ಡೆಮಾಕ್ರಟಿಕ್ ಪಕ್ಷಕ್ಕೆ ನೆರವು ನೀಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ: ಎಲಾನ್ ಮಸ್ಕ್ ಗೆ ಡೊನಾಲ್ಡ್ ಟ್ರಂಪ್ ಎಚ್ಚರಿಕೆ

PC: x.com/MENAFN
ವಾಷಿಂಗ್ಟನ್: ವಿವಾದಾತ್ಮಕ ವೆಚ್ಚ ಮಸೂದೆಯ ಪರ ಮತ ಚಲಾಯಿಸಿದ ರಿಪಬ್ಲಿಕನ್ನರನ್ನು ಶಿಕ್ಷಿಸಲು ಬಯಸಿದರೆ, ಅದಕ್ಕಾಗಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ತಮ್ಮ ಮಾಜಿ ಸಲಹೆಗಾರರೂ ಆದ ಕೋಟ್ಯಧಿಪತಿ ಉದ್ಯಮಿ ಎಲಾನ್ ಮಸ್ಕ್ ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಒಡ್ಡಿದ್ದಾರೆ.
ವಿಶ್ವದ ಅತ್ಯಂತ ಬಲಿಷ್ಠ ವ್ಯಕ್ತಿಯಾದ ಡೊನಾಲ್ಡ್ ಟ್ರಂಪ್ ಹಾಗೂ ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿಯಾದ ಎಲಾನ್ ಮಸ್ಕ್ ಈ ವಾರ ಪರಸ್ಪರ ಜಟಾಪಟಿಗಿಳಿದ ಬೆನ್ನಿಗೇ, NBC ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಡೊನಾಲ್ಡ್ ಟ್ರಂಪ್ ಮೇಲಿನಂತೆ ಬೆದರಿಕೆ ಹಾಕಿದ್ದಾರೆ.
ಡೊನಾಲ್ಡ್ ಟ್ರಂಪ್ ರಿಂದ ಬೃಹತ್ ಹಾಗೂ ಸುಂದರ ಮಸೂದೆ ಎಂದು ಬಣ್ಣನೆಗೊಳಗಾಗಿರುವ, ಸದ್ಯ ಅನುಮೋದನೆಗಾಗಿ ಕಾಂಗ್ರೆಸ್ ಮುಂದಿರುವ ವೆಚ್ಚ ಮಸೂದೆಗೆ ಸಂಬಂಧಿಸಿದಂತೆ ಡೊನಾಲ್ಡ್ ಟ್ರಂಪ್ ಹಾಗೂ ಎಲಾನ್ ಮಸ್ಕ್ ಸಾಮಾಜಿಕ ಮಾಧ್ಯಮಗಳಲ್ಲಿ ಪರಸ್ಪರ ಕೆಸರೆರಚಾಟದ ಪೋಸ್ಟ್ ಗಳನ್ನು ಮಾಡಿದ್ದರು.
ಗುರುವಾರದಂದು ಡೊನಾಲ್ಡ್ ಟ್ರಂಪ್ ಹಾಗೂ ಎಲಾನ್ ಮಸ್ಕ್ ಸಾರ್ವಜನಿಕವಾಗಿ ಒಟ್ಟಾಗಿ ಕಾಣಿಸಿಕೊಂಡ ಕೆಲವೇ ದಿನಗಳಲ್ಲಿ ಅವರಿಬ್ಬರ ನಡುವೆ ಈ ಮನಸ್ತಾಪ ಉಂಟಾಗಿತ್ತು.
