"ಫೆಲೆಸ್ತೀನ್ ಪರ ಧ್ವನಿ ಎತ್ತುವವರನ್ನು ಮೌನಗೊಳಿಸುವುದು ಒಪ್ಪಲಾಗದು": ಮ್ಯಾಕಲ್ಮೋರ್ ಅವರನ್ನು ಕೈಬಿಟ್ಟ ಬೆನ್ನಲ್ಲೇ ಎಡ್ ಶೀರನ್ ಪ್ರವಾಸಕ್ಕೆ ಕಲಾವಿದರ ಗುಡ್ಬೈ
ಫಿನಿಯಾಸ್, ಆರನ್ ರೋವ್, ಲುಕಾಸ್ ಗ್ರಹಾಂ, ಬಿಯೋಗಾ ನಿರ್ಗಮನ

Photo: Instagram/Ed Sheeran
ಹೊಸದಿಲ್ಲಿ: ಫೆಲೆಸ್ತೀನ್ ಪರ ಹೇಳಿಕೆಗಳನ್ನು ನೀಡಿದ್ದ ರ್ಯಾಪರ್ ಮ್ಯಾಕಲ್ಮೋರ್ ಅವರನ್ನು ಎಡ್ ಶೀರನ್ ಅವರ ಅಮೆರಿಕ ಪ್ರವಾಸದಿಂದ ಕೈಬಿಟ್ಟ ಬೆನ್ನಲ್ಲೇ, ಪ್ರವಾಸದಲ್ಲಿ ಮುಖ್ಯ ಕಲಾವಿದರಾದ ಶೀರನ್ ಅವರಿಗೂ ಮುನ್ನ ಪ್ರದರ್ಶನ ನೀಡುತ್ತಿದ್ದ (ಸಪೋರ್ಟ್ ಆಕ್ಟ್) ಉಳಿದ ಕಲಾವಿದರು ಪ್ರವಾಸದಿಂದ ಹೊರನಡೆಯುವುದಾಗಿ ಘೋಷಿಸಿದ್ದಾರೆ.
ಪಾಪ್ ತಾರೆ ಬಿಲ್ಲಿ ಐಲಿಶ್ ಅವರ ಸಹೋದರ ಫಿನಿಯಾಸ್, ಐರಿಶ್ ಗಾಯಕ–ಗೀತರಚನೆಕಾರ ಆರನ್ ರೋವ್, ಡ್ಯಾನಿಶ್ ಬ್ಯಾಂಡ್ ಲುಕಾಸ್ ಗ್ರಹಾಂ ಮತ್ತು ಐರಿಶ್ ಜಾನಪದ ಸಂಗೀತ ತಂಡ ಬಿಯೋಗಾ ಪ್ರವಾಸದಿಂದ ಹಿಂದೆ ಸರಿದಿವೆ.
‘ದಮನಿತರ ಪರವಾಗಿ ಧ್ವನಿ ಎತ್ತುವ ಕಲಾವಿದರನ್ನು ಮೌನಗೊಳಿಸಬಾರದು’ ಎಂದು ಫಿನಿಯಾಸ್ ಹೇಳಿದ್ದಾರೆ.
‘ಯುದ್ಧ, ನಾಗರಿಕರ ಹತ್ಯೆ ಮತ್ತು ಬೆಳೆದು ದೊಡ್ಡವರಾಗಲು ಅರ್ಹರಾಗಿರುವ ಮಕ್ಕಳ ಬಗ್ಗೆ ನಾವು ಮಾತನಾಡಲು ಸಾಧ್ಯವಾಗಬೇಕು. ಅವರು ಎಲ್ಲಿಯೇ ವಾಸಿಸುತ್ತಿರಲಿ ಅಥವಾ ಅವರ ಮೇಲೆ ಯಾವುದೇ ಧ್ವಜ ಹಾರಾಡುತ್ತಿರಲಿ’ ಎಂದು ಲುಕಾಸ್ ಗ್ರಹಾಂ ಇನ್ಸ್ಟಾಗ್ರಾಮ್ ನಲ್ಲಿ ತಿಳಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಶೀರನ್ ಅವರೊಂದಿಗೆ ಪ್ರದರ್ಶನ ನೀಡಿದ್ದ ಹಾಗೂ ಜೂನ್ ನಲ್ಲಿ ಅಮೆರಿಕ ಪ್ರವಾಸದಲ್ಲೂ ಸಪೋರ್ಟ್ ಆಕ್ಟ್ ಆಗಿ ಮುಂದುವರಿದಿದ್ದ ಆರನ್ ರೋವ್, ಹೊರನಡೆಯುವ ನಿರ್ಧಾರವನ್ನು ‘ಹಗುರವಾಗಿ ತೆಗೆದುಕೊಂಡಿಲ್ಲ’ ಎಂದಿದ್ದಾರೆ.
