ಉಕ್ರೇನ್ ಮೇಲೆ ರಶ್ಯಾದಿಂದ ಡ್ರೋನ್ ದಾಳಿ | 22 ಜನರು ಮೃತ್ಯು; ಗೋದಾಮಿನಲ್ಲಿ ಭೀಕರ ಸ್ಫೋಟ

ಸಾಂದರ್ಭಿಕ ಚಿತ್ರ - AI
ಕೀವ್: ಉಕ್ರೇನ್ ರಾಜಧಾನಿ ಕೀವ್ ಬಳಿಯ ಗೋದಾಮಿನ ಮೇಲೆ ರಶ್ಯ ನಡೆಸಿದ ಸರಣಿ ಡ್ರೋನ್ ದಾಳಿಯು ಭಾರಿ ಸ್ಫೋಟಕ್ಕೆ ಕಾರಣವಾಗಿದ್ದು, ಕನಿಷ್ಠ 27 ಜನರು ಮೃತಪಟ್ಟಿದ್ದಾರೆ ಮತ್ತು ಹತ್ತಾರು ಜನರು ಗಾಯಗೊಂಡಿದ್ದಾರೆ. ಈ ಸ್ಫೋಟದಿಂದಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ವ್ಯಾಪಕ ಹಾನಿಯಾಗಿದೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ.
ಡ್ರೋನ್ ತಯಾರಿಕೆಗೆ ಬಳಸಲಾಗುವ ಉಪಕರಣಗಳನ್ನು ಸಂಗ್ರಹಿಸಲಾಗಿದ್ದ ಶಸ್ತ್ರಾಸ್ತ್ರ ಡಿಪೋವನ್ನು ತಮ್ಮ ಪಡೆಗಳು ಗುರಿಯಾಗಿಸಿಕೊಂಡಿವೆ ಎಂದು ರಶ್ಯ ಹೇಳಿದೆ. ರಶ್ಯದ ಡ್ರೋನ್ಗಳು ಗೋದಾಮಿಗೆ ಅಪ್ಪಳಿಸಿ ಸ್ಫೋಟಕ್ಕೆ ಕಾರಣವಾಗಿವೆ. ಸ್ಫೋಟಕ್ಕೆ ಕಾರಣವಾದ ಸಂದರ್ಭಗಳ ಕುರಿತು ತನಿಖೆ ನಡೆಸಲಾಗುವುದು ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ಶುಕ್ರವಾರ ತಡರಾತ್ರಿಯಿಂದ ಶನಿವಾರ ಬೆಳಗಿನವರೆಗಿನ ಅವಧಿಯಲ್ಲಿ ರಶ್ಯ ಕನಿಷ್ಠ ಎರಡು ಕ್ಷಿಪಣಿಗಳು ಮತ್ತು 267 ಡ್ರೋನ್ಗಳನ್ನು ಪ್ರಯೋಗಿಸಿದೆ. ಶನಿವಾರ ರಶ್ಯ ನಡೆಸಿದ ಪ್ರತ್ಯೇಕ ದಾಳಿಗಳಲ್ಲಿ ದಕ್ಷಿಣ ಉಕ್ರೇನ್ನ ಒಡೆಸಾ ಪ್ರದೇಶದಲ್ಲಿ ಒಬ್ಬರು ಮತ್ತು ಬೊರಿಸ್ಪಿಲ್ನಲ್ಲಿ 14 ವರ್ಷದ ಬಾಲಕಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಮತ್ತೊಂದೆಡೆ, ರಶ್ಯದ ಬೆಲ್ಗೊರೊಡ್ ಪ್ರದೇಶದಲ್ಲಿ ಉಕ್ರೇನ್ ನಡೆಸಿದ ದಾಳಿಯಲ್ಲಿ ಮೂವರು ಮೃತಪಟ್ಟಿದ್ದು, ರಶ್ಯದ ವ್ಯಾಪಾರ ಸಂಸ್ಥೆ `ಓಝೋನ್'ಗೆ ಸೇರಿದ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.






