ನೈಜರ್ ಗೆ ಸೇನೆ ರವಾನಿಸಲು ‘ಇಕೊವಸ್' ಸಿದ್ಧತೆ: ಅಧ್ಯಕ್ಷರ ಹತ್ಯೆ ಬೆದರಿಕೆ ಒಡ್ಡಿದ ಸೇನಾಡಳಿತ

Photo : twitter/ecowas_cedeao
ನಿಯಾಮೆ : ನೈಜರ್ ದೇಶದಲ್ಲಿ ಪ್ರಜಾಪ್ರಭುತ್ವದ ಮರುಸ್ಥಾಪನೆಗೆ ಪಣತೊಟ್ಟಿರುವ ಪಶ್ಚಿಮ ಆಫ್ರಿಕಾದ ಪ್ರಾದೇಶಿಕ ಸಂಘಟನೆ `ಇಕೊವಸ್', ಪಡೆಗಳನ್ನು ಸನ್ನದ್ಧಗೊಳಿಸಿರುವಂತೆಯೇ, ದೇಶದ ಆಂತರಿಕ ವ್ಯವಹಾರದಲ್ಲಿ ಹಸ್ತಕ್ಷೇಪ ನಡೆಸಿದರೆ ಬಂಧನದಲ್ಲಿರುವ ಅಧ್ಯಕ್ಷ ಮಝೌಮ್ ಹತ್ಯೆ ಮಾಡುವುದಾಗಿ ಸೇನಾಡಳಿತ ಎಚ್ಚರಿಸಿರುವ ಹಿನ್ನೆಲೆಯಲ್ಲಿ ನೈಜರ್ ನಲ್ಲಿ ಉದ್ವಿಗ್ನತೆ ಹೆಚ್ಚಿದೆ.
ಪದಚ್ಯುತ ಅಧ್ಯಕ್ಷ ಮುಹಮ್ಮದ್ ಬಜೌಮ್ ಅವರನ್ನು ಮರುಸ್ಥಾಪಿಸಲು ನೀಡಿರುವ ಗಡುವು ಮುಗಿದಿರುವ ಹಿನ್ನೆಲೆಯಲ್ಲಿ ನೈಜರ್ನಲ್ಲಿ ಸಂವಿಧಾನದ ಮರುಸ್ಥಾಪನೆಗೆ ಮೀಸಲು ಪಡೆಯನ್ನು ನಿಯೋಜಿಸಲಾಗುವುದು ಎಂದು ಪಶ್ಚಿಮ ಆಫ್ರಿಕನ್ ರಾಜ್ಯಗಳ ಆರ್ಥಿಕ ಸಂಘಟನೆ(ಇಕೊವಸ್) ಹೇಳಿದೆ.15 ಸದಸ್ಯರ `ಇಕೊವಸ್'ನ ಮೀಸಲು ಪಡೆ ಎಲ್ಲಿ, ಯಾವಾಗ ನಿಯೋಜನೆಗೊಳ್ಳಲಿದೆ ಮತ್ತು ಈ ಪಡೆಯ ಬಲವೆಷ್ಟು ಎಂಬ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಆದರೆ ನೈಜೀರಿಯಾ ನೇತೃತ್ವದಲ್ಲಿ 5,000 ಯೋಧರ ತುಕಡಿ ಕೆಲ ವಾರಗಳಲ್ಲೇ ಸಿದ್ಧಗೊಳ್ಳಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಮಧ್ಯೆ, ನೈಜೀರಿಯಾ ಮತ್ತು ಬೆನಿನ್ ಜತೆ ತಮ್ಮ ದೇಶವೂ ಮೀಸಲು ಪಡೆಗೆ ಯೋಧರನ್ನು ರವಾನಿಸಲಿದೆ ಎಂದು ಐವರಿಕೋಸ್ಟ್ ಅಧ್ಯಕ್ಷ ಅಲಾಸ್ಸೆನ್ ಖಟಾರಾ ಹೇಳಿದ್ದಾರೆ. `ನಾವು ಬಝೌಮ್ರ ಮರುಸ್ಥಾಪನೆಗೆ ಬದ್ಧವಾಗಿದ್ದೇವೆ. ಈ ವಲಯದಲ್ಲಿ ಶಾಂತಿ ಮತ್ತು ಸ್ಥಿರತೆ ನಮ್ಮ ಉದ್ದೇಶವಾಗಿದೆ' ಎಂದವರು ಹೇಳಿದ್ದಾರೆ.