‘ಎಡ್ ನನಗೆ ಸ್ನೇಹಿತರಾಗಿದ್ದಾರೆ ಮತ್ತು ನನ್ನ ಜೀವನವನ್ನೇ ಬದಲಾಯಿಸಿದ್ದಾರೆ. ಇದಕ್ಕಾಗಿ ಅವರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು’ ಎಂದು ರೋವ್ ಹೇಳಿದ್ದಾರೆ.
ಪ್ರತಿರಾತ್ರಿ ಶೀರನ್ ಅವರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಿದ್ದ ಬಿಯೋಗಾ, ‘ಸಂಗೀತಗಾರರಾಗಿ ಇಷ್ಟು ದೊಡ್ಡ ಜನಸಮೂಹದ ಮುಂದೆ ಪ್ರತಿರಾತ್ರಿ ಪ್ರದರ್ಶನ ನೀಡುವುದು ಕನಸಿನಂತಹದ್ದು. ಆದರೆ ಫೆಲೆಸ್ತೀನ್ ಪರವಾಗಿ ಧ್ವನಿ ಎತ್ತುವವರನ್ನು ಮೌನಗೊಳಿಸುವ ಸ್ಥಳಗಳಲ್ಲಿ ಪ್ರದರ್ಶನ ನೀಡುವುದು ನಮಗೆ ಸ್ವೀಕಾರಾರ್ಹವಲ್ಲ’ ಎಂದು ಹೇಳಿದೆ.
ಈ ಬೆಳವಣಿಗೆಗೂ ಮುನ್ನ ಶೀರನ್ ಗಾಝಾ ಕುರಿತು ಸಾರ್ವಜನಿಕ ಚರ್ಚೆಯಲ್ಲಿ ಭಾಗಿಯಾಗುವುದಿಲ್ಲ ಎಂದು ಹೇಳಿದ್ದರು. ಮ್ಯಾಕಲ್ಮೋರ್ ಅವರನ್ನು ಪ್ರವಾಸದಿಂದ ಕೈಬಿಡುವ ನಿರ್ಧಾರ ತಮ್ಮದಲ್ಲ ಎಂದೂ ಸ್ಪಷ್ಟಪಡಿಸಿದ್ದರು.
‘ಮ್ಯಾಕಲ್ಮೋರ್ ಅವರನ್ನು ಪ್ರವಾಸದಿಂದ ಕೈಬಿಡುವ ನಿರ್ಧಾರ ಕಾರ್ಯಕ್ರಮ ಆಯೋಜಕರದ್ದು, ನನ್ನದಲ್ಲ’ ಎಂದು ಶೀರನ್ ಇನ್ಸ್ಟಾಗ್ರಾಮ್ನಲ್ಲಿ ತಿಳಿಸಿದ್ದಾರೆ.
‘ಕಾರ್ಯಕ್ರಮಕ್ಕಾಗಿ ಯೋಜನೆ ರೂಪಿಸಿರುವ ಅಭಿಮಾನಿಗಳಿಗೆ ನಾನು ಎಂದಿಗೂ ನಿರಾಸೆ ಉಂಟುಮಾಡುವುದಿಲ್ಲ. ಕೆಲಸ ಮತ್ತು ಜೀವನೋಪಾಯಕ್ಕಾಗಿ ನನ್ನನ್ನು ಅವಲಂಬಿಸಿರುವ ಪ್ರವಾಸದ ಸಿಬ್ಬಂದಿ, ಇತರ ಸಪೋರ್ಟ್ ಕಲಾವಿದರು ಮತ್ತು ಸಂಗೀತಗಾರರನ್ನು ಕೂಡ ಕೈಬಿಡುವುದಿಲ್ಲ’ ಎಂದು ಹೇಳಿದ್ದಾರೆ.
