ಹಿಂದೂ ಧಾರ್ಮಿಕ ಸಂಘಟನೆಯ ಭೇಟಿಯ ವೇಳೆ ಮಹಿಳಾ ಸಿಬ್ಬಂದಿಯನ್ನು ಬದಿಗಿಟ್ಟ ಆರೋಪ: ಐಫೆಲ್ ಟವರ್ ನಲ್ಲಿ ಸಿಬ್ಬಂದಿ ಪ್ರತಿಭಟನೆ; ಪ್ರವಾಸಿಗರಿಗೆ ನಿರ್ಬಂಧ

Photo credit : timesofindia
ಪ್ಯಾರಿಸ್ : ಬೋಚಾಸನ್ವಾಸಿ ಅಕ್ಷರ ಪುರುಷೋತ್ತಮ್ ಸ್ವಾಮಿನಾರಾಯಣ ಸಂಸ್ಥೆಗೆ (BAPS) ಸೇರಿದ ಹಿಂದೂ ಧಾರ್ಮಿಕ ಗುಂಪೊಂದು ಐಫೆಲ್ ಟವರ್ಗೆ ಭೇಟಿ ನೀಡಿದ ವೇಳೆ, ಮಹಿಳಾ ಸಿಬ್ಬಂದಿಯನ್ನು ಕೆಲಸದ ಸ್ಥಳದಿಂದ ದೂರ ಕಳುಹಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದನ್ನು ವಿರೋಧಿಸಿ ಸಿಬ್ಬಂದಿ ಮುಷ್ಕರ ನಡೆಸಿದ್ದರಿಂದ ಸೋಮವಾರ ಐಫೆಲ್ ಟವರ್ ಅನ್ನು ಪ್ರವಾಸಿಗರಿಗೆ ಮುಚ್ಚಲಾಯಿತು ಎಂದು Euronews ವರದಿ ಮಾಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ಯಾರಿಸ್ ನ ಐತಿಹಾಸಿಕ ಸ್ಮಾರಕದ ನಿರ್ವಾಹಕ ಸಂಸ್ಥೆ SETE, ಅಸಾಧಾರಣ ಸಂದರ್ಭಗಳ ಕಾರಣದಿಂದಾಗಿ ಟವರ್ ಅನ್ನು ಮುಚ್ಚಲಾಗಿದೆ ಎಂದು ತಿಳಿಸಿದೆ.
ಕೆಲವೇ ದಿನಗಳ ಹಿಂದೆ ಫ್ರಾನ್ಸ್ ನಲ್ಲಿ ಹೊಸ ದೇವಾಲಯವನ್ನು ಉದ್ಘಾಟಿಸಿದ BAPS ಹಿಂದೂ ಚಳವಳಿಗೆ ಸೇರಿದ ಸುಮಾರು 100 ಜನರು ಐಫೆಲ್ ಟವರ್ ಗೆ ಭೇಟಿ ನೀಡಿದ್ದರು. ಅದರ ಬಳಿಕ ಈ ಪ್ರತಿಭಟನೆ ನಡೆದಿದೆ.
ಈ ಮುಷ್ಕರದ ಬಗ್ಗೆ ಫ್ರೆಂಚ್ ಟಿವಿಗೆ ಪ್ರತಿಕ್ರಿಯಿಸಿದ ಕಾರ್ಮಿಕ ಸಂಘಟನೆಯ ಪ್ರತಿನಿಧಿ ಡಯೇನ್ ದವೊಯಿನ್, ಶನಿವಾರದ ಗುಂಪಿನ ಭೇಟಿಯ ವೇಳೆ ನಿಯೋಗವು ಹಾದುಹೋಗುವಾಗ ಮಹಿಳಾ ಕಾರ್ಮಿಕರನ್ನು ಅವರ ಕಾರ್ಯಸ್ಥಳಗಳಿಂದ ದೂರ ಸರಿಸಲಾಗಿತ್ತು ಎಂದು ಹೇಳಿದ್ದಾರೆ. ಲಿಂಗ ತಾರತಮ್ಯದ ಕಾರಣಕ್ಕಾಗಿ ಮಹಿಳಾ ಸಿಬ್ಬಂದಿಯನ್ನು ಕಡೆಗಣಿಸುವ, ಬದಲಾಯಿಸುವ ಮತ್ತು ಕಾಣದಂತೆ ಮಾಡುವ ವೃತ್ತಿಪರ ಸೂಚನೆಗಳನ್ನು ಐಫೆಲ್ ಟವರ್ ಉದ್ಯೋಗಿಗಳು ಖಂಡಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮಹಿಳೆಯರೊಂದಿಗಿನ ಸಂವಹನವನ್ನು ಸೀಮಿತಗೊಳಿಸುವಂತೆ ಹಿಂದೂ ನಿಯೋಗವು ಮನವಿ ಮಾಡಿತ್ತು ಎಂಬುದನ್ನು SETE ಒಪ್ಪಿಕೊಂಡಿದೆ. ಆದರೆ, ಈ ಷರತ್ತುಗಳನ್ನು ಒಪ್ಪಿಕೊಳ್ಳಬಾರದಿತ್ತು ಎಂದು ಖೇದ ವ್ಯಕ್ತಪಡಿಸಿದೆ.
