ಲಾಸ್ ಏಂಜಲೀಸ್ ನಲ್ಲಿ ಭೂಕಂಪ | ಲ್ಯಾಂಡಿಂಗ್ ರದ್ದು, ವಿಮಾನ ನಿಲ್ದಾಣದ ಕಿಟಕಿ ಪುಡಿ
5.0 ತೀವ್ರತೆಯ ಕಂಪನಕ್ಕೆ ಟರ್ಮಿನಲ್ ನ ಮೇಲ್ಛಾವಣಿ ಫಲಕ ಕುಸಿತ

Photo credit : ndtv
ಲಾಸ್ ಏಂಜಲೀಸ್: ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ದಕ್ಷಿಣ ಕರಾವಳಿಯಲ್ಲಿ ಶನಿವಾರ ಸಂಭವಿಸಿದ 5.0 ತೀವ್ರತೆಯ ಭೂಕಂಪ ಲಾಸ್ ಏಂಜಲೀಸ್ ಪ್ರದೇಶದಲ್ಲಿ ಆತಂಕ ಮೂಡಿಸಿದೆ. ಭೂಕಂಪದ ಪರಿಣಾಮ ವಿಮಾನ ನಿಲ್ದಾಣದ ಕಿಟಕಿಗಳು ಒಡೆದುಹೋಗಿದ್ದು, ಲ್ಯಾಂಡಿಂಗ್ ಗೆ ಸಿದ್ಧವಾಗಿದ್ದ ಡೆಲ್ಟಾ ಏರ್ಲೈನ್ಸ್ ವಿಮಾನವೊಂದರ ಲ್ಯಾಂಡಿಂಗ್ ಪ್ರಕ್ರಿಯೆಯನ್ನು ರನ್ ವೇ ಗೆ ಹಾನಿಯಾಗಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ.
ಯುಎಸ್ ಜಿಯೋಲಾಜಿಕಲ್ ಸರ್ವೇ (US Geological Survey) ಪ್ರಕಾರ, ಲಾಸ್ ಏಂಜಲೀಸ್ ಸಮೀಪದ ಮ್ಯಾನ್ಹ್ಯಾಟನ್ ಬೀಚ್ ಕರಾವಳಿಯಲ್ಲಿ ಭೂಕಂಪದ ಕೇಂದ್ರಬಿಂದು ಇತ್ತು. ಆರಂಭಿಕ ಭೂಕಂಪದ ಬಳಿಕವೂ ಹಲವು ಬಾರಿ ಭೂಮಿ ಕಂಪಿಸಿದೆ. ಇಂತಹ ಕಂಪನಗಳನ್ನು ನಂತರದ ಕಂಪನಗಳು (Aftershocks) ಎಂದು ಕರೆಯಲಾಗುತ್ತದೆ.
ಭೂಕಂಪದ ತೀವ್ರತೆಗೆ ಕಾರುಗಳ ಅಲಾರಂಗಳು ಮೊಳಗಿದ್ದು, ವಿಮಾನ ನಿಲ್ದಾಣದ ಕಿಟಕಿಗಳು ಒಡೆದುಹೋಗಿವೆ. ತೈಲ ಸಂಸ್ಕರಣಾಗಾರವೊಂದರಲ್ಲಿ ಸ್ವಯಂಚಾಲಿತ ಸುರಕ್ಷತಾ ವ್ಯವಸ್ಥೆ ಕಾರ್ಯಾರಂಭಿಸಿದ್ದರಿಂದ ಹೊಗೆ ಮತ್ತು ಜ್ವಾಲೆಗಳು ಕಾಣಿಸಿಕೊಂಡಿವೆ. ಆದರೆ, ಯಾವುದೇ ಗಾಯಗಳು ಅಥವಾ ದೊಡ್ಡ ಪ್ರಮಾಣದ ಹಾನಿ ಸಂಭವಿಸಿರುವ ಬಗ್ಗೆ ತಕ್ಷಣದ ವರದಿಗಳು ಬಂದಿಲ್ಲ.
