Dubai Run 2026 | ಬ್ಯಾರಿ ಸಮುದಾಯದಿಂದ UAEಯ ಬೃಹತ್ ಧ್ವಜ ಪ್ರದರ್ಶನ; ಡ್ರೋನ್ ವೀಡಿಯೋ ಹಂಚಿಕೊಂಡ ಶೇಖ್ ಹಮ್ದಾನ್
ಈ ಬಾರಿ 30 ಮೀಟರ್ ಉದ್ದ, 5 ಮೀಟರ್ ಅಗಲದ ಧ್ವಜ

Photo Credit : X
ದುಬೈ, ನ.22: ದುಬೈ ರನ್ 2026ರಲ್ಲಿ ಕರ್ನಾಟಕದ ಬ್ಯಾರಿ ಸಮುದಾಯವು UAEಯ ಬೃಹತ್ ಧ್ವಜವನ್ನು ಪ್ರದರ್ಶಿಸಿ ಗಮನ ಸೆಳೆದಿದೆ. ರವಿವಾರ ನಡೆದ ಈ ಕಾರ್ಯಕ್ರಮದಲ್ಲಿ 3.10 ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಿದ್ದು, ದುಬೈನ ರಾಜಕುಮಾರ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರು ಹಂಚಿಕೊಂಡ ಡ್ರೋನ್ ವೀಡಿಯೋದಲ್ಲಿ ಬ್ಯಾರಿ ಸಮುದಾಯದ ಧ್ವಜ ಪ್ರದರ್ಶನವೂ ಕಾಣಿಸಿಕೊಂಡಿದೆ.
ಶೇಖ್ ಝಾಯೆದ್ ರಸ್ತೆಯಲ್ಲಿ ಸಾವಿರಾರು ಮಂದಿ ಓಡುತ್ತಿರುವ, ನಡೆಯುತ್ತಿರುವ ದೃಶ್ಯಗಳ ನಡುವೆ ಕುಟುಂಬಗಳು, ವಿವಿಧ ದೇಶಗಳ ಜನರು ಭಾಗವಹಿಸಿದ್ದರು. ಫುರ್ಸಾನ್ ಅಲ್ ಎಮರಾತ್ನ ಜೆಟ್ ವಿಮಾನಗಳು ಆಕಾಶದಲ್ಲಿ ಬಣ್ಣದ ಹೊಗೆಯನ್ನು ಬಿಡುತ್ತಾ ಹಾರಾಟ ನಡೆಸಿದವು. ಗಗನಚುಂಬಿ ಕಟ್ಟಡಗಳ ಮೇಲಿಂದ ಪ್ಯಾರಾಗ್ಲೈಡರ್ ಗಳು ಹಾರಾಡುತ್ತಿದ್ದವು. ಈ ದೃಶ್ಯಾವಳಿಯನ್ನು ಹಂಚಿಕೊಂಡ ಶೇಖ್ ಹಮ್ದಾನ್, “3.10 ಲಕ್ಷಕ್ಕೂ ಅಧಿಕ ಓಟಗಾರರು. ಅದ್ಭುತ ನಗರ. ಮಿತಿಯಿಲ್ಲದ ಉತ್ಸಾಹ! ದುಬೈ ಎಂದಿಗೂ ಪ್ರೇರೇಪಿಸುವುದನ್ನು ನಿಲ್ಲಿಸುವುದಿಲ್ಲ” ಎಂದು ಪೋಸ್ಟ್ ಮಾಡಿದ್ದರು.
ವೀಡಿಯೋದಲ್ಲಿ ಕಾಣಿಸಿಕೊಂಡ ಬೃಹತ್ ಧ್ವಜ ದುಬೈ ಬ್ಯಾರೀಸ್ ಸಂಘಟನೆಯದ್ದು. ಕರ್ನಾಟಕದ ಕರಾವಳಿ ಭಾಗದ ಬ್ಯಾರಿ ಸಮುದಾಯದವರು UAEಯಲ್ಲಿ ಒಗ್ಗೂಡಿ ಈ ಕಾರ್ಯಕ್ರಮ ಆಯೋಜಿಸಿದ್ದರು.
