ಇಸ್ರೇಲಿ ಅರಬ್ ಅಲ್ಪಸಂಖ್ಯಾತರ ವಿರುದ್ಧ ಜನಾಂಗೀಯ ದ್ವೇಷಕ್ಕೆ ನೆತನ್ಯಾಹು ಕುಮ್ಮಕ್ಕು: ಐಸೆನ್ಕೋಟ್ ಆರೋಪ

ಗಾಡಿ ಐಸೆನ್ಕೋಟ್ , ಬೆಂಜಮಿನ್ ನೆತನ್ಯಾಹು | Photo Credit ; AP
ಜೆರುಸಲೇಂ: ಇಸ್ರೇಲ್ನ ಹಂಗಾಮಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ದೇಶದ ಅಲ್ಪಸಂಖ್ಯಾತ ಅರಬ್ ಸಮುದಾಯದ ವಿರುದ್ಧ ಜನಾಂಗೀಯ ದ್ವೇಷದ ಅಭಿಯಾನಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆಂದು ಇಸ್ರೇಲ್ ಪ್ರಧಾನಿ ಹುದ್ದೆಯ ಆಕಾಂಕ್ಷಿ ಗಾಡಿ ಐಸೆನ್ಕೋಟ್ ಆಪಾದಿಸಿದ್ದಾರೆ. ಇಸ್ರೇಲ್ನ ಅರಬ್ ಸಮುದಾಯದ ಸಂಸದರನ್ನು ಹಮಾಸ್ ಜೊತೆ ನಂಟು ಕಲ್ಪಿಸುವ ಮೂಲಕ ಅವರನ್ನು ಸಂಸತ್ ಸದಸ್ಯತ್ವದಿಂದ ಅಮಾನ್ಯಗೊಳಿಸಬೇಕೆಂಬ ನೆತನ್ಯಾಹು ಅಗ್ರಹಿಸಿರುವುದನ್ನು ಖಂಡಿಸಿದ್ದಾರೆ. ನೆತನ್ಯಾಹು ಅವರು ರಾಜಕೀಯ ಲಾಭಕ್ಕಾಗಿ ದೇಶದ ಶೇ.20ರಷ್ಟಿರುವ ಅರಬ್ ಇಸ್ರೇಲಿಗಳ ವಿರುದ್ಧ ಜನಾಂಗೀಯವಾದಿ ಹಾಗೂ ಅಕ್ರಮಣಕಾರಿ ಅಪಪ್ರಚಾರದಲ್ಲಿ ತೊಡಗಿದ್ದಾರೆಂದು ಅವರು ಆಪಾದಿಸಿದ್ದಾರೆ.
ಐಸೆನ್ಕೋಟ್ ಅವರ ಈ ನಿಲುವು, ಪ್ರಮುಖ ಯೆಹೂದಿ ನಾಯಕರೊಬ್ಬರು ಅರಬ್ ಇಸ್ರೇಲಿಗಳ ಪರವಾಗಿ ದೃಢವಾಗಿ ನಿಂತಿರುವುದು ಅಪರೂಪದ ಬೆಳವಣಿಗೆಯೆಂದು ಅಂತಾರಾಷ್ಟ್ರೀಯ ವಿದ್ಯಮಾನಗಳ ವಿಶ್ಲೇಷಕರು ಅಭಿಪ್ರಾಯಿಸಿದರು.