`ಇಕೊವಸ್'ನ ನಿರ್ಧಾರಗಳನ್ನು ಬಲವಾಗಿ ಬೆಂಬಲಿಸುವುದಾಗಿ ಆಫ್ರಿಕನ್ ಒಕ್ಕೂಟ ಹೇಳಿದ್ದು, ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಉಲ್ಬಣಿಸದಂತೆ ಸೇನಾಡಳಿತಕ್ಕೆ ಕರೆ ನೀಡಿದೆ. ನೈಜರ್ನಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪನೆಯ ಯಾವುದೇ ನಿರ್ಧಾರಗಳಿಗೆ ತನ್ನ ಬೆಂಬಲವಿದೆ ಎಂದು ಫ್ರಾನ್ಸ್ ಹೇಳಿದೆ. ಎರಡು ವಾರಗಳ ಹಿಂದೆ ಬಝೌಮ್ರನ್ನು ಪದಚ್ಯುತಗೊಳಿಸಿದ ಸೇನೆಯ ತುಕಡಿಯು ದೇಶದ ಮೇಲಿನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿದ್ದು, ಯಾವುದೇ ವಿದೇಶದ ನಿಯೋಗದ ಜತೆ ಸಂಧಾನ ಮಾತುಕತೆಯನ್ನು ತಿರಸ್ಕರಿಸಿದೆ ಮತ್ತು ಅಧ್ಯಕ್ಷ ಬಝೌಮ್ರನ್ನು ಬಿಡುಗಡೆಗೊಳಿಸಲು ನಿರಾಕರಿಸಿದೆ.
ಈ ಮಧ್ಯೆ, ಸೇನೆ ಮತ್ತು ಇಕೊವಸ್ನ ನಡುವೆ ಯುದ್ಧ ನಡೆಯುವ ಸಾಧ್ಯತೆ ಹೆಚ್ಚಿರುವಂತೆಯೇ, ಇಕೊವಸ್ ಜಾರಿಗೊಳಿಸಿರುವ ಕಠಿಣ ಆರ್ಥಿಕ ಮತ್ತು ಪ್ರಯಾಣ ನಿರ್ಬಂಧದ ಪ್ರಹಾರ ನೈಜರ್ ಜನತೆಗೆ ಗಾಯದ ಮೇಲೆ ಬರೆ ಇಟ್ಟಂತಾಗಿದೆ. ಕ್ಷಿಪ್ರ ದಂಗೆಗೂ ಮುನ್ನ, ನೈಜರ್ನ 4 ದಶಲಕ್ಷ ಜನತೆ ಮಾನವೀಯ ನೆರವನ್ನು ಅವಲಂಬಿಸಿದ್ದರು ಮತ್ತು ಈ ಪರಿಸ್ಥಿತಿ ಈಗ ಮತ್ತಷ್ಟು ಹದಗೆಟ್ಟಿದೆ. ಪರಿಸ್ಥಿತಿ ಆತಂಕಕಾರಿಯಾಗಿದೆ' ಎಂದು ವಿಶ್ವಸಂಸ್ಥೆಯ ಮಾನವೀಯ ನೆರವಿನ ಸ್ಥಾನೀಯ ಸಮನ್ವಯಾಧಿಕಾರಿ ಲೂಯಿಸ್ ಆಬಿನ್ ಹೇಳಿದ್ದಾರೆ.
ಬಝೌಮ್ ಹತ್ಯೆ ಬೆದರಿಕೆ
ಒಂದು ವೇಳೆ ನೆರೆದೇಶಗಳು ತಮ್ಮ `ಆಡಳಿತವನ್ನು' ಸ್ಥಾಪಿಸಲು ಮಿಲಿಟರಿ ಹಸ್ತಕ್ಷೇಪಕ್ಕೆ ಪ್ರಯತ್ನಿಸಿದರೆ ತಮ್ಮ ವಶದಲ್ಲಿರುವ ಅಧ್ಯಕ್ಷ ಬಝೌಮ್ರನ್ನು ಹತ್ಯೆ ಮಾಡುವುದಾಗಿ ನೈಜರ್ಗೆ ಭೇಟಿ ನೀಡಿದ ಅಮೆರಿಕದ ಉನ್ನತ ರಾಜತಾಂತ್ರಿಕ ಅಧಿಕಾರಿಗೆ ಸೇನಾಡಳಿತ ಎಚ್ವರಿಕೆ ನೀಡಿದೆ.
ಈ ಮಧ್ಯೆ, ನೈಜರ್ನ ಆಂತರಿಕ ವ್ಯವಹಾರದಲ್ಲಿ `ಇಕೊವಸ್' ಮಧ್ಯಪ್ರವೇಶಿಸುವುದನ್ನು ರಾಜಧಾನಿ ನಿಯಾಮೆಯ ಜನತೆ ವಿರೋಧಿಸುತ್ತಿದ್ದಾರೆ ಎಂದು ವರದಿಯಾಗಿದೆ. `ನೈಜರ್ನಲ್ಲಿನ ವಾಸ್ತವಿಕ ಪರಿಸ್ಥಿತಿಯ ಬಗ್ಗೆ ಇಕೊವಸ್ಗೆ ಅರಿವಿಲ್ಲ. ನೈಜರ್ನಲ್ಲಿ ಕ್ಷಿಪ್ರದಂಗೆಗೆ ಕಾರಣವೇನು ಎಂಬುದು ಅವರಿಗೆ ತಿಳಿದಿಲ್ಲ. ಅಧ್ಯಕ್ಷ ಬಝೌಮ್ ದೇಶದ ಜನತೆಯ ಆಶೋತ್ತರಗಳಿಗೆ ಸ್ಪಂದಿಸುತ್ತಿರಲಿಲ್ಲ' ಎಂದು ಸ್ಥಳೀಯರು ಪ್ರತಿಕ್ರಿಯಿಸಿದ್ದಾರೆ ಎಂದು ವರದಿ ಹೇಳಿದೆ.