ಶೀರನ್ ಶನಿವಾರ ಫಿಲಡೆಲ್ಫಿಯಾದ ಲಿಂಕನ್ ಫೈನಾನ್ಶಿಯಲ್ ಫೀಲ್ಡ್ ನಲ್ಲಿ ಮುಂದಿನ ಪ್ರದರ್ಶನ ನೀಡಲಿದ್ದಾರೆ. ಅವರ ‘ಲೂಪ್’ ಪ್ರವಾಸದ ವೆಬ್ಸೈಟ್ ಇನ್ನೂ ಅಪ್ಡೇಟ್ ಆಗಿಲ್ಲ. ಲುಕಾಸ್ ಗ್ರಹಾಂ ಮತ್ತು ಆರನ್ ರೋವ್ ಅವರ ಹೆಸರುಗಳು ವಿಶೇಷ ಅತಿಥಿಗಳ ಪಟ್ಟಿಯಲ್ಲಿ ಇನ್ನೂ ಇವೆ.
‘ಮ್ಯಾಕಲ್ಮೋರ್ ನಿರ್ಧಾರ ಆಯೋಜಕರದ್ದು’
ಮ್ಯಾಕಲ್ಮೋರ್ ಅವರನ್ನು ಪ್ರವಾಸದಿಂದ ಕೈಬಿಡುವ ವಿಚಾರದಲ್ಲಿ ಕಾರ್ಯಕ್ರಮ ಸ್ಥಳಗಳ ಆಡಳಿತ ಮಂಡಳಿಗಳೊಂದಿಗೆ ವಾರವಿಡೀ ಸುದೀರ್ಘವಾಗಿ ಮಾತುಕತೆ ನಡೆಸಿದ್ದಾಗಿ ಶೀರನ್ ಹೇಳಿದ್ದಾರೆ. ಆದರೆ, ಅಂತಿಮವಾಗಿ ಪ್ರವಾಸ ಆಯೋಜಕರಾದ ಮೆಸ್ಸಿನಾ ಟೂರಿಂಗ್ ಗ್ರೂಪ್ ಮ್ಯಾಕಲ್ಮೋರ್ ಅವರನ್ನು ಕೈಬಿಡುವ ನಿರ್ಧಾರ ತೆಗೆದುಕೊಂಡಿತು ಎಂದಿದ್ದಾರೆ.
ತಮ್ಮ ಹಾಗೂ ಮ್ಯಾಕಲ್ಮೋರ್ ಅವರ ನಿಲುವಿನ ನಡುವಿನ ವ್ಯತ್ಯಾಸವನ್ನೂ ಶೀರನ್ ವಿವರಿಸಿದ್ದಾರೆ.
‘ಇಸ್ರೇಲ್–ಫೆಲೆಸ್ತೀನ್ ಸಂಘರ್ಷದಿಂದ ನನಗೆ ಆಘಾತವಾಗಿದೆ. ಎರಡೂ ಕಡೆಗಳಲ್ಲಿನ ನೋವು ಮತ್ತು ಸಂಕಟ ಮಾನವೀಯ ದುರಂತ’ ಎಂದು ಅವರು ಹೇಳಿದ್ದಾರೆ.
‘ನಾನು ಇದರಲ್ಲಿ ಭಾಗಿದಾರನಲ್ಲ. ಈ ವಿನಾಶಕಾರಿ ಸಂಘರ್ಷದ ಕುರಿತು ನನಗೆ ವೈಯಕ್ತಿಕ ಅಭಿಪ್ರಾಯಗಳಿವೆ. ನಾನು ಸಾರ್ವಜನಿಕವಾಗಿ ಮಾತನಾಡದಿರುವುದಕ್ಕೆ ನನಗೆ ಅಭಿಪ್ರಾಯಗಳಿಲ್ಲ ಅಥವಾ ಇದರ ಬಗ್ಗೆ ಕಾಳಜಿಯಿಲ್ಲ ಎಂಬ ಅರ್ಥವಲ್ಲ. ನನ್ನದೇ ರೀತಿಯಲ್ಲಿ ಸಂಬಂಧಿತ ಉದ್ದೇಶಗಳನ್ನು ಬೆಂಬಲಿಸುವುದಿಲ್ಲ ಎಂದೂ ಇದರ ಅರ್ಥವಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
‘ರಾಜಕೀಯಕ್ಕಾಗಿ ನನ್ನ ವೃತ್ತಿಪರ ವೇದಿಕೆಯನ್ನು ಬಳಸದಿರುವುದಕ್ಕೆ ಒಂದು ಕಾರಣವಿದೆ. ನನ್ನ ಪ್ರೇಕ್ಷಕರಲ್ಲಿ ಎಲ್ಲ ಹಿನ್ನೆಲೆಯ ಯುವಜನರು ಹಾಗೂ ಅನೇಕ ಬಾರಿ ಮಕ್ಕಳೂ ಇರುತ್ತಾರೆ. ನನ್ನ ಕಾರ್ಯಕ್ರಮಗಳಿಗೆ ಬರುವವರು ರಾಜಕೀಯ ವೇದಿಕೆಯನ್ನು ನಿರೀಕ್ಷಿಸುವುದಿಲ್ಲ’ ಎಂದು ಶೀರನ್ ಹೇಳಿದ್ದಾರೆ.
