ಅಮೆರಿಕ ಪ್ರವಾಸದ ವಿವಾದದ ಬಳಿಕ ಮೊದಲ ಕಾರ್ಯಕ್ರಮ: ಗಾಝಾದ ಪರಿಸ್ಥಿತಿ ‘ಸಮರ್ಥಿಸಲಾಗದು’ ಎಂದ ಎಡ್ ಶೀರನ್

ಎಡ್ ಶೀರನ್ (ಫೈಲ್ ಚಿತ್ರ । Photo: Reuters)
ಹೊಸದಿಲ್ಲಿ: ಅಮೆರಿಕದ ತಮ್ಮ ಸಂಗೀತ ಪ್ರವಾಸವು ಅನಿಶ್ಚಿತತೆಗೆ ಸಿಲುಕಿದ ನಂತರ ನಡೆದ ಮೊದಲ ಕಾರ್ಯಕ್ರಮದಲ್ಲಿ ಬ್ರಿಟಿಷ್ ಗಾಯಕ ಎಡ್ ಶೀರನ್ ಗಾಝಾ ಕುರಿತು ಮಾತನಾಡಿದ್ದಾರೆ. ಗಾಝಾದಲ್ಲಿ ನಡೆಯುತ್ತಿರುವುದು ವಿನಾಶಕಾರಿ ಮತ್ತು ಸಮರ್ಥಿಸಿಕೊಳ್ಳಲಾಗದ ಸಂಗತಿ ಎಂದು ಅವರು ಫಿಲಿಡೆಲ್ಫಿಯಾದಲ್ಲಿ ಹೇಳಿದ್ದಾರೆ.
“ನಾಗರಿಕರು, ವಿಶೇಷವಾಗಿ ಮಕ್ಕಳ ಜೀವ ಹಾನಿ ಬಗ್ಗೆ ನನ್ನ ಹೃದಯ ಒಡೆದು ಹೋಗಿದೆ. ಸಂಗೀತ ಮತ್ತು ಕಾರ್ಯಕ್ರಮಗಳು ರಾಜಕೀಯಕ್ಕಿಂತ ಏಕತೆ ಮತ್ತು ಮಾನವೀಯತೆಯನ್ನು ಪ್ರತಿಬಿಂಬಿಸಬೇಕು ಎಂಬುದು ನನ್ನ ಆಶಯ” ಎಂದು ಅವರು ಹೇಳಿದರು.
ಕ್ರೀಡಾಂಗಣದ ಹೊರಗೆ ಪ್ರತಿಭಟನಾಕಾರರ ಸಣ್ಣ ಗುಂಪೊಂದು ಘೋಷಣೆಗಳನ್ನು ಕೂಗುತ್ತಾ ಸಂಗೀತ ಕಛೇರಿಗೆ ಆಗಮಿಸಿದವರನ್ನು ಸ್ವಾಗತಿಸಿತು. ಪ್ರತಿಭಟನಾಕಾರರು ಫೆಲೆಸ್ತೀನ್ ಧ್ವಜಗಳನ್ನು ಬೀಸುತ್ತಾ ಫ್ರೀ, ಫ್ರೀ ಫೆಲೆಸ್ತೀನ್ ಘೋಷಣೆಗಳನ್ನು ಕೂಗಿದರು.
ಫೆಲೆಸ್ತೀನ್ ಪರ ಹೇಳಿಕೆಗಳನ್ನು ನೀಡಿದ್ದ ರ್ಯಾಪರ್ ಮ್ಯಾಕಲ್ಮೋರ್ ಅವರನ್ನು ಎಡ್ ಶೀರನ್ ಅವರ ಅಮೆರಿಕ ಪ್ರವಾಸದಿಂದ ಕೈಬಿಡಲಾಗಿತ್ತು. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ವಿವಾದದ ಬೆನ್ನಲ್ಲೇ ಪ್ರತಿಕ್ರಿಯಿಸಿದ ಶೀರನ್, ಮ್ಯಾಕಲ್ಮೋರ್ ಅವರನ್ನು ಪ್ರವಾಸದಿಂದ ಕೈಬಿಡುವ ವಿಚಾರದಲ್ಲಿ ಕಾರ್ಯಕ್ರಮ ಸ್ಥಳಗಳ ಆಡಳಿತ ಮಂಡಳಿಗಳೊಂದಿಗೆ ವಾರವಿಡೀ ಸುದೀರ್ಘವಾಗಿ ಮಾತುಕತೆ ನಡೆಸಿದ್ದಾಗಿ ಹೇಳಿದ್ದಾರೆ. ಆದರೆ, ಅಂತಿಮವಾಗಿ ಪ್ರವಾಸ ಆಯೋಜಕರಾದ ಮೆಸ್ಸಿನಾ ಟೂರಿಂಗ್ ಗ್ರೂಪ್ ಮ್ಯಾಕಲ್ಮೋರ್ ಅವರನ್ನು ಕೈಬಿಡುವ ನಿರ್ಧಾರ ತೆಗೆದುಕೊಂಡಿತು ಎಂದಿದ್ದರು.
