UAE ಯುದ್ಧಕ್ಕಿಳಿದರೆ ದುಬೈ, ಅಬುಧಾಬಿಗೆ ಬಾಂಬ್ ದಾಳಿಯ ಅಪಾಯವಿದೆ: ಅಮೆರಿಕದ ಖ್ಯಾತ ಅರ್ಥಶಾಸ್ತ್ರಜ್ಞ ಜೆಫ್ರಿ ಸ್ಯಾಚ್ಸ್ ಕಳವಳ

PC : AFP
ಹೊಸದಿಲ್ಲಿ, ಮಾ. 29: ಇರಾನ್ ಜೊತೆ ನಡೆಯುತ್ತಿರುವ ಯುದ್ಧದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಅಮೆರಿಕ ಮತ್ತು ಇಸ್ರೇಲ್ ಜೊತೆ ಕೈಜೋಡಿಸುವ ಮೂಲಕ ದೊಡ್ಡ ತಪ್ಪು ಮಾಡುತ್ತಿದೆ ಎಂದು ಅಮೆರಿಕದ ಖ್ಯಾತ ಅರ್ಥಶಾಸ್ತ್ರಜ್ಞ ಜೆಫ್ರಿ ಸ್ಯಾಚ್ಸ್ ಹೇಳಿದ್ದಾರೆ.
ಯುಎಇ ಸಂಘರ್ಷಕ್ಕೆ ಪ್ರವೇಶಿಸಲು ನಿರ್ಧರಿಸಿದರೆ ಅದರ ಪ್ರಮುಖ ನಗರಗಳಾದ ದುಬೈ ಮತ್ತು ಅಬುಧಾಬಿ ಬಾಂಬ್ ದಾಳಿಗೆ ಗುರಿಯಾಗುವ ಅಪಾಯವಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
Financial Times ವರದಿಯ ಪ್ರಕಾರ, ಹಾರ್ಮುಝ್ ಜಲಸಂಧಿಯನ್ನು ಮರು ತೆರೆಯುವ ಗುರಿಯನ್ನು ಹೊಂದಿರುವ ಬಹುರಾಷ್ಟ್ರೀಯ ಕಡಲ ಕಾರ್ಯಾಚರಣೆಯಲ್ಲಿ ಭಾಗವಹಿಸಲು ಯುಎಇ ಸಿದ್ಧವಾಗಿರುವುದಾಗಿ ಅಮೆರಿಕ ಸೇರಿ ತನ್ನ ಮಿತ್ರ ರಾಷ್ಟ್ರಗಳಿಗೆ ತಿಳಿಸಿದೆ. ಗಲ್ಫ್ ಪ್ರದೇಶದ ಪ್ರಮುಖ ಜಲಮಾರ್ಗವಾದ ಹಾರ್ಮುಝ್ ಮೂಲಕ ಹಡಗುಗಳ ಸುರಕ್ಷಿತ ಸಾಗಣೆಯನ್ನು ಖಚಿತಪಡಿಸಲು ಒಕ್ಕೂಟ ರಚಿಸುವ ಪ್ರಯತ್ನ ನಡೆಯುತ್ತಿದೆ.
“ಮೂಲತಃ, ಯುಎಇ ಯುದ್ಧಕ್ಕೆ ಇಳಿದರೆ ದುಬೈ ಮತ್ತು ಅಬುಧಾಬಿ ಸ್ಫೋಟಗೊಳ್ಳಬಹುದು. ಇವು ರೆಸಾರ್ಟ್ ಪ್ರದೇಶಗಳು ಮತ್ತು ಪ್ರವಾಸಿ ತಾಣಗಳು. ಇವು ಕ್ಷಿಪಣಿ ರಕ್ಷಣಾ ವಲಯಗಳಲ್ಲ. ಶ್ರೀಮಂತರು ಪಾರ್ಟಿ ಮಾಡಲು ಮತ್ತು ತಮ್ಮ ಹಣ ಹೂಡಲು ಈ ಸ್ಥಳಗಳಿಗೆ ಬರುತ್ತಾರೆ. ಯುದ್ಧ ವಲಯಕ್ಕೆ ಪ್ರವೇಶಿಸುವುದು ದುಬೈನಂತಹ ಸ್ಥಳದ ಮೂಲ ಉದ್ದೇಶವನ್ನೇ ಹಾಳು ಮಾಡುತ್ತದೆ,” ಎಂದು ಸ್ಯಾಚ್ಸ್ ANIಗೆ ನೀಡಿದ ಸಂದರ್ಶನದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಅಬ್ರಹಾಂ ಒಪ್ಪಂದಗಳಿಗೆ ಸಹಿ ಹಾಕಿ ಅಮೆರಿಕದ ಜೊತೆ ಪಾಲುದಾರಿಕೆಗೆ ಹೋಗಿರುವುದು ಯುಎಇ ಸೇರಿದಂತೆ ಗಲ್ಫ್ ರಾಷ್ಟ್ರಗಳ “ಮೂಲಭೂತ ತಪ್ಪು ಲೆಕ್ಕಾಚಾರ” ಎಂದು ಅವರು ಅಭಿಪ್ರಾಯಪಟ್ಟರು. ವಿದೇಶಿ ಭದ್ರತೆಯ ಮೇಲೆ ಅವಲಂಬಿಸುವುದಕ್ಕಿಂತ ಸ್ವರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.
“ಇರಾನ್ ವಿರುದ್ಧದ ಯುದ್ಧಕ್ಕೆ ಸೇರಿ ಅಮೆರಿಕಕ್ಕೆ ಬದ್ಧತೆಯನ್ನು ತೋರಿಸುವಾಗ ಪರಿಸ್ಥಿತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ. ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ” ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, ಅಮೆರಿಕ ತನ್ನ ನೆಲದಲ್ಲಿರುವ ಮಿಲಿಟರಿ ನೆಲೆಗಳನ್ನು ಬಳಸಿಕೊಂಡು ದಾಳಿ ನಡೆಸಲು ಅವಕಾಶ ನೀಡುವ ದೇಶಗಳಿಗೆ ಇರಾನ್ ಪದೇ ಪದೇ ಎಚ್ಚರಿಕೆ ನೀಡಿದೆ. ಇಂತಹ ಸೌಲಭ್ಯಗಳನ್ನು ಒದಗಿಸುವ ಯಾವುದೇ ದೇಶವು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಇರಾನ್ ಸ್ಪಷ್ಟಪಡಿಸಿದೆ.






