ವಾಷಿಂಗ್ಟನ್ | ಇಸ್ರೇಲ್ ರಾಯಭಾರಿ ಕಚೇರಿಯ ಸಿಬ್ಬಂದಿಯನ್ನು ಹತ್ಯೆ ಮಾಡಿದ್ದ ಎಲಿಯಾಸ್ ರೊಡ್ರಿಗಸ್ ರಾಜಕೀಯ ಹಿನ್ನೆಲೆ ಹೊಂದಿದ್ದ : ವರದಿ

Photo | X
ವಾಷಿಂಗ್ಟನ್ : ಅಮೆರಿಕದ ವಾಷಿಂಗ್ಟನ್ ಡಿಸಿಯ ́ಕ್ಯಾಪಿಟಲ್ ಯಹೂದಿ ವಸ್ತುಸಂಗ್ರಹಾಲಯʼದ ಹೊರಗೆ ಇಬ್ಬರು ಇಸ್ರೇಲ್ ರಾಯಭಾರಿ ಕಚೇರಿಯ ಸಿಬ್ಬಂದಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಿದ ಆರೋಪದಲ್ಲಿ ಬಂಧಿತ ಎಲಿಯಾಸ್ ರೊಡ್ರಿಗಸ್ ರಾಜಕೀಯ ಹಿನ್ನೆಲೆ ಹೊಂದಿದ್ದಾನೆ ಎಂದು CNN ವರದಿ ತಿಳಿಸಿದೆ.
22017ರ ಗೋಫಂಡ್ ಮೀ ಫೇಜ್ನಲ್ಲಿನ ಸಾಕ್ಷ್ಯದ ಪ್ರಕಾರ, ಫೇಜ್ನಲ್ಲಿ ರೊಡ್ರಿಗಸ್ ಪೋಟೊ ಇತ್ತು. ನನಗೆ ಕೇವಲ 11 ವರ್ಷವಿದ್ದಾಗ ತಂದೆಯನ್ನು ಇರಾಕ್ಗೆ ನಿಯೋಜಿಸಲಾಗಿತ್ತು. ಇದು ರಾಜಕೀಯ ಜಾಗೃತಿಯನ್ನು ಹುಟ್ಟುಹಾಕಿತು ಮತ್ತು ಮುಂದಿನ ಪೀಳಿಗೆಯ ಅಮರಿಕನ್ನರು ಇಂತಹ ಕೃತ್ಯವನ್ನು ಎಸಗುವುದನ್ನು ತಡೆಯುವಂತೆ ಉತ್ತೇಜಿಸಿತು ಎಂದು ಆತ ಹೇಳಿರುವ ಬಗ್ಗೆ ಸಿಎನ್ಎನ್ ವರದಿ ಮಾಡಿದೆ.
ಆರ್ಮಿ ನ್ಯಾಷನಲ್ ಗಾರ್ಡ್ ಎಲಿಯಾಸ್ ರೊಡ್ರಿಗಸ್ ಗುರುತನ್ನು ದೃಢಪಡಿಸಿದೆ. ರೊಡ್ರಿಗಸ್ ತಂದೆ 2005 ರಿಂದ 2012ರವರೆಗೆ ಆರ್ಮಿ ನ್ಯಾಷನಲ್ ಗಾರ್ಡ್ ಸದಸ್ಯರಾಗಿದ್ದರು ಎಂದು ಹೇಳಿದೆ. ಅವರನ್ನು 2006ರ ಅಕ್ಟೋಬರ್ನಿಂದ 2007ರ ಸೆಪ್ಟೆಂಬರ್ರವರೆಗೆ ಇರಾಕ್ಗೆ ನಿಯೋಜಿಸಲಾಗಿತ್ತು.
2017ರಲ್ಲಿ ರಚಿಸಲಾದ ಈ ಫೇಜ್ನಲ್ಲಿ ಡೊನಾಲ್ಡ್ ಟ್ರಂಪ್ ವಿರೋಧಿ ಪ್ರತಿಭಟನೆಗೆ ರೊಡ್ರಿಗಸ್ಗೆ ಸಹಾಯ ಮಾಡುವಂತೆ ದೇಣಿಗೆ ಕೋರಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ರೊಡ್ರಿಗಸ್ ಯಾವುದೇ ಕ್ರಿಮಿನಲ್ ಹಿನ್ನೆಲೆ ಹೊಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಶಂಕಿತ ವ್ಯಕ್ತಿ ಪಾರ್ಟಿ ಫಾರ್ ಸೋಷಿಯಲಿಸಂ ಅಂಡ್ ಲಿಬರೇಶನ್(ಪಿಎಸ್ಎಲ್) ಮತ್ತು ಬ್ಲ್ಯಾಕ್ ಲೈವ್ಸ್ ಮ್ಯಾಟರ್ (ಬಿಎಲ್ಎಂ) ಆಂದೋಲನದಲ್ಲೂ ಭಾಗಿಯಾಗಿದ್ದ ಎಂದು ವರದಿಗಳು ತಿಳಿಸಿವೆ.
ದಾಳಿಯ ಬಳಿಕ ಎಕ್ಸ್ನಲ್ಲಿ ಹಂಚಿಕೊಂಡ ಪತ್ರವೂ ತನಿಖೆಯಲ್ಲಿದೆ. ರೊಡ್ರಿಗಸ್ ಸಹಿ ಮಾಡಿರುವಂತೆ ತೋರುವ ಈ ಪತ್ರವು ಗಾಝಾದಲ್ಲಿನ ಪರಿಸ್ಥಿತಿಯ ಬಗ್ಗೆ ಹಿಂಸಾತ್ಮಕವಾಗಿ ಪ್ರತಿಕಾರಕ್ಕೆ ಕರೆ ನೀಡುತ್ತದೆ.
ಮೇ 21ರಂದು ರಾತ್ರಿ 10 ಗಂಟೆ ಸುಮಾರಿಗೆ ಎಕ್ಸ್ನಲ್ಲಿ ಮಾಡಲಾದ ಪೋಸ್ಟ್ನಲ್ಲಿ, ಇಸ್ರೇಲ್ ದೌರ್ಜನ್ಯವನ್ನು ಟೀಕಿಸಲಾಗಿದೆ. ಸಶಸ್ತ್ರ ದಾಳಿಯನ್ನು ಮಾನ್ಯ ಪ್ರತಿಭಟನೆಯ ರೂಪವಾಗಿ ಕರೆ ನೀಡಲಾಗಿದೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಯಾರು ಹಂಚಿಕೊಂಡಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.
ಬುಧವಾರ ಎಲಿಯಾಸ್ ರೊಡ್ರಿಗಸ್, ಇಸ್ರೇಲ್ ರಾಯಭಾರಿ ಕಚೇರಿಯ ಸಿಬ್ಬಂದಿಗಳಾದ ಯಾರೋನ್ ಲಿಸ್ಚಿನ್ಸ್ಕಿ ಮತ್ತು ಸಾರಾ ಮಿಲ್ಗ್ರಿಮ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ. ಆ ಬಳಿಕ ಫೆಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ್ದಾನೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದರು.