ಕ್ಯಾಲಿಫೋರ್ನಿಯಾ ರಾಜ್ಯಪಾಲರ ತುರ್ತು ಸೇವೆಗಳ ಕಚೇರಿಯು ಫೇಸ್ಬುಕ್ ನಲ್ಲಿ ಪ್ರತಿಕ್ರಿಯಿಸಿ, ಭೂಕಂಪದ ಪರಿಣಾಮಗಳನ್ನು ಅಂದಾಜಿಸಲು ಸ್ಥಳೀಯ ಅಧಿಕಾರಿಗಳೊಂದಿಗೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿಸಿದೆ. ಭೂಕಂಪಗಳನ್ನು ಮುಂಚಿತವಾಗಿ ಊಹಿಸಲು ಸಾಧ್ಯವಿಲ್ಲ. ಹೀಗಾಗಿ, ನಂತರದ ಕಂಪನಗಳನ್ನು ಎದುರಿಸಲು ಸಿದ್ಧರಾಗಿರುವಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.
ಭೂಕಂಪ ಸಂಭವಿಸಿದಾಗ ಲಾಸ್ ಏಂಜಲೀಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಮೀಪಿಸುತ್ತಿದ್ದ ಡೆಲ್ಟಾ ಏರ್ಲೈನ್ಸ್ ವಿಮಾನವೊಂದು ಇಳಿಯಲು ಸಿದ್ಧವಾಗಿತ್ತು. ವಿಮಾನ ರನ್ವೇಗೆ ಇಳಿಯುವ ಹಂತದಲ್ಲಿದ್ದಾಗಲೇ ಭೂಮಿ ಕಂಪಿಸಿದೆ. ಇದರಿಂದ ರನ್ ವೇ ಯಲ್ಲಿ ಬಿರುಕು ಉಂಟಾಗಿರಬಹುದು ಎಂಬ ಆತಂಕ ವ್ಯಕ್ತವಾಯಿತು. ಹೀಗಾಗಿ, ವಿಮಾನವನ್ನು ಇಳಿಸದೆ ಮತ್ತೆ ಮೇಲಕ್ಕೆ ಹಾರಿಸಲಾಯಿತು.
ಲಾಸ್ ಏಂಜಲೀಸ್ ಮೇಯರ್ ಕರೆನ್ ಬಾಸ್ ಅವರು ಫಾಕ್ಸ್ ನ್ಯೂಸ್ ಗೆ ಪ್ರತಿಕ್ರಿಯಿಸಿ, ವಿಮಾನವನ್ನು ಇಳಿಸದಿರುವುದು ಸರಿಯಾದ ನಿರ್ಧಾರವಾಗಿತ್ತು ಎಂದರು. ರನ್ ವೇ ಯನ್ನು ಪರಿಶೀಲಿಸಿದ ಬಳಿಕವಷ್ಟೇ ಅದರಲ್ಲಿ ಬಿರುಕು ಉಂಟಾಗಿದೆಯೇ ಎಂಬುದು ತಿಳಿಯಲಿದೆ ಎಂದು ಹೇಳಿದರು.
ನಂತರ ಸಂಭವಿಸಿದ ಮತ್ತೊಂದು ಕಂಪನದಿಂದ ವಿಮಾನ ನಿಲ್ದಾಣದ ಟರ್ಮಿನಲ್ ನ ಮೇಲ್ಛಾವಣಿಗೆ ಅಳವಡಿಸಿದ್ದ ಫಲಕವೊಂದು ಕೆಳಕ್ಕೆ ಬಿದ್ದಿದೆ. ಕೆಲವು ಕಿಟಕಿಗಳೂ ಒಡೆದಿವೆ. ಇದರಿಂದ ಟರ್ಮಿನಲ್ 7ರಲ್ಲಿ ಪ್ರಯಾಣಿಕರು ನಡೆದುಹೋಗುವ ಮಾರ್ಗದ ಒಂದು ಭಾಗವನ್ನು ಮುಚ್ಚಲಾಗಿದೆ.