ತಾನು ನಂಬಿದ ವಿಷಯಕ್ಕಾಗಿ ಧ್ವನಿ ಎತ್ತುವ ಮ್ಯಾಕಲ್ಮೋರ್ ಅವರ ದೃಢ ನಿಲುವನ್ನು ಗೌರವಿಸುವುದಾಗಿ ಅವರು ಹೇಳಿದ್ದಾರೆ.
‘ಒಂದೇ ಗುರಿಯಾದ ಶಾಂತಿಯನ್ನು ತಲುಪಲು ವಿವಿಧ ಮಾರ್ಗಗಳಿರಬಹುದು. ನನ್ನ ಖ್ಯಾತಿ ಮತ್ತು ವೇದಿಕೆಯನ್ನು ಸುರಕ್ಷತೆ ಹಾಗೂ ಆಶ್ರಯದ ತಾಣವನ್ನಾಗಿ ಬಳಸಲು, ರಾಜತಾಂತ್ರಿಕತೆಯನ್ನು ಕಾಪಾಡಿಕೊಳ್ಳಲು ಮತ್ತು ಸಂವಾದಗಳನ್ನು ಮುಕ್ತವಾಗಿರಿಸಲು ಬಯಸುತ್ತೇನೆ. ಕೇವಲ ಜೋರಾಗಿ ಕೂಗಾಡುವುದರ ಮೇಲೆ ಗಮನಹರಿಸಿದರೆ ಏನೂ ಬದಲಾಗುವುದಿಲ್ಲ. ಬದಲಾವಣೆಗಾಗಿ ಧ್ವನಿ ಎತ್ತಲು ವಿವಿಧ ವಿಧಾನಗಳಿವೆ’ ಎಂದು ಶೀರನ್ ಹೇಳಿದ್ದಾರೆ.
ಸ್ವಂತ ಸೆಟ್ಲಿಸ್ಟ್ ಗೆ ಅವಕಾಶ:
ತಮ್ಮ ಎಲ್ಲ ಸಪೋರ್ಟ್ ಆಕ್ಟ್ ಕಲಾವಿದರಂತೆ ಮ್ಯಾಕಲ್ಮೋರ್ ಅವರಿಗೂ ತಮ್ಮದೇ ಹಾಡುಗಳ ಸೆಟ್ಲಿಸ್ಟ್ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು ಎಂದು ಶೀರನ್ ತಿಳಿಸಿದ್ದಾರೆ.
ಮ್ಯಾಕಲ್ಮೋರ್ ಅವರನ್ನು ಕೈಬಿಟ್ಟ ನಿರ್ಧಾರ ತಮ್ಮದಲ್ಲ ಎಂದು ಶೀರನ್ ಸ್ಪಷ್ಟಪಡಿಸಿದರೂ, ಅವರ ಹೇಳಿಕೆಯಿಂದ ಇತರ ಸಪೋರ್ಟ್ ಕಲಾವಿದರು ಸಮಾಧಾನಗೊಂಡಿಲ್ಲ. ಬದಲಾಗಿ, ಅವರೇ ಪ್ರವಾಸದಿಂದ ಹೊರನಡೆಯುವ ನಿರ್ಧಾರ ಪ್ರಕಟಿಸಿದ್ದಾರೆ.
ಮ್ಯಾಕಲ್ಮೋರ್ ಅವರ ಹೇಳಿಕೆಗಳಿಂದ ಉಂಟಾದ ವಿವಾದ ಸೆಪ್ಟೆಂಬರ್ 4ರಂದು ನ್ಯೂಜೆರ್ಸಿಯ ಮೆಟ್ಲೈಫ್ ಸ್ಟೇಡಿಯಂನಲ್ಲಿ ನಡೆದ ಶೀರನ್ ಅವರ ಸಂಗೀತ ಕಚೇರಿಯಿಂದ ಆರಂಭವಾಯಿತು.