ಕಳೆದ ತಿಂಗಳು ನಡೆದ ಇಸ್ರೇಲ್ನ ಸಾರ್ವತ್ರಿಕ ಚುನಾವಣೆಯಲ್ಲಿ 120 ಸದಸ್ಯ ಬಲದ ಸೆನೆಟ್ನಲ್ಲಿ ಆರ್ಎಎಎಂ ಸೇರಿದಂತೆ ಅರಬ್ ಇಸ್ರೇಲಿ ಪಕ್ಷಗಳು ಒಟ್ಟು 19 ಸ್ಥಾನಗಳನ್ನು ಗೆದ್ದುಕೊಂಡಿವೆ. ಐಸೆನ್ಕೋಟ್ ಅವರ ಸರಕಾರ ರಚನೆಯ ಪ್ರಯತ್ನದಲ್ಲಿ ಕಿಂಗ್ಮೇಕರ್ ಆಗಿ ಹೊರಹೊಮ್ಮಿವೆ. ಅರಬ್ ಇಸ್ರೇಲಿ ನಾಗರಿಕರು ಈ ದೇಶದ ಅವಿಭಾಜ್ಯ ಅಂಗವಾಗಿದ್ದು,ಅವರನ್ನು ಸಾಮೂಹಿಕವಾಗಿ ನಿಂದಿಸುವುದು ಅಥವಾ ಮೂಲೆಗುಂಪು ಮಾಡುವುದು ನಾಗರಿಕ ಬಾಧ್ಯತೆಯ ತತ್ವಗಳ ಘೋರ ಉಲ್ಲಂಘನೆಯಾಗಿದೆಯೆಂದು ಐಸೆನ್ಕೋಟ್ ತಿಳಿಸಿದ್ದಾರೆ.
2023ರಲ್ಲಿ ಅಕ್ಟೋಬರ್ 7ರಂದು ಇಸ್ರೇಲ್ ನಾಗರಿಕರ ಮೇಲೆ ದಾಳಿ ನಡೆಸಿದ ಹಮಾಸ್ ಅನ್ನು ಭಯೋತ್ಪಾದಕ ಗುಂಪೆಂದು ಬಣ್ಣಿಸಲು ಅರಬ್ ಪಕ್ಷಗಳು ನಿರಾಕರಿಸುತ್ತಿವೆ ಎಂದು ನೆತನ್ಯಾಹು ಹಾಗೂ ಅವರ ಮಿತ್ರಪಕ್ಷಗಳು ಪದೇ ಪದೇ ಟೀಕಿಸುತ್ತವೆ ಹಾಗೂ ಹಾಲಿ ಚುನಾವಣೆಯಲ್ಲಿ ಅರಬ್ ಪಕ್ಷಗಳು ಅಕ್ರಮವೆಸಗಿವೆಯೆಂದು ಆಪಾದಿಸಿವೆೆ. ಕಳೆದ ವಾರ ನೆತನ್ಯಾಹು ಮಾಡಿದ ಭಾಷಣದಲ್ಲಿ ‘‘ಎರಡು ಅರಬ್ ಇಸ್ರೇಲಿ ಪಕ್ಷಗಳು ಇಸ್ರೇಲ್ ಅನ್ನು ಯೆಹೂದಿ ರಾಷ್ಟ್ರವೆಂದು ಒಪ್ಪಿಕೊಳ್ಳಲು ನಿರಾಕರಿಸುತ್ತಿವೆ. ಅಲ್ಲದೆ ಅವು ರಾಷ್ಟ್ರೀಯವಾದಿ ಫೆಲೆಸ್ತೀನ್ ರಾಷ್ಟ್ರದ ಸ್ಥಾಪನೆಯನ್ನು ಬಯಸುತ್ತಿವೆ’’ ಎಂದು ಆಪಾದಿಸಿದ್ದರು. ಇಸ್ರೇಲಿ ಸಂಸದರ ಪ್ರಮಾಣವಚನ ಸಮಾರಂಭದಲ್ಲಿ ಹಂಗಾಮಿ ರಾಷ್ಟ್ರೀಯ ಭದ್ರತಾ ಸಚಿವ ಇಟಾಮರ್ ಬೆನ್ ಗ್ವಿರ್ ಅವರು, ಅರಬ್ ಇಸ್ರೇಲಿ ನಾಯಕ ಜಬರೀನ್ ಅವರನ್ನು ಹಮಾಸ್ ಬೆಂಬಲಿಗ ಎಂದು ಟೀಕಿಸಿದ್ದರು.