ಕಳೆದ ವರ್ಷ 30 ಮೀಟರ್ ಉದ್ದ ಹಾಗೂ 3 ಮೀಟರ್ ಅಗಲದ UAE ಧ್ವಜವನ್ನು ಪ್ರದರ್ಶಿಸಿದ್ದ ಸಂಘಟನೆಯ ವೀಡಿಯೋ ಕೆಲವೇ ದಿನಗಳಲ್ಲಿ 1 ಕೋಟಿಗೂ ಅಧಿಕ ವೀಕ್ಷಣೆ ಪಡೆದಿತ್ತು ಎಂದು Gulf News ವರದಿ ಮಾಡಿತ್ತು. ಈ ಬಾರಿ UAEಯ 55ನೇ ರಾಷ್ಟ್ರೀಯ ದಿನಾಚರಣೆಯ ಮುನ್ನಾದಿನದ ಹಿನ್ನೆಲೆಯಲ್ಲಿ 30 ಮೀಟರ್ ಉದ್ದ ಹಾಗೂ 5 ಮೀಟರ್ ಅಗಲದ ಇನ್ನೂ ದೊಡ್ಡ ಧ್ವಜವನ್ನು ಪ್ರದರ್ಶಿಸಲಾಯಿತು.
“ಈ ಬಾರಿ 30 ಮೀಟರ್ ಉದ್ದ ಮತ್ತು 5 ಮೀಟರ್ ಅಗಲದ UAE ಧ್ವಜದೊಂದಿಗೆ ದೇಶದ ಮೇಲಿನ ನಮ್ಮ ಪ್ರೀತಿಯನ್ನು ಹೆಮ್ಮೆಯಿಂದ ಸಂಭ್ರಮಿಸಿದ್ದೇವೆ” ಎಂದು ಸಮಿತಿಯ ಸದಸ್ಯ ಇಕ್ರಮ್ ಮೊಹಮ್ಮದ್ ಮುಳೂರು ತಿಳಿಸಿದ್ದಾರೆ.
ಧ್ವಜದೊಂದಿಗೆ ಅರೇಬಿಕ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ‘Proud of UAE’ ಎಂಬ ಎರಡು ಬ್ಯಾನರ್ ಗಳನ್ನು ಹಾಗೂ ದುಬೈ ಬ್ಯಾರೀಸ್ ನ ಲಾಂಛನ ಹೊಂದಿರುವ ಮತ್ತೊಂದು ಬ್ಯಾನರ್ನ್ನೂ ಪ್ರದರ್ಶಿಸಲಾಯಿತು.
ಸುಮಾರು 100 ಸ್ವಯಂಸೇವಕರು ಬೃಹತ್ ಧ್ವಜವನ್ನು ಹೊತ್ತು ಸಾಗಿದರು. ಉದ್ಯಮಿ ಡಾ. ತುಂಬೆ ಮೊಯ್ದೀನ್ ಅವರ ಸಹಕಾರದೊಂದಿಗೆ 2,200 ನೀಲಿ ಟಿ-ಶರ್ಟ್ ಗಳನ್ನು ವಿತರಿಸಲಾಯಿತು. ಅಲ್ಲದೆ, 1,000ಕ್ಕೂ ಅಧಿಕ ಭಾಗವಹಿಸುವವರಿಗೆ ಬೆಳಗಿನ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು.
ಬೃಹತ್ ಧ್ವಜ ಪ್ರದರ್ಶಿಸುವ ಕಲ್ಪನೆಯನ್ನು ಸಂಘಟನೆಯ ನಾಯಕ ಹಿದಾಯತ್ ಅಡ್ಡೂರು ಮುಂದಿಟ್ಟಿದ್ದರು. ದುಬೈಯ 30x30 ಫಿಟ್ನೆಸ್ ಚಾಲೆಂಜ್ ನ ಭಾಗವಾಗಿ ಸುಮಾರು 20 ಪ್ರಮುಖ ಸದಸ್ಯರು ವಾರಕ್ಕೆ ಎರಡು ಬಾರಿ ಒಟ್ಟಾಗಿ ವ್ಯಾಯಾಮ ಮಾಡುತ್ತಿದ್ದರು. ಇದೇ ವೇಳೆ ದುಬೈ ರನ್ ನಲ್ಲಿ ಧ್ವಜ ಪ್ರದರ್ಶಿಸುವ ಕಾರ್ಯಕ್ರಮದ ಸಿದ್ಧತೆಯನ್ನೂ ನಡೆಸಿದ್ದರು.
