ಟ್ರಂಪ್-ಮೋದಿ ದೂರವಾಣಿ ಸಂಭಾಷಣೆಯ ವೇಳೆ ಎಲಾನ್ ಮಸ್ಕ್ ಉಪಸ್ಥಿತಿ?; ಮೌನ ವಹಿಸಿದ ಶ್ವೇತಭವನ

ನರೇಂದ್ರ ಮೋದಿ , ಡೊನಾಲ್ಡ್ ಟ್ರಂಪ್ , ಎಲಾನ್ ಮಸ್ಕ್ | Photo Credit : PTI
ವಾಷಿಂಗ್ಟನ್, ಮಾ. 28: ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಇತ್ತೀಚಿನ ದೂರವಾಣಿ ಸಂಭಾಷಣೆ “ಫಲಪ್ರದವಾಗಿತ್ತು” ಎಂದು ಶ್ವೇತ ಭವನ ತಿಳಿಸಿದೆ. ಆದರೆ, ಈ ಮಾತುಕತೆಯ ವೇಳೆ ಎಲಾನ್ ಮಸ್ಕ್ ಉಪಸ್ಥಿತರಿದ್ದರು ಎಂಬ ವರದಿಗಳ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪಶ್ಚಿಮ ಏಶ್ಯದಲ್ಲಿ ಮುಂದುವರಿದಿರುವ ಉದ್ವಿಗ್ನತೆ ಹಾಗೂ ಜಾಗತಿಕ ತೈಲ ಸಾಗಣೆಗೆ ಅತ್ಯಂತ ಪ್ರಮುಖ ಮಾರ್ಗವಾಗಿರುವ ಹಾರ್ಮುಝ್ ಜಲಸಂಧಿ ಸುರಕ್ಷತೆ ಕುರಿತ ಆತಂಕದ ನಡುವೆಯೇ ಈ ಬೆಳವಣಿಗೆ ಸಂಭವಿಸಿದೆ. ಈ ಜಲಸಂಧಿಯಲ್ಲಿ ಯಾವುದೇ ಅಡಚಣೆ ಉಂಟಾದರೆ ಜಾಗತಿಕ ಇಂಧನ ಮಾರುಕಟ್ಟೆ ತೀವ್ರವಾಗಿ ತಲ್ಲಣಗೊಳ್ಳುವ ಸಾಧ್ಯತೆ ಇದೆ. ತೈಲ ಆಮದು ಮೇಲೆ ಅವಲಂಬಿತ ದೇಶಗಳಿಗೆ ಇದರ ಪರಿಣಾಮ ಹೆಚ್ಚು ಎನ್ನಲಾಗಿದೆ.
ಈ ಕುರಿತು IANS ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದ ಶ್ವೇತ ಭವನದ ಪತ್ರಿಕಾ ಕಾರ್ಯದರ್ಶಿ ಕರೋಲಿನ್ ಲೀವಿಟ್, “ಅಧ್ಯಕ್ಷ ಟ್ರಂಪ್ ಹಾಗೂ ಪ್ರಧಾನಿ ಮೋದಿ ನಡುವೆ ಉತ್ತಮ ಸಂಬಂಧವಿದೆ. ಇತ್ತೀಚಿನ ಮಾತುಕತೆ ಫಲಪ್ರದವಾಗಿತ್ತು,” ಎಂದು ತಿಳಿಸಿದ್ದಾರೆ. ಆದರೆ, ಮಾತುಕತೆಯ ವೇಳೆ ಎಲಾನ್ ಮಸ್ಕ್ ಉಪಸ್ಥಿತರಿದ್ದರು ಎಂಬ ನ್ಯೂಯಾರ್ಕ್ ಟೈಮ್ಸ್ ವರದಿಯನ್ನು ಅವರು ದೃಢಪಡಿಸಲೂ ಇಲ್ಲ, ತಳ್ಳಿಹಾಕಲೂ ಇಲ್ಲ.
ನ್ಯೂಯಾರ್ಕ್ ಟೈಮ್ಸ್ ವರದಿ ಪ್ರಕಾರ, ಮೋದಿ–ಟ್ರಂಪ್ ನಡುವಿನ ದೂರವಾಣಿ ಸಂಭಾಷಣೆಯ ವೇಳೆ ಎಲಾನ್ ಮಸ್ಕ್ ಹಾಜರಿದ್ದರು. ಎರಡು ರಾಷ್ಟ್ರಗಳ ನಾಯಕರ ನಡುವಿನ ಸಂವೇದನಾಶೀಲ ಮಾತುಕತೆಯಲ್ಲಿ ಖಾಸಗಿ ಉದ್ಯಮಿಯೊಬ್ಬರ ಉಪಸ್ಥಿತಿ ಅಸಹಜ ಬೆಳವಣಿಗೆ ಎಂದು ವರದಿ ಹೇಳಿದೆ.
ಸಾರ್ವಜನಿಕವಾಗಿ ಪರಸ್ಪರ ದೂರಾಗಿದ್ದ ಟ್ರಂಪ್ ಹಾಗೂ ಎಲಾನ್ ಮಸ್ಕ್ ಮತ್ತೆ ಒಟ್ಟಾಗಿದ್ದಾರೆ ಎಂಬುದನ್ನು ಎಲಾನ್ ಮಸ್ಕ್ ರ ಉಪಸ್ಥಿತಿ ಸೂಚಿಸುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.







