ಶಾಂತಿ ಒಪ್ಪಂದಕ್ಕೂ ಮುನ್ನ ಉಕ್ರೇನ್ನಲ್ಲಿ ಚುನಾವಣೆ, ಹೊಸ ಆಡಳಿತ:
ರಶ್ಯ ಅಧ್ಯಕ್ಷ ಪುಟಿನ್ ಸಲಹೆ

ವ್ಲಾದಿಮಿರ್ ಪುಟಿನ್ | PC : PTI
ಮಾಸ್ಕೋ: ರಶ್ಯದ ಪಡೆಗಳು ಉಕ್ರೇನ್ಗಿಂತಲೂ ಕಾರ್ಯತಂತ್ರದಲ್ಲಿ ಮೇಲುಗೈ ಹೊಂದಿವೆ ಮತ್ತು ಅವರನ್ನು ಮುಗಿಸಿಬಿಡಲು ಸಮರ್ಥವಾಗಿವೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಶುಕ್ರವಾರ ಹೇಳಿದ್ದು ಉಕ್ರೇನ್ನೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವುದಕ್ಕೂ ಮುನ್ನ ಆ ದೇಶದಲ್ಲಿ ವಿಶ್ವಸಂಸ್ಥೆಯ ಆಶ್ರಯದಲ್ಲಿ ಪರಿವರ್ತನಾ ಆಡಳಿತ ರಚನೆಯಾಗಬೇಕು ಎಂದು ಸಲಹೆ ನೀಡಿದ್ದಾರೆ.
ವಾಯವ್ಯ ನಗರವಾದ ಮುರ್ಮಾಂಸ್ಕ್ನಲ್ಲಿ ಶುಕ್ರವಾರ ಮಾತನಾಡಿದ ಪುಟಿನ್ ʼಇಡೀ ಮುಂಚೂಣಿಯಲ್ಲಿ ನಮ್ಮ ಪಡೆಗಳು ಕಾರ್ಯತಂತ್ರದ ಉಪಕ್ರಮವನ್ನು ಹೊಂದಿವೆ. ಉಕ್ರೇನ್ ಪಡೆಗಳನ್ನು ಯಾವುದೇ ಕ್ಷಣದಲ್ಲಿ ನಾವು ಮುಗಿಸಿ ಬಿಡಬಹುದು ಎಂದು ವಿಶ್ವಾಸದಿಂದ ಹೇಳಬಹುದು. ಏನು ನಡೆಯುತ್ತಿದೆ ಎಂಬುದನ್ನು ಸ್ವತಃ ಉಕ್ರೇನ್ನ ಜನತೆಯೇ ಅರ್ಥ ಮಾಡಿಕೊಳ್ಳಬೇಕು' ಎಂದರು.
ಶಾಂತಿ ಒಪ್ಪಂದಕ್ಕೆ ಸಹಿ ಹಾಕುವುದಕ್ಕೂ ಮುನ್ನ ಉಕ್ರೇನ್ನಲ್ಲಿ ವಿಶ್ವಸಂಸ್ಥೆಯ ಆಶ್ರಯದಲ್ಲಿ ಪರಿವರ್ತನಾ ಸರಕಾರ ರಚನೆಯಾಗಬೇಕು. ಈ ಬಗ್ಗೆ ಅಮೆರಿಕ ಹಾಗೂ ಯುರೋಪಿಯನ್ ದೇಶಗಳ ಜತೆ, ನಮ್ಮ ಪಾಲುದಾರರು ಮತ್ತು ಸ್ನೇಹಿತರೊಂದಿಗೆ ಚರ್ಚಿಸಲಿದ್ದೇವೆ. ಪರಿವರ್ತನಾ ಸರಕಾರದ ನೇತೃತ್ವದಲ್ಲಿ ಚುನಾವಣೆ ನಡೆಯಬೇಕು ಮತ್ತು ಉಕ್ರೇನ್ ಜನರ ವಿಶ್ವಾಸ ಗಳಿಸಿದ ಸಮರ್ಥ ಸರಕಾರ ಅಧಿಕಾರಕ್ಕೆ ಬಂದರೆ ಆಗ ಶಾಂತಿ ಮಾತುಕತೆಗೆ ಒಂದು ಅರ್ಥ ಬರುತ್ತದೆ ಮತ್ತು ಶಾಂತಿ ಒಪ್ಪಂದದ ದಾಖಲೆಯೂ ಕಾನೂನುಬದ್ಧವಾಗಿರುತ್ತದೆ. ವಿಶ್ವಸಂಸ್ಥೆಯ ಚೌಕಟ್ಟಿನಡಿ ಪರಿವರ್ತನಾ ಆಡಳಿತದ ಪರಿಕಲ್ಪನೆ ಈ ಹಿಂದೆ ಹಲವು ಬಾರಿ ಬಳಕೆಯಾಗಿದೆ ಎಂದು ಪುಟಿನ್ ಪ್ರತಿಪಾದಿಸಿದ್ದಾರೆ. ಮೂರು ವರ್ಷಕ್ಕೂ ಅಧಿಕ ಸಮಯದಿಂದ ಮುಂದುವರಿದಿರುವ ಉಕ್ರೇನ್ ಯುದ್ಧವನ್ನು ಅಂತ್ಯಗೊಳಿಸುವ ಕದನ ವಿರಾಮ ಮಾತುಕತೆಗೆ ಮಧ್ಯಸ್ಥಿಕೆ ವಹಿಸಿರುವ ಅಮೆರಿಕದ ಜತೆ ರಶ್ಯ ನೇರ ಮಾತುಕತೆ ನಡೆಸುತ್ತಿದ್ದರೆ ಯುರೋಪಿಯನ್ ದೇಶಗಳು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಜತೆ ಮಾತುಕತೆ ನಡೆಸುತ್ತಿವೆ.