ಆದರೆ, ಡೊನಾಲ್ಡ್ ಟ್ರಂಪ್ ರ ಮಹತ್ವಾಕಾಂಕ್ಷಿ ವೆಚ್ಚ ಮಸೂದೆಯ ವಿರುದ್ಧ ಇರುವ ಕೆಲವು ಸಂಸದರು, ಕಳೆದ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷಕ್ಕೆ ಭಾರಿ ಪ್ರಮಾಣದಲ್ಲಿ ನೆರವು ನೀಡಿದ್ದ ಎಲಾನ್ ಮಸ್ಕ್ ಗೆ ಕರೆ ಮಾಡಿ, ಈ ಮಸೂದೆಯ ಪರ ಮತ ಚಲಾಯಿಸಿದ ರಿಪಬ್ಲಿಕ್ ಸದಸ್ಯರಿಗೆ ಸವಾಲು ಒಡ್ಡಲು ಪ್ರಾಥಮಿಕ ನೆರವು ಒದಗಿಸುವಂತೆ ಮನವಿ ಮಾಡಿದ್ದರು ಎಂದು ವರದಿಯಾಗಿದೆ.
ಈ ಕುರಿತು ಶನಿವಾರ NBC ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಡೊನಾಲ್ಡ್ ಟ್ರಂಪ್, “ಅವರೇನಾದರೂ ಹಾಗೆ ಮಾಡಿದರೆ, ಅದಕ್ಕಾಗಿ ಅವರು ತುಂಬಾ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ” ಎಂದು ಬೆದರಿಕೆ ಹಾಕಿದ್ದಾರೆ. ಆದರೆ, ಆ ಪರಿಣಾಮಗಳೇನು ಎಂಬುದರ ಕುರಿತು ನಿರ್ದಿಷ್ಟವಾಗಿ ಏನನ್ನೂ ಹೇಳಿಲ್ಲ.
ದಕ್ಷಿಣ ಆಫ್ರಿಕಾ ಸಂಜಾತ ಹಾಗೂ ಸ್ಪೇಸ್ ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ ರೊಂದಿಗಿನ ಸಂಬಂಧವನ್ನು ಸರಿಪಡಿಸಿಕೊಳ್ಳುವ ಯಾವ ಇರಾದೆಯೂ ನನಗಿಲ್ಲ ಎಂದೂ ಸ್ಪಷ್ಟಪಡಿಸಿರುವ ಡೊನಾಲ್ಡ್ ಟ್ರಂಪ್, “ನನಗೆ ಅವರೊಂದಿಗೆ ಮಾತನಾಡುವ ಬಯಕೆಯೂ ಇಲ್ಲ” ಎಂದು ಖಂಡುತುಂಡವಾಗಿ ಹೇಳಿದ್ದಾರೆ.
ಸರಕಾರಿ ವೆಚ್ಚ ದಕ್ಷತೆ ಮುಖ್ಯಸ್ಥರಾಗಿದ್ದ ಎಲಾನ್ ಮಸ್ಕ್ ಗೆ ಡೊನಾಲ್ಡ್ ಟ್ರಂಪ್ ಕಳೆದ ವಾರವಷ್ಟೆ ಅದ್ದೂರಿ ಬೀಳ್ಕೊಡುಗೆ ನೀಡಿದ್ದರು. ಆದರೆ, ಡೊನಾಲ್ಡ್ ಟ್ರಂಪ್ ರ ಮಹತ್ವಾಕಾಂಕ್ಷಿ ವೆಚ್ಚ ಮಸೂದೆಯನ್ನು ‘ಅಸಹ್ಯ’ ಎಂದು ಬಣ್ಣಿಸಿದ್ದ ಎಲಾನ್ ಮಸ್ಕ್, ಈ ಮಸೂದೆಯೇನಾದರೂ ಕಾಂಗ್ರೆಸ್ ನಿಂದ ಅಂಗೀಕಾರಗೊಂಡರೆ, ಡೊನಾಲ್ಡ್ ಟ್ರಂಪ್ ರ ಅಧ್ಯಯಕ್ಷೀಯತೆಯ ಎರಡನೆ ಅವಧಿಯನ್ನು ನಿರ್ಧರಿಸಲಿದೆ ಎಂದು ಮಾರ್ಮಿಕವಾಗಿ ಹೇಳಿದ್ದರು. ಇದಾದ ಕೆಲವೇ ದಿನಗಳಲ್ಲಿ ಅವರಿಬ್ಬರ ನಡುವಿನ ಸಂಬಂಧ ಮುರಿದು ಬಿದ್ದಿತ್ತು.







