ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಪ್ರಚೋದಿಸಬೇಡಿ: ಹೌದಿಗಳಿಗೆ ವಿಶ್ವಸಂಸ್ಥೆ ಎಚ್ಚರಿಕೆ

Photo: NDTV
ನ್ಯೂಯಾರ್ಕ್ : ಕೆಂಪು ಸಮುದ್ರದಲ್ಲಿ ಹಡಗುಗಳ ಮೇಲಿನ ದಾಳಿಯನ್ನು ಕೊನೆಗೊಳಿಸಬೇಕು ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿ ಯೆಮನ್ ಮೂಲದ ಹೌದಿಗಳನ್ನು ಬುಧವಾರ ಆಗ್ರಹಿಸಿದ್ದು ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯನ್ನು ಪ್ರಚೋದಿಸದಂತೆ ಎಚ್ಚರಿಕೆ ನೀಡಿದೆ.
ಅಲ್ಲದೆ, ಕೆಂಪು ಸಮುದ್ರದಲ್ಲಿ ನವೆಂಬರ್ 19ರಂದು ಅಪಹರಿಸಿದ್ದ ಜಪಾನ್ ನಿರ್ವಹಣೆಯ `ಗ್ಯಾಲಾಕ್ಸಿ ಲೀಡರ್' ಹಡಗನ್ನು ತಕ್ಷಣ ಬಿಡುಗಡೆಗೊಳಿಸವಂತೆ ಬುಧವಾರ ಅಂಗೀಕರಿಸಲಾದ ನಿರ್ಣಯದಲ್ಲಿ ಆಗ್ರಹಿಸಲಾಗಿದೆ. `ಹೌದಿಗಳು ಜಾಗತಿಕ ವಾಣಿಜ್ಯ ಮತ್ತು ಸಮುದ್ರಯಾನ ಹಕ್ಕುಗಳಿಗೆ, ಸ್ವಾತಂತ್ರ್ಯಕ್ಕೆ ಮತ್ತು ಪ್ರಾದೇಶಿಕ ಶಾಂತಿಗೆ ಅಡ್ಡಿಪಡಿಸುವ ಎಲ್ಲಾ ದಾಳಿಗಳನ್ನೂ ತಕ್ಷಣ ನಿಲ್ಲಿಸಬೇಕು' ಎಂದು ಆಗ್ರಹಿಸುವ ನಿರ್ಣಯದ ಪರ 11 ಸದಸ್ಯರು ಮತ ಚಲಾಯಿಸಿದರೆ ವೀಟೊ ಅಧಿಕಾರ ಹೊಂದಿರುವ ರಶ್ಯ ಮತ್ತು ಚೀನಾ ಸೇರಿದಂತೆ 4 ಸದಸ್ಯರು ಮತದಾನದಿಂದ ದೂರ ಉಳಿದರು. ಯಾವುದೇ ಸದಸ್ಯರು ನಿರ್ಣಯವನ್ನು ವಿರೋಧಿಸಲಿಲ್ಲ. ತಮ್ಮ ಹಡಗುಗಳನ್ನು ದಾಳಿಯಿಂದ ರಕ್ಷಿಸುವ ಎಲ್ಲಾ ಹಕ್ಕುಗಳನ್ನೂ ಸದಸ್ಯ ದೇಶಗಳು ಹೊಂದಿವೆ ಎಂಬ ಪ್ರಮುಖ ನಿಬಂಧನೆಯನ್ನು ನಿರ್ಣಯ ಹೊಂದಿದೆ. ಕೆಂಪು ಸಮುದ್ರ ಮತ್ತು ಏಡನ್ ಕೊಲ್ಲಿಯಲ್ಲಿ ವಾಣಿಜ್ಯ ಹಡಗುಗಳನ್ನು ಹೌದಿಗಳ ಡ್ರೋನ್ ಮತ್ತು ಕ್ಷಿಪಣಿ ದಾಳಿಯಿಂದ ರಕ್ಷಿಸುತ್ತಿರುವ ಅಮೆರಿಕ ನೇತೃತ್ವದ ಬಹುರಾಷ್ಟ್ರೀಯ ನೌಕಾ ಕಾರ್ಯಪಡೆಯಾದ `ಆಪರೇಷನ್ ಪ್ರಾಸ್ಪರಿಟಿ ಗಾರ್ಡಿಯನ್'ಗೆ ಈ ನಿಬಂಧನೆಯು ಸೂಚ್ಯವಾದ ಅನುಮೋದನೆಯಾಗಿದೆ. ಈ ಸೂಚ್ಯವಾದ ಅನುಮೋದನೆಯನ್ನು ತೆಗೆದು ಹಾಕುವ ಮತ್ತು ಗಾಝಾದಲ್ಲಿನ ಯುದ್ಧ ಹೌದಿಗಳ ಆಕ್ರಮಣಕ್ಕೆ ಮೂಲ ಕಾರಣ ಎಂಬ ತಿದ್ದುಪಡಿಯನ್ನು ರಶ್ಯ ಪ್ರಸ್ತಾವಿಸಿದ್ದು ಇದನ್ನು ತಿರಸ್ಕರಿಸಲಾಯಿತು.
`ಕೆಂಪು ಸಮುದ್ರದಲ್ಲಿ ಸಮುದ್ರಯಾನದ ಹಕ್ಕುಗಳು ಮತ್ತು ಸ್ವಾತಂತ್ರ್ಯಕ್ಕೆ ಬೆದರಿಕೆಯು ಜಾಗತಿಕ ಸವಾಲಾಗಿದ್ದು ಇದಕ್ಕೆ ಜಾಗತಿಕ ಪ್ರತಿಕ್ರಿಯೆಯ ಅಗತ್ಯವಿದೆ' ಎಂದು ವಿಶ್ವಸಂಸ್ಥೆಯಲ್ಲಿನ ಅಮೆರಿಕದ ರಾಯಭಾರಿ ಲಿಂಡಾ ಥಾಮಸ್-ಗ್ರೀನ್ಫೀಲ್ಡ್ ಹೇಳಿದ್ದಾರೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯವು ರಾಜಕೀಯ ಆಟವಾಗಿದ್ದು ಅಂತರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುವುದರಲ್ಲಿ ಅಮೆರಿಕ ಅಗ್ರಸ್ಥಾನದಲ್ಲಿದೆ ಎಂದು ಹೌದಿಗಳ ವಕ್ತಾರ ಮುಹಮ್ಮದ್ ಅಬ್ದುಲ್ ಸಲಾಮ್ ಟೀಕಿಸಿದ್ದಾರೆ.