ದುಬೈ ಬ್ಯಾರೀಸ್ ನ ವಾಟ್ಸ್ಆ್ಯಪ್ ಸಮುದಾಯದಲ್ಲಿ ಸುಮಾರು 10,000 ಸದಸ್ಯರಿದ್ದು, ಈ ಕಾರ್ಯಕ್ರಮಕ್ಕೆ ಬ್ಯಾರಿ ಸಮುದಾಯದ ಸುಮಾರು 3,000 ಮಂದಿ ನೋಂದಾಯಿಸಿಕೊಂಡಿದ್ದರು. ಬಹುತೇಕರು ಅಲ್ ಗರ್ಹೂದ್ ಮೆಟ್ರೊ ನಿಲ್ದಾಣದ ಬಳಿ ಸೇರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಲ್ಲಿ 9 ತಿಂಗಳ ಅಮೀಝಾ ತನ್ಝಾ ಅತ್ಯಂತ ಕಿರಿಯವರು. 70 ವರ್ಷದ ಮೊನಾಕಾ ಬೋಳಾರ್ ಅವರು ಭಾಗವಹಿಸಿದ್ದವರಲ್ಲಿ ಅತಿ ಹಿರಿಯರು. ಕಾರ್ಯಕ್ರಮಕ್ಕೂ ಮುನ್ನ ಸಮುದಾಯದ ಸದಸ್ಯರು ಮೆಟ್ರೊ ನಿಲ್ದಾಣದ ಹೊರಭಾಗದಲ್ಲಿ ಬೆಳಗ್ಗಿನ ನಮಾಝ್ ನೆರವೇರಿಸಿದ್ದರು.
ಈ ಕಾರ್ಯಕ್ರಮ ಕೇವಲ ಓಟ ಅಥವಾ ನಡಿಗೆಯಾಗಿರದೆ, ಒಗ್ಗಟ್ಟು, ಆರೋಗ್ಯದ ಅರಿವು, UAEಗೆ ಕೃತಜ್ಞತೆ ಸಲ್ಲಿಸುವುದು ಹಾಗೂ ದೇಶದ ಮೇಲಿನ ಗೌರವ ಮತ್ತು ಹೆಮ್ಮೆಯನ್ನು ವ್ಯಕ್ತಪಡಿಸುವ ಸಂದರ್ಭವಾಗಿತ್ತು ಎಂದು ಸಂಘಟಕರು ತಿಳಿಸಿದ್ದಾರೆ.
ಕಾರ್ಯಕ್ರಮದ ಪ್ರಮುಖ ಸಮಿತಿಗಳ ಸದಸ್ಯರಾದ ಸಲೀಮ್ ಮೂಡಬಿದ್ರಿ, ನವಾಝ್ ಕೊಳತ್ತಮಜಲ್, ಅಬ್ದುಲ್ ಸಮದ್ ಬಿರಾಲಿ, ಶಮ್ಸುದ್ದೀನ್ ಪಿಲಿಗೋಡ್, ಮೊಹಮ್ಮದ್ ಆಶಿಕ್, ನಝೀರ್ ವಾಮಂಜೂರು, ಯೂಸುಫ್ ಭಟ್ಕಳ್ ಹಾಗೂ ಅಶ್ರಫ್ ಶಾ ಮಾಂತೂರು, ಮುಸ್ತಾಕ್ ಖಾದ್ರಿ, ನವಾಝ್ ಬಜಾರ್, ಉಮರ್ ಫಾರೂಕ್, ಫಾರೂಕ್ ಮೂರ್ಜೆ, ಅದ್ದು ಹೊನ್ನಾವರ, ನವಾಝ್ ಕೋಟೆಕಾರ್, ಅಕ್ಬರ್, ಅಹ್ಮದ್ ಬಾವ, ಫಿರೋಝ್, ಅಯೂಬ್ ಸಾಗರ್, ಮೂಸಾ ಪೆರುವಾಯಿ, ಸಲೀಮ್ ಸುಫಿಕಾನ್ ಹಾಗೂ ಸನ್ನನ್ ಸಿದ್ದಿಕ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಸಹಕಾರ ನೀಡಿದ್ದರು.
ಸೌಜನ್ಯ: gulfnews.com