ಮೇರಿಲ್ಯಾಂಡ್ ನ ವಕೀಲರಾದ ಕೆನ್ನಾ ಕ್ರೇಮರ್ ಅವರು ವಾಷಿಂಗ್ಟನ್ ಗೆ ತೆರಳುವ ವಿಮಾನಕ್ಕಾಗಿ ಕಾಯುತ್ತಿದ್ದಾಗ ಭೂಕಂಪ ಸಂಭವಿಸಿದೆ. ಈ ವೇಳೆ ವಿಮಾನ ನಿಲ್ದಾಣದಲ್ಲಿದ್ದ ಜನರು ಭಯಭೀತರಾಗಿದ್ದರು. ಓರ್ವ ಮಹಿಳೆ ಕಿರುಚಿಕೊಂಡರು. ಆದರೆ, ಸ್ವಲ್ಪ ಸಮಯದ ಬಳಿಕ ಎಲ್ಲರೂ ಸಮಾಧಾನಗೊಂಡರು ಎಂದು ಅವರು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ವಿಮಾನ ನಿಲ್ದಾಣದಲ್ಲಿನ ಪರಿಸ್ಥಿತಿಯ ಕುರಿತು ಕ್ಯಾಲಿಫೋರ್ನಿಯಾ ರಾಜ್ಯಪಾಲರ ಕಚೇರಿಯ ಸಾಮಾಜಿಕ ಮಾಧ್ಯಮದಲ್ಲಿನ ಪೋಸ್ಟ್ ಗೆ ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದು, ಕೆಲವರು ಏನೂ ಆಗಿಲ್ಲವೆಂಬಂತೆ ವರ್ತಿಸಿದರೆ, ಇನ್ನು ಕೆಲವರು ಭಯಭೀತರಾಗಿದ್ದರು. ಮತ್ತೆ ಕೆಲವರು ನೆಲದ ಮೇಲೆ ಮಲಗಿದ್ದರು ಎಂದು ತಿಳಿಸಿದ್ದಾರೆ.
ಆರಂಭಿಕ ಭೂಕಂಪದ ಬಳಿಕ ದಕ್ಷಿಣ ಕ್ಯಾಲಿಫೋರ್ನಿಯಾದ ಚೆವ್ರಾನ್ ತೈಲ ಸಂಸ್ಕರಣಾಗಾರದಲ್ಲಿ ಸ್ವಯಂಚಾಲಿತ ಸುರಕ್ಷತಾ ವ್ಯವಸ್ಥೆ ಕಾರ್ಯಾರಂಭಿಸಿತು. ಸಂಸ್ಕರಣಾಗಾರದ ಪೈಪ್ ಲೈನ್ ಗಳು ಮತ್ತು ಉಪಕರಣಗಳಲ್ಲಿ ಒತ್ತಡ ಹೆಚ್ಚಾಗಿ ಅಪಾಯ ಸಂಭವಿಸುವುದನ್ನು ತಡೆಯಲು ಹೆಚ್ಚುವರಿ ಅನಿಲವನ್ನು ಹೊರಬಿಡಲಾಯಿತು. ಇದರಿಂದ ದೊಡ್ಡ ಜ್ವಾಲೆಗಳು ಮತ್ತು ಹೊಗೆ ಕಾಣಿಸಿಕೊಂಡವು. ಈ ಪ್ರಕ್ರಿಯೆಯಿಂದ ಸ್ಥಳೀಯರಿಗೆ ಯಾವುದೇ ಅಪಾಯ ಉಂಟಾಗಿಲ್ಲ ಎಂದು ಕಂಪೆನಿ ತಿಳಿಸಿದೆ.
ಲಾಸ್ ಏಂಜಲೀಸ್ ಅಗ್ನಿಶಾಮಕ ಇಲಾಖೆ (LAFD) ಭೂಕಂಪದ ಬಳಿಕ ತುರ್ತು ಪರಿಶೀಲನೆ ನಡೆಸಿತು. 100ಕ್ಕೂ ಹೆಚ್ಚು ಅಗ್ನಿಶಾಮಕ ಕೇಂದ್ರಗಳ ಸಿಬ್ಬಂದಿ ಭೂಮಿ, ವಾಯು ಮತ್ತು ಸಮುದ್ರ ಮಾರ್ಗಗಳ ಮೂಲಕ ಪ್ರಮುಖ ಕಟ್ಟಡಗಳು ಹಾಗೂ ಮೂಲಸೌಕರ್ಯಗಳ ಸ್ಥಿತಿಗತಿಯನ್ನು ಪರಿಶೀಲಿಸಿದರು. ಲಾಸ್ ಏಂಜಲೀಸ್ ನಗರದ ವ್ಯಾಪ್ತಿಯಲ್ಲಿ ಯಾವುದೇ ಗಮನಾರ್ಹ ಹಾನಿ ಅಥವಾ ಗಾಯಗಳು ವರದಿಯಾಗಿಲ್ಲ ಎಂದು ಪರಿಶೀಲನೆ ಪೂರ್ಣಗೊಂಡ ಬಳಿಕ ಇಲಾಖೆ ತನ್ನ ವೆಬ್ಸೈಟ್ ನಲ್ಲಿ ತಿಳಿಸಿದೆ.
