ಹೊಸ ಪಕ್ಷ ಸ್ಥಾಪನೆ ಬೇಡ; ಟ್ರಂಪ್ ಗೆ ನಿಷ್ಠರಾಗಿರಿ: ಎಲಾನ್ ಮಸ್ಕ್ ಗೆ ಅಮೆರಿಕ ಉಪಾಧ್ಯಕ್ಷರ ಎಚ್ಚರಿಕೆ

ಎಲಾನ್ ಮಸ್ಕ್ ,ಡೊನಾಲ್ಡ್ ಟ್ರಂಪ್ , ಜೆ.ಡಿ.ವ್ಯಾನ್ಸ್ PC : X \ @elonmuskmel7
ವಾಷಿಂಗ್ಟನ್, ಆ.21: ಹೊಸ ಪಕ್ಷ ಸ್ಥಾಪಿಸುವ ಬದಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ನಿಷ್ಠರಾಗಿ ರಿಪಬ್ಲಿಕನ್ ಪಕ್ಷದೊಳಗೆ ಕೆಲಸ ಮಾಡಿದರೆ ಹೆಚ್ಚು ಪ್ರಭಾವಿಯಾಗಲು ಸಾಧ್ಯ ಎಂದು ಉದ್ಯಮಿ ಎಲಾನ್ ಮಸ್ಕ್ ಗೆ ಅಮೆರಿಕ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಎಚ್ಚರಿಕೆ ನೀಡಿದ್ದಾರೆ.
ಟ್ರಂಪ್ ಅವರ ನಿಕಟ ಮಿತ್ರನಾಗಿ ಮಸ್ಕ್ ಗುರುತಿಸಿಕೊಂಡಿದ್ದರು. ಕ್ರಮೇಣ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಲ್ಬಣಿಸಿದ್ದು ತನ್ನ ಕಂಪೆನಿಗಳ ಹಿತಾಸಕ್ತಿ ರಕ್ಷಣೆಗಾಗಿ `ಅಮೆರಿಕ ಪಾರ್ಟಿ' ಎಂಬ ಹೊಸ ರಾಜಕೀಯ ಪಕ್ಷವನ್ನು ಆರಂಭಿಸುವುದಾಗಿ ಮಸ್ಕ್ ಘೋಷಿಸಿದ್ದರು.
`ರಿಪಬ್ಲಿಕನ್ ಪಕ್ಷದಲ್ಲೇ ಮುಂದುವರಿಯಿರಿ ಎಂದು ನಾನು ಎಲಾನ್ ಗೆ ಸಲಹೆ ನೀಡುತ್ತೇನೆ. ನಿಮಗೆ ನನ್ನೊಂದಿಗೆ ಅಥವಾ ಅಧ್ಯಕ್ಷರೊಂದಿಗೆ ಭಿನ್ನಾಭಿಪ್ರಾಯ ಇರಬಹುದು. ಅದನ್ನು ಪಕ್ಷದೊಳಗೇ ಬಗೆಹರಿಸಿಕೊಳ್ಳಬಹುದು. ಆದರೆ ನೀವು ಮೂರನೇ ಪಕ್ಷ ಸ್ಥಾಪಿಸಿದರೆ ಹೆಚ್ಚಿನ ವ್ಯತ್ಯಾಸವೇನೂ ಆಗುವುದಿಲ್ಲ, ದೊಡ್ಡ ಪ್ರಮಾದವಾಗುತ್ತದೆ ಅಷ್ಟೇ. ಆದರೆ ಅಧ್ಯಕ್ಷ ಟ್ರಂಪ್ ಗೆ ನಿಷ್ಠರಾಗಿದ್ದರೆ ನಿಮಗೆ ಹೆಚ್ಚಿನ ಅನುಕೂಲವಾಗುತ್ತದೆ' ಎಂದು ವ್ಯಾನ್ಸ್ ಹೇಳಿರುವುದಾಗಿ ವರದಿಯಾಗಿದೆ.





