರಾಷ್ಟ್ರಗಳನ್ನು ಅಕ್ರಮ ಮಾದಕವಸ್ತು ಉತ್ಪಾದನೆ ಮತ್ತು ಸಾಗಣೆಯ ಪ್ರಮುಖ ಕೇಂದ್ರಗಳ ಪಟ್ಟಿಯಲ್ಲಿ ಗುರುತಿಸಿದ್ದಾರೆ. ಅಮೆರಿಕಕ್ಕೆ ಅಪಾಯವನ್ನುಂಟು ಮಾಡುವ ಈ ರಾಷ್ಟ್ರಗಳಲ್ಲಿ ಪಾಕಿಸ್ತಾನ, ಚೀನಾವನ್ನೂ ಸೇರಿಸಿದ್ದಾರೆ.
ಸೋಮವಾರ ಅಮೆರಿಕ ಸಂಸತ್ತಿಗೆ ಸಲ್ಲಿಸಿದ ಅಧ್ಯಕ್ಷೀಯ ನಿರ್ಣಯದಲ್ಲಿ, ಟ್ರಂಪ್ ಈ ದೇಶಗಳನ್ನು “ಅಮೆರಿಕ ಮತ್ತು ಅದರ ನಾಗರಿಕರ ಸುರಕ್ಷತೆಗೆ ನಿರಂತರ ಅಪಾಯ” ಉಂಟುಮಾಡುವ ರಾಷ್ಟ್ರಗಳೆಂದು ವಿವರಿಸಿದ್ದಾರೆ. ಆದರೆ ಭಾರತವನ್ನು ಪಟ್ಟಿಯಲ್ಲಿ ಸೇರಿಸುವ ಕಾರಣಗಳ ಕುರಿತು ಯಾವುದೇ ವಿವರವಾದ ವರದಿ ಮಾಡಿಲ್ಲ.
ಪಟ್ಟಿಯಲ್ಲಿ ಅಫ್ಘಾನಿಸ್ತಾನ, ಬಹಾಮಾಸ್, ಬೆಲೀಜ್, ಬೊಲಿವಿಯಾ, ಬರ್ಮಾ, ಕೊಲಂಬಿಯಾ, ಕೋಸ್ಟಾ ರಿಕಾ, ಡೊಮಿನಿಕನ್ ರಿಪಬ್ಲಿಕ್, ಈಕ್ವೆಡಾರ್, ಎಲ್ಸಾಲ್ವಡಾರ್, ಗ್ವಾಟೆಮಾಲಾ, ಹೈಟಿ, ಹೊಂಡುರಾಸ್, ಜಮೈಕಾ, ಲಾವೋಸ್, ಮೆಕ್ಸಿಕೋ, ನಿಕರಾಗುವಾ, ಪನಾಮಾ, ಪೆರು ಮತ್ತು ವೆನೆಜುವೆಲಾ ಸೇರಿದಂತೆ ಅನೇಕ ರಾಷ್ಟ್ರಗಳ ಹೆಸರುಗಳಿವೆ.
ಪಟ್ಟಿಯಲ್ಲಿ ಹೆಸರು ಸೇರಿರುವುದು ಆ ದೇಶದ ಸರ್ಕಾರ ಮಾದಕವಸ್ತು ನಿಯಂತ್ರಣದಲ್ಲಿ ವಿಫಲವಾಗಿದೆ ಎಂದು ಸೂಚಿಸುವುದಿಲ್ಲ. ಬದಲಿಗೆ, ಭೌಗೋಳಿಕ, ಆರ್ಥಿಕ ಮತ್ತು ವ್ಯಾಪಾರಿಕ ಅಂಶಗಳ ಸಂಯೋಜನೆಯಿಂದ ಅಕ್ರಮ ಮಾದಕವಸ್ತು ಉತ್ಪಾದನೆ ಮತ್ತು ಸಾಗಣೆ ಸಾಧ್ಯವಾಗುತ್ತದೆ ಎಂದು ಅಮೆರಿಕ ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ.
ಐದು ರಾಷ್ಟ್ರಗಳಾದ ಅಫ್ಘಾನಿಸ್ತಾನ, ಬೊಲಿವಿಯಾ, ಬರ್ಮಾ, ಕೊಲಂಬಿಯಾ ಮತ್ತು ವೆನೆಜುವೆಲಾ ಕಳೆದ ವರ್ಷ ಮಾದಕ ವಸ್ತುಗಳನ್ನು ನಿಯಂತ್ರಿಸಲು “ಗಣನೀಯ ಪ್ರಯತ್ನಗಳಲ್ಲಿ ವಿಫಲ”ವಾಗಿವೆ ಎಂದು ವರದಿ ತಿಳಿಸಿದೆ. ಅಮೆರಿಕ ಈ ದೇಶಗಳಿಗೆ ತಮ್ಮ ನಿಯಂತ್ರಣ ಕ್ರಮಗಳನ್ನು ಬಲಪಡಿಸಲು ಕರೆ ನೀಡಿದೆ.
ಚೀನಾವನ್ನು ಫೆಂಟನಿಲ್ ತಯಾರಿಕೆಗೆ ಅಗತ್ಯವಿರುವ ಪೂರ್ವಗಾಮಿ ರಾಸಾಯನಿಕಗಳ “ವಿಶ್ವದ ಅತಿದೊಡ್ಡ ಮೂಲ” ಎಂದು ಅಮೆರಿಕ ವರದಿ ಮಾಡಿದೆ. ನೈಟಜೀನ್ ಮತ್ತು ಮೆಥಾಂಫೆಟಮೈನ್ ಸೇರಿದಂತೆ ಇತರ ಸಂಶ್ಲೇಷಿತ ಮಾದಕವಸ್ತುಗಳ ಜಾಗತಿಕ ಪೂರೈಕೆಯಲ್ಲಿಯೂ ಚೀನಾ ಪ್ರಮುಖ ಪಾತ್ರ ವಹಿಸುತ್ತಿದೆ. ಅಮೆರಿಕವು ಬೀಜಿಂಗ್ ನಿಂದ ರಾಸಾಯನಿಕ ಹರಿವನ್ನು ಕಡಿಮೆ ಮಾಡಲು ನಿರಂತರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದೆ.
ತಾಲಿಬಾನ್ ಮಾದಕ ವಸ್ತುಗಳ ಮೇಲೆ ನಿಷೇಧ ಹೇರಿದ್ದರೂ, ಅಫ್ಘಾನಿಸ್ತಾನದಲ್ಲಿ ಮಾದಕವಸ್ತು ಉತ್ಪಾದನೆ ಮತ್ತು ದಾಸ್ತಾನು ಮುಂದುವರೆದಿದ್ದು, ಅಂತರರಾಷ್ಟ್ರೀಯ ಮಾರುಕಟ್ಟೆಗೆ ಅಕ್ರಮ ಮಾದಕವಸ್ತು ಹರಿವಿಗೆ ಯಾವುದೇ ತಡೆ ನೀಡಿಲ್ಲ ಎಂದು ಉಲ್ಲೇಖಿಸಿದೆ.
“ಮಾದಕವಸ್ತು ವ್ಯಾಪಾರದ ಆದಾಯವು ಅಂತರರಾಷ್ಟ್ರೀಯ ಅಪರಾಧ ಜಾಲಗಳು ಮತ್ತು ಭಯೋತ್ಪಾದಕ ಸಂಘಟನೆಗಳಿಗೆ ಹಣಕಾಸು ಒದಗಿಸುತ್ತದೆ” ಎಂದು ಟ್ರಂಪ್ ಎಚ್ಚರಿಸಿದ್ದಾರೆ.