ಕ್ಯಾಲಿಫೋರ್ನಿಯಾದ ಹರ್ಮೋಸಾ ಬೀಚ್ ನ ಅಂಗಡಿಯೊಂದರಲ್ಲಿ ಭೂಕಂಪದ ಪರಿಣಾಮ ವೈನ್ ಬಾಟಲಿಗಳು ನೆಲದ ಮೇಲೆ ಬಿದ್ದು ಒಡೆದುಹೋಗಿರುವ ದೃಶ್ಯಗಳೂ ವರದಿಯಾಗಿವೆ.
ಕ್ಯಾಲಿಫೋರ್ನಿಯಾದಲ್ಲಿ ಭೂಕಂಪಗಳು ಸಾಮಾನ್ಯವಾದರೂ, ಶನಿವಾರದ ಆರಂಭಿಕ ಕಂಪನವು ಲಾಸ್ ಏಂಜಲೀಸ್ ಪ್ರದೇಶದಲ್ಲಿ ತಾವು ಅನುಭವಿಸಿದ ದೊಡ್ಡ ಕಂಪನಗಳಲ್ಲಿ ಒಂದಾಗಿದೆ ಎಂದು ಕ್ಯಾಲ್ಟೆಕ್ ನ ಭೂಕಂಪಶಾಸ್ತ್ರಜ್ಞೆ ಹಾಗೂ ಸಂಶೋಧನಾ ಸಹವರ್ತಿ ಲೂಸಿ ಜೋನ್ಸ್ ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಭೂಮಿಯ ಹೊರಮೈ ಹಲವು ಬೃಹತ್ ಶಿಲಾಫಲಕಗಳಿಂದ ಕೂಡಿದೆ. ಇವು ನಿರಂತರವಾಗಿ ಚಲಿಸುತ್ತಿರುತ್ತವೆ. ಅಮೆರಿಕದ ಪಶ್ಚಿಮ ಕರಾವಳಿಯಲ್ಲಿ ಇಂತಹ ಹಲವು ಫಲಕಗಳು ಒಂದಕ್ಕೊಂದು ಸೇರುವುದರಿಂದ ಅಲ್ಲಿ ಆಗಾಗ ಭೂಕಂಪಗಳು ಸಂಭವಿಸುತ್ತವೆ. ಆದರೆ, ಹೆಚ್ಚಿನ ಕಂಪನಗಳು ಸಣ್ಣ ಪ್ರಮಾಣದಲ್ಲಿರುವುದರಿಂದ ಜನರಿಗೆ ಅವುಗಳ ಅನುಭವವಾಗುವುದಿಲ್ಲ. ಲಾಸ್ ಏಂಜಲೀಸ್ ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ಒಳಗೊಂಡ ಗ್ರೇಟರ್ ಲಾಸ್ ಏಂಜಲೀಸ್ ನಲ್ಲಿ 1.8 ಕೋಟಿಗೂ ಅಧಿಕ ಜನರು ವಾಸಿಸುತ್ತಿದ್ದಾರೆ.
ಈ ಪ್ರದೇಶವು ಈ ಹಿಂದೆ ಹಲವು ಪ್ರಬಲ ಭೂಕಂಪಗಳಿಗೂ ಸಾಕ್ಷಿಯಾಗಿದೆ. 1994ರಲ್ಲಿ ಲಾಸ್ ಏಂಜಲೀಸ್ ನ ನಾರ್ತ್ರಿಡ್ಜ್ ಪ್ರದೇಶದಲ್ಲಿ ಸಂಭವಿಸಿದ ಭೂಕಂಪದಿಂದ ಹಲವು ಮಂದಿ ಮೃತಪಟ್ಟಿದ್ದರು. ಸಾವಿರಾರು ಜನರು ಗಾಯಗೊಂಡಿದ್ದರು. ಮನೆಗಳು ಮತ್ತು ಪ್ರಮುಖ ಮೂಲಸೌಕರ್ಯಗಳಿಗೆ ಶತಕೋಟಿ ಡಾಲರ್ ಮೌಲ್ಯದ ಹಾನಿಯಾಗಿತ್ತು.
1906ರಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಸಂಭವಿಸಿದ ಭೂಕಂಪದಿಂದಲೂ ಭಾರಿ ಅನಾಹುತ ಉಂಟಾಗಿತ್ತು. ಈ ದುರಂತದಲ್ಲಿ 3,000ಕ್ಕೂ ಅಧಿಕ ಮಂದಿ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಭೂಕಂಪದ ಬಳಿಕ ಸಂಭವಿಸಿದ ಬೆಂಕಿ ಅವಘಡಗಳೂ ಹಲವು ಸಾವುಗಳಿಗೆ ಕಾರಣವಾಗಿದ್ದವು.






