ಮಾದಕದ್ರವ್ಯ ಕಳ್ಳಸಾಗಣೆ ಬೋಟ್ ಮೇಲೆ ಅಮೆರಿಕನ್ ಪಡೆಗಳ ದಾಳಿ: ಇಬ್ಬರು ಮೃತ್ಯು

PC : pbs.org
ವಾಶಿಂಗ್ಟನ್,ನ.7: ಕೆರಿಬಿಯನ್ ಸಮುದ್ರದಲ್ಲಿ ಮಾದಕದ್ರವ್ಯ ಕಳ್ಳಸಾಗಣೆ ಮಾಡುತ್ತಿದ್ದ ದೋಣಿಯ ಮೇಲೆ ಗುರುವಾರ ಅಮೆರಿಕ ಪಡೆಗಳು ನಡೆಸಿದ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಾಗನ್ ವರಿಷ್ಠ ಪೀಟ್ ಹೆಗ್ಸೆಥ್ ತಿಳಿಸಿದ್ದಾರೆ. ಇದರೊಂದಿಗೆ ಟ್ರಂಪ್ ಆಡಳಿತವು ಅಮೆರಿಕದಲ್ಲಿ ಆರಂಭಿಸಿರುವ ಮಾದಕದ್ರವ್ಯ ವಿರೋಧಿ ಅಭಿಯಾನಕ್ಕೆ ಬಲಿಯಾದವರ ಸಂಖ್ಯೆ 70ಕ್ಕೇರಿದೆ.
ಈವರೆಗೆ ಅಮೆರಿಕವು ಮಾದಕದ್ರವ್ಯ ಕಳ್ಳಸಾಗಣೆಯಲ್ಲಿ ತೊಡಗಿತ್ತೆನ್ನಲಾದ ಕನಿಷ್ಠ 18 ನೌಕೆಗಳು, 17 ದೋಣಿಗಳು ಹಾಗೂ ಸೆಮಿ-ಸಬ್ಮೆರ್ಸಿಬಲ್ ನೌಕೆಗಳನ್ನು ನಾಶಪಡಿಸಿದೆ. ಆದರೆ ನಾಶಪಡಿಸಲಾದ ನೌಕೆಗಳು ಮಾದಕದ್ರವ್ಯ ಕಳ್ಳಸಾಗಣೆ ನಡೆಸುತ್ತಿದ್ದವು ಅಥವಾ ಅಮೆರಿಕದ ಭದ್ರತೆಗೆ ಬೆದರಿಕೆಯಾಗಿದ್ದವು ಎಂಬ ಬಗ್ಗೆ ಯಾವುದೇ ದೃಢವಾದ ಪುರಾವೆಯನ್ನು ಒದಗಿಸಲು ವಿಫಲವಾಗಿದ್ದವು.
ಅಮೆರಿಕದ ರಕ್ಷಣಾ ಪಡೆಗಳು ಗುರುವಾರ ನಡೆಸಿದ ದಾಳಿಯ ವೈಮಾನಿಕ ದೃಶ್ಯಾವಳಿಯ ವೀಡಿಯೊವನ್ನು ಹೆಗ್ಸೆ ಥ್ ಬಿಡುಗಡೆಗೊಳಿಸಿದ್ದಾರೆ. ಈ ನೌಕೆಯನ್ನು ನಿಯೋಜಿತ ಉಗ್ರಗಾಮಿ ಸಂಘಟನೆಯೊಂದು ನಿರ್ವಹಿಸುತ್ತಿತ್ತು ಎಂದು ಅವರು ಹೇಳಿದ್ದಾರೆ. ಆದರೆ ಕಾರ್ಯಾಚರಣೆಯಲ್ಲಿ ಅಮೆರಿಕದ ಯಾವುದೇ ಪಡೆಗಳಿಗೆ ಹಾನಿಯಾಗಿಲ್ಲವೆಂದು ಅವರು ತಿಳಿಸಿದ್ದಾರೆ.
‘‘ನಮ್ಮ ತಾಯ್ನಾಡಿಗೆ ಬೆದರಿಕೆಯೊಡ್ಡುವ ಯಾವುದೇ ಮಾದಕದ್ರವ್ಯಜಾಲದ ಉಗ್ರರಿಗೆ ಎಚ್ಚರಿಕೆ ನೀಡುವುದೇನೆಂದರೆ, ನೀವು ಬದುಕುಳಿಯಬೇಕಾದರೆ ಮಾದಕದ್ರವ್ಯ ಕಳ್ಳಸಾಗಣೆ ಮಾಡುವುದನ್ನು ನಿಲ್ಲಿಸಿ. ಮಾರಣಾಂತಿಕವಾದ ಮಾದಕದ್ರವ್ಯಗಳನ್ನು ನೀವು ಕಳ್ಳಸಾಗಣೆ ಮಾಡುತ್ತಲೇ ಇದ್ದಲ್ಲಿ ನಾವು ನಿಮ್ಮನ್ನು ಕೊಲ್ಲುತ್ತೇವೆ’’ ಎಂದು ಹೆಗ್ ಸೆಥ್ ಪೋಸ್ಟ್ ನಲ್ಲಿ ಬರೆದಿದ್ದಾರೆ.







