ಕ್ಷಿಪಣಿ ಅವಶೇಷ ಪತ್ತೆ: ದುಬೈ ವಿಮಾನ ನಿಲ್ದಾಣದಲ್ಲಿ ಎಮಿರೇಟ್ಸ್ ವಿಮಾನ ಸಂಚಾರ ತಾತ್ಕಾಲಿಕ ಸ್ಥಗಿತ, ಬಳಿಕ ಪುನರಾರಂಭ

File Photo: PTI
ದುಬೈ: ಕ್ಷಿಪಣಿಯ ಅವಶೇಷಗಳು ಪತ್ತೆಯಾದ ಹಿನ್ನೆಲೆಯಲ್ಲಿ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರವನ್ನು ಅಲ್ಪಾವಧಿಗೆ ಸ್ಥಗಿತಗೊಳಿಸಿ, ನಂತರ ಭಾಗಶಃ ಪುನರಾರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಮಿರೇಟ್ಸ್ ಸೇರಿದಂತೆ ಹಲವು ವಿಮಾನಗಳ ಹಾರಾಟ ವೇಳಾಪಟ್ಟಿಗೆ ಇದರಿಂದ ವಿಳಂಬ ಉಂಟಾಯಿತು.
ಕ್ಷಿಪಣಿಯನ್ನು ಹೊಡೆದುಹಾಕಿದ ಬಳಿಕ ಅದರ ಅವಶೇಷಗಳು ದುಬೈ ಪ್ರದೇಶದಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ‘ಸಣ್ಣ ಭದ್ರತಾ ಘಟನೆ’ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಸ್ವಲ್ಪ ಸಮಯ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಹಿನ್ನೆಲೆಯಲ್ಲಿ ವಿಮಾನ ಸಂಚಾರವನ್ನು ಹಂತ ಹಂತವಾಗಿ ಪುನರಾರಂಭಿಸಲಾಗಿದೆ.
ಈ ವೇಳೆ ಕೆಲವು ವಿಮಾನಗಳು ದುಬೈ ವಿಮಾನ ನಿಲ್ದಾಣದ ಮೇಲ್ಭಾಗದಲ್ಲಿ ಕೆಲಕಾಲ ಸುಳಿದಾಡಿದವು. ಇದರಿಂದ ಕೆಲವು ವಿಮಾನಗಳ ಹಾರಾಟ ಹಾಗೂ ಲ್ಯಾಂಡಿಂಗ್ ವೇಳಾಪಟ್ಟಿಗೆ ವಿಳಂಬ ಉಂಟಾಯಿತು. ಮಧ್ಯಪ್ರಾಚ್ಯ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ವಿಮಾನಯಾನ ಸಂಸ್ಥೆಗಳು ಎಚ್ಚರಿಕೆಯಿಂದ ಕಾರ್ಯಾಚರಣೆಗಳನ್ನು ಮುಂದುವರಿಸುತ್ತಿವೆ.
ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ಜಂಟಿ ದಾಳಿ ನಡೆಸಿದ ಬಳಿಕ ಇರಾನ್ ಗಲ್ಫ್ ಪ್ರದೇಶದಲ್ಲಿರುವ ಅಮೆರಿಕದ ಸೇನಾ ನೆಲೆಗಳು ಹಾಗೂ ಕಾನ್ಸುಲೇಟ್ ಗಳನ್ನು ಗುರಿಯಾಗಿಸಿಕೊಂಡು ಪ್ರತಿದಾಳಿ ನಡೆಸುತ್ತಿರುವುದರಿಂದ ಮಧ್ಯಪ್ರಾಚ್ಯದಲ್ಲಿ ಆತಂಕ ಹೆಚ್ಚಾಗಿದೆ. ಇದರ ಪರಿಣಾಮವಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಖತರ್, ಸೌದಿ ಅರೇಬಿಯಾ ಮತ್ತು ಬಹರೈನ್ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿ ವಾಸಿಸುವ ಜನರ ಸುರಕ್ಷತೆ ಕಳವಳ ವ್ಯಕ್ತವಾಗಿದೆ.
ಇದರ ನಡುವೆ ಎಮಿರೇಟ್ಸ್ ವಿಮಾನಯಾನ ಸಂಸ್ಥೆ ಪ್ರಕಟಣೆ ನೀಡಿದ್ದು, ದುಬೈ ಸಮಯ ಬೆಳಿಗ್ಗೆ 11.08ಕ್ಕೆ ನೀಡಿದ್ದ ಕಾರ್ಯಾಚರಣೆಯ ಸ್ಥಿತಿ ಕುರಿತ ಹಿಂದಿನ ಪ್ರಕಟಣೆ ಈಗ ಪ್ರಸ್ತುತವಾಗಿಲ್ಲ ಎಂದು ತಿಳಿಸಿದೆ. ಅನಗತ್ಯ ಗೊಂದಲ ತಪ್ಪಿಸಲು ಆ ಪ್ರಕಟಣೆಯನ್ನು ಅಳಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಪ್ರಸ್ತುತ ಎಮಿರೇಟ್ಸ್ ವಿಮಾನಗಳ ಕಾರ್ಯಾಚರಣೆ ಪುನರಾರಂಭಗೊಂಡಿದೆ. ಇಂದು ಮಧ್ಯಾಹ್ನದ ವಿಮಾನಗಳಿಗೆ ಬುಕಿಂಗ್ ದೃಢಪಡಿಸಿರುವ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ತೆರಳಬಹುದು ಎಂದು ಸಂಸ್ಥೆ ತಿಳಿಸಿದೆ. ಸಂಪರ್ಕ ವಿಮಾನಗಳ ಮೂಲಕ ದುಬೈ ಮೂಲಕ ಪ್ರಯಾಣಿಸುವ ಪ್ರಯಾಣಿಕರೂ ತಮ್ಮ ಪ್ರಯಾಣವನ್ನು ಮುಂದುವರಿಸಬಹುದು ಎಂದು ಹೇಳಿದೆ.
ಪರಿಸ್ಥಿತಿಯನ್ನು ಎಮಿರೇಟ್ಸ್ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದು, ಅದಕ್ಕೆ ಅನುಗುಣವಾಗಿ ಕಾರ್ಯಾಚರಣೆಯ ವೇಳಾಪಟ್ಟಿಯಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ. ಪ್ರಯಾಣಿಕರು ಹಾಗೂ ಸಿಬ್ಬಂದಿಯ ಸುರಕ್ಷತೆ ಅತ್ಯುನ್ನತ ಆದ್ಯತೆಯಾಗಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
Our post from 11:08am Dubai time regarding operational status is no longer current, and has been deleted to avoid causing unnecessary confusion.
— Emirates Support (@EmiratesSupport) March 7, 2026
Emirates has resumed operations. Passengers who have confirmed bookings for this afternoon’s flights may proceed to the airport. This… pic.twitter.com/j6niNfBCoI







