ಪಾಕಿಸ್ತಾನ ಕೇಬಲ್ ಕಾರ್ ರಕ್ಷಣಾ ಕಾರ್ಯಾಚರಣೆಯ ಸಂದರ್ಭದ ಭಯ ಹುಟ್ಟಿಸುವ ಡ್ರೋನ್ ವಿಡಿಯೋ

Photo- Twitter@caroline_gm_d
ಇಸ್ಲಾಮಾಬಾದ್: ಪಾಕಿಸ್ತಾನದ ಖೈಬರ್ ಪಖ್ತುಂಖ್ವ ಪ್ರಾಂತ್ಯದಲ್ಲಿ ಭೂಮಿಗಿಂತ 900 ಅಡಿ ಎತ್ತರದಲ್ಲಿ ಕೇಬಲ್ ಕಾರಿನಲ್ಲಿ 15 ಗಂಟೆಗಳಿಗೂ ಹೆಚ್ಚು ಕಾಲ ಸಿಲುಕಿಕೊಂಡಿದ್ದ ಎಂಟು ಜನರನ್ನು ರಕ್ಷಿಸಲಾಗಿದ್ದು, ಕೇಬಲ್ ಕಾರಿನಲ್ಲಿದ್ದವರನ್ನು ರಕ್ಷಿಸುವ ಮುನ್ನ ಅವರಿದ್ದ ಭಯಾನಕ ಸ್ಥಿತಿಯನ್ನು ತೋರಿಸುವ ಡ್ರೋನ್ ವೀಡಿಯೋವೊಂದು ಈಗ ಹೊರಬಿದ್ದಿದೆ.
ಈ ವೀಡಿಯೋದಲ್ಲಿ ಕೇಬಲ್ ಕಾರು ಪ್ರಯಾಣಿಕರು ಕೇಬಲ್ ಕಾರಿನ ಗ್ರಿಲ್ಗಳು ಮತ್ತು ಕಂಬಗಳನ್ನು ಹಿಡಿದುಕೊಂಡಿರುವುದು ಹಾಗೂ ಕೇಬಲ್ ಕಾರು ಬಹುತೇಕ ಬುಡಮೇಲಾಗುವ ಸ್ಥಿತಿಯಲ್ಲಿರುವುದು ಕಾಣಿಸುತ್ತದೆ.
ಬಿಬಿಸಿಗೆ ದೊರೆತ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಆರು ಶಾಲಾ ಮಕ್ಕಳ ಸಹಿತ ಕೇಬಲ್ ಕಾರಿನಲ್ಲಿದ್ದ ಎಂಟು ಮಂದಿಯನ್ನು ರಕ್ಷಿಸಲು ಮಿಲಿಟರಿ ಹೆಲಿಕಾಪ್ಟರ್ಗಳು ಮತ್ತು ಝಿಪ್ಲೈನ್ ಪರಿಣತರನ್ನು ಬಳಸಲಾಗಿತ್ತು. ಮೊದಲು ಹೆಲಿಕಾಪ್ಟರ್ ಮೂಲಕ ಎರಡು ಮಕ್ಕಳನ್ನು ರಕ್ಷಿಸಲಾಯಿತು. ಅಷ್ಟರೊಳಗೆ 12 ಗಂಟೆಗಳ ಕಾರ್ಯಾಚರಣೆಯ ನಂತರ ಕತ್ತಲಾಗಿದ್ದರಿಂದ ಹೆಲಿಕಾಪ್ಟರ್ ತನ್ನ ನೆಲೆಗೆ ಹಿಂತಿರುಗಿತ್ತು.
ನಂತರ ರಕ್ಷಣಾ ಕಾರ್ಯಕರ್ತರು ಕೇಬಲ್ ಬಳಸಿ ಕೇಬಲ್ ಕಾರ್ ಕಣಿವೆಗೆ ಬೀಳದಂತೆ ತಡೆದಿದ್ದರು.
ಈ ಕೇಬಲ್ ಕಾರುಗಳು ಪ್ರಯಾಣಿಕರಲ್ಲದೆ ಕೆಲವೊಮ್ಮೆ ಕಾರುಗಳನ್ನೂ ಸಾಗಿಸುತ್ತವೆ ಹಾಗೂ ಪಾಕಿಸ್ತಾನದ ಖೈಬರ್ ಪಖ್ತುಂಖ್ವ ಪ್ರಾಂತ್ಯ ಮತ್ತು ಗಿಲ್ಗಿಟ್ ಬಲ್ಟಿಸ್ತಾನ್ ಪ್ರಾಂತ್ಯದಲ್ಲಿ ಗ್ರಾಮಗಳು ಮತ್ತು ಪಟ್ಟಣಗಳ ಸಂಪರ್ಕಕ್ಕೆ ಪ್ರಮುಖವಾಗಿವೆ.