ಪ್ಯಾರಿಸ್ ನಲ್ಲಿರುವ BAPS ಹಿಂದೂ ದೇವಾಲಯವು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಇದರಿಂದ ಉಂಟಾದ ಯಾವುದೇ ನೋವು ಅಥವಾ ಅನಾನುಕೂಲತೆಗಾಗಿ ಕ್ಷಮೆಯಾಚಿಸಿದೆ. ಸೋಮವಾರ ಸಂಜೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ನಮ್ಮ ನಿಯೋಗದ ಗಾತ್ರದ ಕಾರಣದಿಂದಾಗಿ ಇತರರಿಗೆ ತೊಂದರೆ ಅಥವಾ ಅನಾನುಕೂಲವಾಗುವುದನ್ನು ತಪ್ಪಿಸಲು, ಟವರ್ ನ ಸಾಮಾನ್ಯ ಆರಂಭಿಕ ಸಮಯದಲ್ಲಿ ಐಫೆಲ್ ಟವರ್ ತಂಡದೊಂದಿಗೆ ಸೇರಿ ಈ ಭೇಟಿಯನ್ನು ಆಯೋಜಿಸಲಾಗಿತ್ತು ಎಂದು ಹೇಳಿದೆ.
"ನಮ್ಮ ಅರಿವಿಗೆ ಬಂದ ಮಟ್ಟಿಗೆ, ಯಾವುದೇ ಹಂತದಲ್ಲೂ ಯಾರೊಬ್ಬರಿಗೂ ಐಫೆಲ್ ಟವರ್ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿಲ್ಲ. ಪರಸ್ಪರ ಗೌರವ ಮತ್ತು ಸೇವೆಯ ಸಾರ್ವತ್ರಿಕ ಮೌಲ್ಯಗಳನ್ನು ನಾವು ನಂಬಿದ್ದೇವೆ" ಎಂದು ಅದು ತಿಳಿಸಿದೆ
ಬೋಚಾಸನ್ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ (BAPS) ಫ್ರಾನ್ಸ್ ನಲ್ಲಿ ತನ್ನ ಮೊದಲ ಪ್ರಮುಖ ಹಿಂದೂ ದೇವಾಲಯವನ್ನು ಉದ್ಘಾಟಿಸಿದ ಮರುದಿನವೇ ಈ ಘಟನೆ ನಡೆದಿದೆ.
ಫ್ರಾನ್ಸ್ ಜನಪ್ರತಿನಿಧಿಗಳಿಂದ ಖಂಡನೆ :
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ಯಾರಿಸ್ ಮೇಯರ್ ಎಮ್ಯಾನುಯೆಲ್ ಗ್ರೆಗೊಯಿರ್, ಐಫೆಲ್ ಟವರ್ ಉದ್ಯೋಗಿಗಳಲ್ಲಿನ ಆಕ್ರೋಶದ ಬಗ್ಗೆ ನನಗೆ ಅರಿವಿದೆ ಮತ್ತು ಇಂತಹ ಷರತ್ತುಗಳಿಗೆ ಒಪ್ಪಿಕೊಂಡಿರುವುದು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.
"ಇವು ನನ್ನ ಮೌಲ್ಯಗಳಲ್ಲ, ಅಥವಾ ಐಫೆಲ್ ಟವರ್ ಎತ್ತಿಹಿಡಿಯಬೇಕಾದ ಮೌಲ್ಯಗಳೂ ಅಲ್ಲ. ಅಲ್ಲಿ ಮಹಿಳೆಯರು ಮತ್ತು ಪುರುಷರು ಎಂಬ ಭೇದವಿಲ್ಲದೆ ಪ್ರತಿಯೊಬ್ಬರೂ ಮುಕ್ತವಾಗಿ ತಿರುಗಾಡಲು ಮತ್ತು ಕಾರ್ಯನಿರ್ವಹಿಸಲು ಸಾಧ್ಯವಾಗಬೇಕು," ಎಂದು ಅವರು ಬರೆದಿದ್ದಾರೆ.
ಮುಂದುವರಿದು, ಈ ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ರಾಷ್ಟ್ರೀಯ ಅಸೆಂಬ್ಲಿಯ ಅಧ್ಯಕ್ಷೆ ಯೇಲ್ ಬ್ರಾನ್-ಪಿವೆಟ್ ಕೂಡ ಈ ಘಟನೆಯನ್ನು ಖಂಡಿಸಿದ್ದಾರೆ.
"ವಿದೇಶಿ ಸಂದರ್ಶಕರ ಬೇಡಿಕೆಗಳನ್ನು ಪೂರೈಸಲು ಮಹಿಳೆಯರನ್ನು ಪಕ್ಕಕ್ಕೆ ಸರಿಯುವಂತೆ ಹೇಳುವುದನ್ನು ನಾನು ಒಪ್ಪುವುದಿಲ್ಲ. ಇತರರನ್ನು ಸ್ವಾಗತಿಸುವುದು ಎಂದರೆ ನಮ್ಮ ಮೌಲ್ಯಗಳನ್ನು ಬಿಟ್ಟುಕೊಡುವುದಲ್ಲ. ಫ್ರಾನ್ಸ್ ನಲ್ಲಿ ಮಹಿಳೆಯರು ಸಾರ್ವಜನಿಕ ಜೀವನದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಅಲ್ಲಿ ಅದೃಶ್ಯರಾಗುವಂತೆ ಅವರಿಗೆ ಯಾರೂ ಹೇಳುವುದಿಲ್ಲ," ಎಂದು ಅವರು ಹೇಳಿದ್ದಾರೆ.






