ವಲಸಿಗರ ಕುರಿತು ಭಿನ್ನಾಭಿಪ್ರಾಯದ ನಂತರ ನೆದರ್ಲ್ಯಾಂಡ್ನ ಮೈತ್ರಿ ಸರ್ಕಾರ ಪತನ

ನೆದರ್ಲ್ಯಾಂಡ್ ಪ್ರಧಾನಿ ಮಾರ್ಕ್ ರುಟ್ಟೆ (Twitter /@MinPres)
ಹೇಗ್: ನೆದರ್ಲ್ಯಾಂಡ್ ಪ್ರಧಾನಿ ಮಾರ್ಕ್ ರುಟ್ಟೆ ಅವರ ನೇತೃತ್ವದ ಮೈತ್ರಿ ಸರ್ಕಾರ ಶುಕ್ರವಾರ ಪತನಗೊಂಡಿದೆ. ದೇಶದಲ್ಲಿ ವಲಸಿಗರ ಸಮಸ್ಯೆಯನ್ನು ಹೇಗೆ ನಿಭಾಯಿಸುವುದು ಎಂಬ ವಿಚಾರ ಕುರಿತಂತೆ ವ್ಯಾಪಕ ಭಿನ್ನಾಭಿಪ್ರಾಯಗಳ ನಡುವೆ ಸರ್ಕಾರ ಪತನಗೊಂಡಿದೆ. ದೇಶದಲ್ಲಿ ನವೆಂಬರ್ ತಿಂಗಳಿನಲ್ಲಿ ಚುನಾವಣೆ ನಡೆಯುವ ನಿರೀಕ್ಷೆಯಿದೆ.
ಐವತ್ತಾರು ವರ್ಷದ ಮಾರ್ಕ್ ಅವರು ನೆದರ್ಲ್ಯಾಂಡ್ನ ಅತ್ಯಂತ ದೀರ್ಘಾವಧಿ ಸೇವೆ ಸಲ್ಲಿಸಿದ ಪ್ರಧಾನಿಯಾಗಿದ್ದರು. ಸಮಸ್ಯೆ ಹೇಗೆ ನಿಭಾಯಿಸಬೇಕೆಂಬ ಕುರಿತಂತೆ ನಾಲ್ಕು ಪಕ್ಷಗಳ ನಡುವೆ ಒಮ್ಮತ ಮೂಡಲು ವಿಫಲವಾದ ನಂತರ ಸರ್ಕಾರ ಪತನಗೊಂಡಿದೆ.
ದೇಶದಲ್ಲಿ ಆಶ್ರಯ ಪಡೆದ ವಲಸಿಗರೊಂದಿಗೆ ಅವರ ಕುಟುಂಬಗಳನ್ನು ಒಗ್ಗೂಡಿಸುವ ಕುರಿತಂತೆ ನಿರ್ಬಂಧಗಳನ್ನು ಇನ್ನಷ್ಟು ಕಠಿಣಗೊಳಿಸಲು ಮಾರ್ಕ್ ಬಯಸಿದ್ದರು. ದೇಶದಲ್ಲಿರುವ ವಲಸಿಗ ಕೇಂದ್ರಗಳು ತುಂಬಿತುಳುಕುತ್ತಿರುವ ಹಿನ್ನೆಲೆಯಲ್ಲಿ ಅವರು ಈ ಕ್ರಮಕ್ಕೆ ಮುಂದಾಗಿದ್ದರು.
ಮಾರ್ಕ್ ಅವರು ರಾಜೀನಾಮೆ ನೀಡಿದ್ದು ಇಂದು ದೊರೆ ವಿಲ್ಲೆಮ್ ಅಲೆಕ್ಸಾಂಡರ್ ಅವರನ್ನು ಭೇಟಿಯಾಗಲಿದ್ದಾರೆ.
2010ರಲ್ಲಿ ಮಾರ್ಕ್ ಅವರು ದೇಶದ ಪ್ರಧಾನಿಯಾದ ನಂತರ ಇದು ನಾಲ್ಕನೇ ಮೈತ್ರಿ ಸರ್ಕಾರವಾಗಿದೆ. ಜನವರಿ 2022 ರಲ್ಲಿ ದಾಖಲೆ 271 ದಿನಗಳ ಮಾತುಕತೆ ನಂತರ ಈ ಮೈತ್ರಿ ಸರ್ಕಾರ ಅಧಿಕಾರ ವಹಿಸಿಕೊಂಡಿದ್ದರೂ ಹಲವಾರು ವಿಷಯಗಳ ಕುರಿತಂತೆ ಮೈತ್ರಿ ಪಕ್ಷಗಳ ನಡುವೆ ಭಿನ್ನಾಭಿಪ್ರಾಯಗಳಿದ್ದವು.