ಮ್ಯಾಕ್ಲೆಮೋರ್ ಅವರನ್ನು ಕಾರ್ಯಕ್ರಮದಿಂದ ಕೈಬಿಡುವ ನಿರ್ಧಾರದ ಹಿಂದೆ ತಾನು ಇರಲಿಲ್ಲ ಎಂದು ಶೀರನ್ ಅವರು ಸ್ಪಷ್ಟಪಡಿಸಿದ್ದಾರೆ. ಬದಲಾಗಿ, ಈ ನಿರ್ಧಾರಕ್ಕೆ ಆಯೋಜಕರನ್ನೇ ಹೊಣೆಗಾರರನ್ನಾಗಿ ಮಾಡಿದ್ದಾರೆ.
ಶನಿವಾರ ಸಂಗೀತ ಕಛೇರಿ ಆರಂಭದಲ್ಲಿ ವೇದಿಕೆಯ ಮೇಲೆ ಮಾತನಾಡಿದ ಶೀರನ್, “ನಾನು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಯಿತು. ನಾನು ತಪ್ಪುಗಳನ್ನು ಮಾಡುತ್ತಿದ್ದೇನೆ. ಅದಕ್ಕಾಗಿ ನನಗೆ ತುಂಬಾ ವಿಷಾದವಿದೆ. ನಾನು ಅಭಿಮಾನಿಗಳನ್ನು ನಿರಾಶೆಗೊಳಿಸಲು ಬಯಸುವುದಿಲ್ಲ. ನಾನು ಎಂದಿಗೂ ಹೋರಾಟದ ಸಂಗೀತಗಾರನಾಗಲು ಬಯಸಿರಲಿಲ್ಲ. ಆದರೆ ಇದು ವಾಕ್ ಸ್ವಾತಂತ್ರ್ಯ ಮತ್ತು ಭೂಮಿಯ ಮೇಲಿನ ಅತ್ಯಂತ ಸಂಕೀರ್ಣವಾದ ರಾಜಕೀಯ ವಿಷಯದ ಬಗ್ಗೆ ಒಂದು ಪ್ರಮುಖ ಮತ್ತು ಭಾವೋದ್ರಿಕ್ತ ವಾದದ ಮಧ್ಯದಲ್ಲಿ ನನ್ನನ್ನು ಇರಿಸಿದೆ ಎಂದು ಹೇಳಿದರು.
"ಅಕ್ಟೋಬರ್ 7, 2023ರಂದು ಇಸ್ರೇಲ್ ಮೇಲೆ ನಡೆದ ದಾಳಿಗಳು ಭಯಾನಕವಾಗಿದ್ದವು. ಆದರೆ, ಗಾಝಾದ ಪರಿಸ್ಥಿತಿ ದುರಂತಮಯ ಮತ್ತು ಸಮರ್ಥಿಸಲಾಗದು, ವಿನಾಶದ ಪ್ರಮಾಣ ಹಾಗೂ ನಾಗರಿಕರ, ವಿಶೇಷವಾಗಿ ಮಕ್ಕಳ ಪ್ರಾಣ ಹಾನಿ ನನ್ನ ಹೃದಯವನ್ನು ಒಡೆದುಹಾಕಿದೆ,” ಎಂದು ಶೀರನ್ ಹೇಳಿದರು.