ಮ್ಯಾಕಲ್ಮೋರ್ ಅವರ ನಿಜವಾದ ಹೆಸರು ಬೆಂಜಮಿನ್ ಹ್ಯಾಗರ್ಟಿ. ಕಾರ್ಯಕ್ರಮದಲ್ಲಿ ಅವರು, ‘ನಾನು ಈ ಪ್ರವಾಸವನ್ನು ಮಾಡಲು ಬಯಸಿದ್ದಕ್ಕೆ ಒಂದು ದೊಡ್ಡ ಕಾರಣವೆಂದರೆ, ಈ ರೀತಿಯ ಕ್ರೀಡಾಂಗಣಗಳಲ್ಲಿ ನಿಂತು ನನ್ನ ಹೃದಯಕ್ಕೆ ತುಂಬಾ ಪ್ರಿಯವಾದ ಎರಡು ಪದಗಳನ್ನು ಹೇಳಬಹುದು– ಫ್ರೀ ಫೆಲೆಸ್ತೀನ್’ ಎಂದು ಪ್ರೇಕ್ಷಕರಿಗೆ ಹೇಳಿದ್ದರು.
ಬಳಿಕ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಫೆಲೆಸ್ತೀನ್ ಪರ ಪ್ರತಿಭಟನಾಕಾರರಿಗೆ ಸಮರ್ಪಿಸಿದ ‘ಹಿಂಡ್ಸ್ ಹಾಲ್’ ಹಾಡನ್ನು ಹಾಡಿದರು. ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ಕ್ರಮವನ್ನು ಖಂಡಿಸುವ ಈ ಹಾಡಿನ ಪ್ರದರ್ಶನದ ವೇಳೆ ಗಾಝಾದಲ್ಲಿನ ವಿನಾಶದ ವೀಡಿಯೊ ದೃಶ್ಯಗಳನ್ನು ದೊಡ್ಡ ಪರದೆಯಲ್ಲಿ ಪ್ರದರ್ಶಿಸಲಾಯಿತು.
ಪ್ರೇಕ್ಷಕರ ಒಂದು ಭಾಗ ಅವರನ್ನು ಹುರಿದುಂಬಿಸಿತು. ಆದರೆ, ಆನ್ಲೈನ್ನಲ್ಲಿ ತಕ್ಷಣವೇ ಟೀಕೆಗಳು ವ್ಯಕ್ತವಾದವು.
ಇಸ್ರೇಲಿ ಅಮೆರಿಕನ್ ಕೌನ್ಸಿಲ್ ಮ್ಯಾಕಲ್ಮೋರ್ ಅವರನ್ನು ಪ್ರವಾಸದಿಂದ ಕೈಬಿಡುವಂತೆ ಒತ್ತಾಯಿಸಿ ಅರ್ಜಿ ಆರಂಭಿಸಿತು. ‘ಸ್ಟಾಪ್ ಆಂಟಿಸೆಮಿಟಿಸಂ’ ಎಂಬ ಪ್ರಚಾರ ಗುಂಪು, ಮ್ಯಾಕಲ್ಮೋರ್ ಸಂಗೀತ ಅಭಿಮಾನಿಗಳನ್ನು ಪ್ರಚಾರಕ್ಕಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿತು. ಪಾಪ್ ತಾರೆ ಪಿಂಕ್ ಈ ಆರೋಪವನ್ನು ಇನ್ಸ್ಟಾಗ್ರಾಮ್ನಲ್ಲಿ ಮರುಹಂಚಿಕೊಂಡಿದ್ದರು.
ಮರುದಿನ ರಾತ್ರಿ ಮ್ಯಾಕಲ್ಮೋರ್ ಮತ್ತೆ ಅದೇ ವೇದಿಕೆಗೆ ಮರಳಿದರು. ಈ ವೇಳೆ ಪ್ರೇಕ್ಷಕರಲ್ಲಿದ್ದ ತಮ್ಮ ‘ಯಹೂದಿ ಸಹೋದರ–ಸಹೋದರಿಯರನ್ನು’ ಉದ್ದೇಶಿಸಿ ಮಾತನಾಡಿದರು.
‘ಇಸ್ರೇಲ್ನ ಟೀಕೆ, ವರ್ಣಭೇದ ನೀತಿಯ ಟೀಕೆ, ನರಮೇಧದ ವಿರುದ್ಧ ಇರುವುದು ಯಾವುದೇ ರೀತಿಯಲ್ಲೂ ನಿಮ್ಮ ವಿರುದ್ಧದ ಟೀಕೆಯಲ್ಲ’ ಎಂದು ಅವರು ಹೇಳಿದರು.






